ತುಮಕೂರು: ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿ, ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಧನ ಸಹಾಯ ಕಡಿತ ಖಂಡಿಸಿ ಹಾಗೂ ಕಾರ್ಮಿಕರ ಸೆಸ್ ಹಣದಲ್ಲಿ ಖಾಸಗಿ ಆಸ್ಪತ್ರೆಗಳ ಮೂಲಕ ಹಮ್ಮಿಕೊಂಡಿರುವ ಆರೋಗ್ಯ ತಪಾಸಣೆ ಕಾರ್ಯಕ್ರಮಗಳನ್ನು ವಿರೋಧಿಸಿ ಫೆ.01 ರಂದು ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಗಿರೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸರಕಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ನೀಡುತ್ತಿದ್ದ ಶೈಕ್ಷಣಿಕ ಪ್ರೋತ್ಸಾಹ ಧನದ ಶೇ.75 ರಷ್ಟು ಹಣ ಕಡಿತ ಮಾಡಿದೆ, ಇದು ಅತ್ಯಂತ ಅನ್ಯಾಯದ ಕ್ರಮವಾಗಿದೆ, ಅಲ್ಲದೆ ಲಕ್ಷಾಂತರ ಅರ್ಜಿಗಳು ಶೈಕ್ಷಣಿಕ ಪ್ರೋತ್ಸಾಹ ಧನಕ್ಕಾಗಿ ಬಾಕಿ ಇವೆ, ಹಾಗಾಗಿ ಎಲ್ಲಾ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂಬುದು ಎಐಟಿಯುಸಿ ನೇತೃತ್ವದ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕ ಸಂಘದ ಒತ್ತಾಯವಾಗಿದೆ ಎಂದರು.
ಕಳೆದ ವರ್ಷ ಕಟ್ಟಡ ಮತ್ತು ಇತರೆ ನಿರ್ಮಾಣ ಕಲ್ಯಾಣ ಮಂಡಳಿಯಿಂದ ಲ್ಯಾಪ್ ಟ್ಯಾಪ್, ಟ್ಯಾಬ್, ಶಾಲಾ ಕಿಟ್, ಆರೋಗ್ಯ ತಪಾಸಣೆ ಮತ್ತು ಕಾರ್ಮಿಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ಹೆಸರಿನಲ್ಲಿ ಕಟ್ಟಡ ಕಾರ್ಮಿಕರ ಮೂಲ ಕಾಯ್ದೆ- 1996 ರ ವಿರುದ್ಧವಾಗಿ ನೂರಾರು ಕೋಟಿ ಹಣ ದುಂದು ವೆಚ್ಚ ಮಾಡಲಾಗಿದೆ, ಈ ಬಗ್ಗೆ ಈ ಹಿಂದಿನ ಸರಕಾರಕ್ಕೆ ಹಾಗೂ ಹಾಲಿ ಇರುವ ಸರಕಾರಕ್ಕೆ ತನಿಖೆಗಾಗಿ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಇದುವರೆಗೂ ಯಾವುದೇ ಕ್ರಮವಿಲ್ಲ, ಒಂದೆಡೆ ಕಾರ್ಮಿಕ ಮಂತ್ರಿ ಮಂಡಳಿಯಿಂದ ಯಾವುದೇ ಕಿಟ್ ವಿತರಿಸುವುದಿಲ್ಲ ಎಂದು ಹೇಳಿಕೆ ನೀಡಿ 7 ಸಾವಿರ ಲ್ಯಾಪ್ ಟಾಪ್ ಖರೀದಿ ಜೊತೆಗೆ, ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಿನಲ್ಲಿ ಸುಮಾರು 310 ಕೋಟಿ ರೂ. ತೆಗೆಯಲಾಗಿದೆ, ಮುಖ್ಯಮಂತ್ರಿ ಇದನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
ಕಳೆದ ವರ್ಷ ಕಾರ್ಮಿಕರಿಗೆ ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ ನೆಪ ಮಾತ್ರಕ್ಕೆ ತಪಾಸಣೆ ನಾಟಕ ಮಾಡಿ ಸರಿಯಾದ ವರದಿ ಕಾರ್ಮಿಕರಿಗೆ ನೀಡಿಲ್ಲ, ಓರ್ವ ಕಾರ್ಮಿಕರಿಗೆ 2850 ರೂ. ಗಳಂತೆ ಒಂದು ಜಿಲ್ಲೆಯಿಂದ 33 ಸಾವಿರ ಕಾರ್ಮಿಕರಿಗಾಗಿ ಹಣ ತೆಗೆದಿರಿಸಲಾಗಿದೆ, ಕಾರ್ಮಿಕರಿಗೆ ಪರೀಕ್ಷೆ ಮಾಡಿದ ಫಲಿತಾಂಶ ವಷ್ಟೇ ನೀಡಿ ಅವರ ಮುಂದಿನ ಚಿಕಿತ್ಸೆಯ ಬಗ್ಗೆ ಯಾವುದೇ ಕ್ರಮವಿಲ್ಲ, ಹಾಗಾಗಿ ಖಾಸಗಿ ಆಸ್ಪತ್ರೆಗಳ ಬದಲು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ನಡೆಸಲು ಕಲ್ಯಾಣ ಮಂಡಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂಬುದು ನಮ್ಮಗಳ ಆಗ್ರಹವಾಗಿದೆ ಎಂದರು.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ 2016ರಿಂದಲೂ ವಿವಿಧ ಸವಲತ್ತುಗಳಿಗಾಗಿ ಅರ್ಜಿ ಸಲ್ಲಿಸಿ, ಲಕ್ಷಾಂತರ ಜನರು ಧನ ಸಹಾಯಕ್ಕಾಗಿ ಕಾಯುತಿದ್ದಾರೆ, ಅರ್ಜಿ ಪರಿಶೀಲನೆ ನೆಪದಲ್ಲಿ ಏಳೆಂಟು ವರ್ಷಗಳಿಂದ ಸೌಲಭ್ಯ ನೀಡದೆ ವಿಳಂಬ ಮಾಡುವುದು ಸರಿಯಲ್ಲ, ಕೂಡಲೇ ಸೌಲಭ್ಯ ನೀಡಬೇಕೆಂಬುದು ನಮ್ಮ ಒತ್ತಾಯವಾಗಿದೆ, ಅಲ್ಲದೆ ಪಿಂಚಿಣಿಗೆ ಅರ್ಜಿ ಸಲ್ಲಿಸುವಾಗಿ ಅರವತ್ತು ವರ್ಷ ನಿಗದಿ ಪಡಿಸದೆ, ಅರವತ್ತು ತುಂಬಿದ ನಂತರ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು, ಮಾಸಿಕ 6000 ರೂ. ಪಿಂಚಿಣಿ ನೀಡಬೇಕೆಂಬುದು ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಒತ್ತಾಯಿಸುತ್ತದೆ ಎಂದು ಗಿರೀಶ್ ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕ್ವಾರಿ ಬ್ಲಾಸ್ಟ್ ವೇಳೆ ಕಾರ್ಮಿಕರು ಮೃತರಾಗುತ್ತಿರುವುದು ಸರ್ವೆ ಸಾಮಾನ್ಯವಾಗಿದೆ, ಇಂತಹ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಪರಿಹಾರ ನೀಡಬೇಕಾಗುತ್ತಿದೆ, ಒಂದು ವೇಳೆ ಅವರು ವಲಸೆ ಕಾರ್ಮಿಕರಾಗಿದ್ದರೂ ಇಂತಹ ಅವಘಡದ ಸಂದರ್ಭದಲ್ಲಿ ಮೃತಪಟ್ಟರೆ 2 ಲಕ್ಷ ರೂ. ಪರಿಹಾರ ನೀಡಲು ಅವಕಾಶವಿದೆ, ಹಾಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಡೆ ಬೆರಳು ತೋರಿಸದೆ ಕೂಡಲೇ ಪರಿಹಾರ ನೀಡಬೇಕು, ಒಂದು ವೇಳೆ ಮೃತ ಕಾರ್ಮಿಕರ ಸಂಬಂಧಿಕರು ಎಐಟಿಯುಸಿಯನ್ನು ಭೇಟಿಯಾದರೆ ಅಗತ್ಯ ನೆರವು ನೀಡಲಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಅಶ್ವಥ ನಾರಾಯಣ್, ರಾಜ್ಯ ಸಮಿತಿ ಸದಸ್ಯ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಗೋವಿಂದರಾಜು, ಸಂಚಾಲಕರಾದ ರವಿಕುಮಾರ್, ಪಾಪಣ್ಣಿ, ರಾಮಕೃಷ್ಣ, ಶಿವಾನಂದ್, ದೊಡ್ಡತಿಮ್ಮಯ್ಯ, ಕಾಂತರಾಜು ಇತರರು ಇದ್ದರು.
Comments are closed.