ತುಮಕೂರು: ಗ್ಯಾರೆಂಟಿ ಯೋಜನೆಯಿಂದ ಕರ್ನಾಟಕ ದಿವಾಳಿ ಆಗುತ್ತದೆ ಎಂದು ಪ್ರಧಾನಿ ಹೇಳಿದ್ದರು, ಸರ್ಕಾರದ ಆರ್ಥಿಕ ಸ್ಥಿತಿ ಗ್ಯಾರೆಂಟಿ ಯೋಜನೆ ಜಾರಿ ನಂತರವೂ ಸುಭದ್ರವಾಗಿದೆ, ಈಗ 3.80 ಲಕ್ಷ ಕೋಟಿ ರೂ. ಬಜೆಟ್ ಮಂಡಿಸಲಿದ್ದೇನೆ, ದುಡ್ಡಿಲ್ಲದೇ ಬಜೆಟ್ ಮಾಡಲು ಸಾಧ್ಯವೇ, 50 ಸಾವಿರ ಕೋಟಿ ಹೆಚ್ಚಿನ ಬಜೆಟ್ ಕಾಂಗ್ರೆಸ್ ಸರ್ಕಾರ ಮಂಡಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ತುಮಕೂರು ನಗರದಲ್ಲಿ ಆಯೋಜಿಸಿದ್ದ 657 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ಹಾಗೂ ಫಲಾನುಭವಿಗಳಿಗೆ ವಿವಿಧ ಸೌಲತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ಯಾರೆಂಟಿ ಯೋಜನೆಯೊಂದಿಗೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ನೀಡಲು ಸರ್ಕಾರ ಬದ್ಧವಾಗಿದ್ದು, ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಿಂತಿಲ್ಲ, ಸರ್ಕಾರದಲ್ಲಿ ಹಣವಿಲ್ಲ ಎನ್ನುವವರಿಗೆ 657 ಕೋಟಿ ಅಭಿವೃದ್ಧಿ ಕಾಮಗಾರಿ, 30 ಸಾವಿರ ಜನ ಫಲಾನುಭವಿಗಳಿಗೆ ನೀಡಿರುವ ಸವಲತ್ತು ಉತ್ತರವಾಗಿದೆ ಎಂದರು.
ಕಳೆದ ಎಂಟು ತಿಂಗಳಿಂದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ, ಬರ ಪರಿಸ್ಥಿತಿಯಲ್ಲಿ ಸರ್ಕಾರ ಅನುದಾನ ನೀಡಿಲ್ಲ ಎಂದು ಪ್ರತಿಪಕ್ಷಗಳು ಸರ್ಕಾರವನ್ನು ಆಧಾರ ರಹಿತವಾಗಿ ಟೀಕಿಸಲಾಗುತ್ತಿದೆ, ತಾತ್ಕಾಲಿಕವಾಗಿ 29 ಲಕ್ಷ 29 ಸಾವಿರ ರೈತರಿಗೆ ಇನ್ ಪುಟ್ ಸಬ್ಸಿಡಿ ನೀಡಲು 555 ಕೋಟಿ ಅನುದಾನ ನೀಡಲಾಗಿದೆ, ಎನ್ಡಿಆರ್ಎಫ್ ನಿಂದ ಕೇಂದ್ರ ಸರ್ಕಾರ ನಾಲ್ಕು ತಿಂಗಳಿಂದ ಅನುದಾನ ನೀಡಿಲ್ಲ ಎಂದರು.
ಎನ್ ಡಿ ಆರ್ ಎಫ್ ನಿಂದ ರಾಜ್ಯಕ್ಕೆ ನೀಡಬೇಕಾದ ಹಣ ನೀಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದರೂ ಇದುವರೆಗೆ ಹಣ ನೀಡಿಲ್ಲ, ಜನರಿಗೆ ದಾರಿ ತಪ್ಪಿಸಲು ವಿರೋಧ ಪಕ್ಷಗಳು ಸರ್ಕಾರದ ಬಳಿ ಹಣವಿಲ್ಲ ಎಂದು ಹೇಳುತ್ತಿದ್ದಾರೆ, ಇದು ಸತ್ಯಕ್ಕೆ ದೂರವಾದದ್ದು ಎಂದರು.
ಗ್ಯಾರೆಂಟಿ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 50 ಸಾವಿರ ಹಣ ಸಿಗುತ್ತಿದೆ, ಬಡಜನರ ಕೊಳ್ಳುವ ಶಕ್ತಿ ಹೆಚ್ಚಿಸಲು ಸರ್ಕಾರ ಕ್ರಮ ಕೈಗೊಂಡಿದೆ, ಇದರಿಂದ ಪ್ರವಾಸೋದ್ಯಮ ಹೆಚ್ಚಳವಾಗಿದೆ, ಯಾವುದೇ ಕಾರಣಕ್ಕೂ ಐದು ವರ್ಷ ಗ್ಯಾರಂಟಿ ಯೋಜನೆ ಮುಂದುವರೆಸುತ್ತೇವೆ, ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದರು.
ಮಧುಗಿರಿ ಏಕಶಿಲಾ ಬೆಟ್ಟಕ್ಕೆ ರೋಪ್ ವೇ ಅಳವಡಿಸಲು ಅನುದಾನ ನೀಡುವುದಾಗಿ ಭರವಸೆ ನೀಡಿದ ಸಿಎಂ ವಸಂತ ನರಸಾಪುರದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಪ್ ಮಾಡುವ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸಲಾಗುವುದು, ನಮ್ಮ ಸರ್ಕಾರ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಮಹಿಳೆಯರ ಪರವಾಗಿದೆ, ಸಂವಿಧಾನದ ಆಶಯದಂತೆ ಸಮ ಸಮಾಜ ನಿರ್ಮಾಣ ಮಾಡಲು ಪ್ರಯತ್ನಿಸಲಿದೆ ಎಂದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಪಾವಗಡ ತಾಲ್ಲೂಕಿನಲ್ಲಿ ಇನ್ನು 10 ಸಾವಿರ ಎಕರೆಯಲ್ಲಿ 2500 ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಸರ್ಕಾರ ಯೋಜನೆ ರೂಪಿಸಲಿದೆ, ಎತ್ತಿನಹೊಳೆ ಯೋಜನೆ ಕಾಮಗಾರಿ ಜಿಲ್ಲೆಯಲ್ಲಿ ನಡೆಯುತ್ತಿದ್ದು, ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ನೀಡಿದ್ದ ಭರವಸೆ ಈಡೇರಿಸಲಿಲ್ಲ, ಭದ್ರಾ ಮೇಲ್ದಂಡೆಗೆ ಅನುದಾನ ಬಿಡುಗಡೆ ಮಾಡಲು ಎಲ್ಲ ಸಂಸದರೂ ಒಂದಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕೆಂದು ಹೇಳಿದರು.
ತುಮಕೂರು ಜಿಲ್ಲೆ ಎರಡನೇ ಬೆಂಗಳೂರು ಆಗುವ ಸಾಧ್ಯತೆ ಇದೆ, ಜಿಲ್ಲೆಯ ನೆಲ, ಜಲಕ್ಕೆ ಶಕ್ತಿ ಇದೆ, ಜಿಲ್ಲೆಯನ್ನು ಮುಂದಿನ ಬೆಂಗಳೂರನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಜಿಲ್ಲೆಯಲ್ಲಿ 657 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ನೀಡುವ ಮೂಲಕ ರಾಜ್ಯದ ಜನರಿಗೆ ನೀಡಿದ್ದ ಜನಪರ ಆಡಳಿತದ ಭರವಸೆ ಈಡೇರಿಸಲಾಗಿದೆ, ಗ್ಯಾರೆಂಟಿ ಯೋಜನೆಗಾಗಿ ಕಳೆದ ಎಂಟು ತಿಂಗಳಲ್ಲಿ 38 ಸಾವಿರ ಕೋಟಿ ಅನುದಾನ ಖರ್ಚಾಗಿದೆ, ಜಿಲ್ಲೆಯ ಜನಕ್ಕೆ ಎತ್ತಿನಹೊಳೆ ಮೂಲಕ ಕುಡಿಯುವ ನೀರು ಒದಗಿಸಿದ ಸಿದ್ದರಾಮಯ್ಯ ಅವರು ಕಾರಣರಾಗಿದ್ದಾರೆ, ಜಿಲ್ಲೆಯ ಅಭಿವೃದ್ಧಿಗೆ ನೆರವು ನೀಡಿದ್ದಾರೆ ಎಂದರು.
ತುಮಕೂರು ಮಹಾನಗರ ಪಾಲಿಕೆ ಅಭಿವೃದ್ಧಿಗೆ 500 ಕೋಟಿ, ತುಮಕೂರು ಬೆಳವಣಿಗೆಗೆ ಅನುಕೂಲವಾಗುವಂತೆ ಮೆಟ್ರೋ ಯೋಜನೆ ಪ್ರಾರಂಭಿಸಬೇಕು, ವಿಶ್ವವಿದ್ಯಾಲಯದ ಅಭಿವೃದ್ಧಿಗೆ 200 ಕೋಟಿ, ಎತ್ತಿನಹೊಳೆ ಯೋಜನೆಗೆ 4 ವರ್ಷದಿಂದ ಅನುದಾನ ನೀಡಿಲ್ಲ, ಕಾಲಮಿತಿಯೊಳಗೆ ಯೋಜನೆ ಮುಗಿಸಲು ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಚಿವರಾದ ರಾಮಲಿಂಗಾರೆಡ್ಡಿ, ಭೈರತಿ ಸುರೇಶ್, ಕೃಷ್ಣಬೈರೇಗೌಡ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕರಾದ ಶ್ರೀನಿವಾಸ್, ವೆಂಕಟೇಶ್, ಷಡಕ್ಷರಿ, ರಂಗನಾಥ್, ಸುರೇಶ್ ಗೌಡ, ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಸುರೇಶ್ ಬಾಬು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಪ್ರಭು, ಪಾಲಿಕೆ ಮೇಯರ್ ಪ್ರಭಾವತಿ, ಆಯುಕ್ತೆ ಅಶ್ವಿಜಾ ಇತರರು ಇದ್ದರು.
ಬಸ್ ನಿಲ್ದಾಣಕ್ಕೆ ದೇವರಾಜು ಅರಸು ಹೆಸರು
ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಬಸ್ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ, ಇನ್ನು ಮುಂದೆ ದೇವರಾಜ ಅರಸು ಅವರ ಹೆಸರಲ್ಲಿ ಬಸ್ ನಿಲ್ದಾಣ ಕಾರ್ಯ ನಿರ್ವಹಿಸಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿವಿಧ ಸಂಪನ್ಮೂಲಗಳ ಕ್ರೋಢೀಕರಣದಿಂದ ಪ್ರಸಕ್ತ 2023-24ನೇ ಸಾಲಿನ ಆರ್ಥಿಕ ವಷರ್ದಲ್ಲಿ ಗ್ಯಾರಂಟಿ ಯೋಜನೆಗಳಿಗೆ 38 ಸಾವಿರ ಕೋಟಿ ರೂ. ಅನುದಾನ ಒದಗಿಸಲಾಗಿದೆ, ಬರುವ 2024-25ನೇ ಸಾಲಿಗಾಗಿ 58ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗಳಿಗೆ ಖರ್ಚು ಮಾಡಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಜನರ ಆಶೀರ್ವಾದದಿಂದ ಎರಡನೆ ಬಾರಿ ಮುಖ್ಯಮಂತ್ರಿಯಾಗಿದ್ದೇನೆ, ಅಧಿಕಾರಕ್ಕೆ ಬಂದ ನಂತರ ಎಲ್ಲಾ ಜನಾಂಗಕ್ಕೂ ಅನುಕೂಲ ಮಾಡಲಾಗಿದೆ, ಕೊಟ್ಟ ಮಾತಿನಂತೆ ನಡೆದುಕೊಳ್ಳಲಾಗಿದೆ ಎಂದರಲ್ಲದೆ, ಗೃಹ ಸಚಿವರು ಮನವಿ ಮಾಡಿರುವ ಎಲ್ಲಾ ಬೇಡಿಕೆಗಳನ್ನೂ ಈಡೇರಿಸುತ್ತೇನೆಂದು ಭರವಸೆ ನೀಡಿದರು.
Comments are closed.