ಸಮಾಜದ ಹಿತ ಕಾಪಾಡುವುದು ಸಾಹಿತ್ಯ

26

Get real time updates directly on you device, subscribe now.


ಹುಳಿಯಾರು: ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿ, ಸಮಾನತೆಯ ಸಮಾಜ ಕಟ್ಟಿದ ಬಸವಣ್ಣ ಇಂದು ಪಠ್ಯಪುಸ್ತಕಗಳಲ್ಲಿ ಕಾಣೆಯಾಗಿ ಆ ಜಾಗದಲ್ಲಿ ಗೋಡ್ಸೆ ಬಂದರೂ ಅಚ್ಚರ್ಯ ಪಡಬೇಕಿಲ್ಲ, ಏಕೆಂದರೆ ಬಹುತ್ವದ ಭಾರತದಲ್ಲಿ ದ್ವೇಷ ಬಿತ್ತಲಾಗುತ್ತಿದೆ, ಇಡೀ ಭಾರತವನ್ನು ಹೊಡೆಯಲಾಗುತ್ತಿದೆ ಎಂದು ಸಂಸ್ಕೃತಿ ಚಿಂತಕ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಆತಂಕ ವ್ಯಕ್ತಪಡಿಸಿದರು.
ಹುಳಿಯಾರಿನಲ್ಲಿ ಸೋಮವಾರ ಆಯೋಜಿಸಿದ್ದ 11ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ರಸ್ಕಿನ್ ಅವರ ಅನ್ ಟು ದಿಸ್ ಲಾಸ್ಟ್ ಪುಸ್ತಕ ಓದಿ ಗಾಂಧೀಜಿ ಚಿಂತನೆ, ಆಲೋಚನೆ, ಬದುಕಿನ ಕ್ರಮ ಎಲ್ಲವೂ ಬದಲಾಯಿತು, ಒಂದು ಪುಸ್ತಕ ಗಾಂಧೀಯ ವ್ಯಕ್ತಿತ್ವ ರೂಪಿಸಿತೆಂದರೆ ನಮ್ಮ ಸಾಹಿತ್ಯ ಕ್ಷೇತ್ರದಲ್ಲಿರುವ ಕೃತಿಗಳು ಎಷ್ಟು ಜನರ ಮನಸ್ಸುಗಳನ್ನು ಬದಲಾಯಿಸಬಾರದಿತ್ತು, ಆದರೆ ಸಾಹಿತಿಗಳೂ ಸಹ ರಾಜಕಾರಣಿಗಳಷ್ಟೆ ಕೆಟ್ಟು ಹೋಗಿದ್ದೇವೆ, ಏಕೆಂದರೆ ಮಾತನಾಡಬೇಕಾದ ಕಾಲದಲ್ಲಿ ಮಾತನಾಡುತ್ತಿಲ್ಲ, ಶಾಂತಿಯ ಕಾಲದಲ್ಲಿ ಕ್ರಾಂತಿಯ ಮಾತನಾಡುತ್ತೇವೆ, ಈ ರೀತಿಯ ಹಿಬ್ಬಂದ್ದಿ ಬುದ್ಧಿ ಸಾಹಿತಿಗಳಿಗೆ ಬರಬಾರದು, ಪಂಪ, ಬಸವಣ್ಣ ತಮ್ಮ ರಾಜನ ವಿರುದ್ಧವೇ ಧ್ವನಿ ಎತ್ತಿದ್ದಾರೆ, ಸಮಾಜದ ಹಿತವನ್ನೇ ಕಾಪಾಡುವುದು ಸಾಹಿತ್ಯ, ಆದರೆ ಇಂದು ಸಾಹಿತ್ಯವೂ ಭ್ರಷ್ಟವಾಗಿದೆ. ಶೇ.90 ರಷ್ಟು ಸಾಹಿತಿಗಳು ಶವದ ರೀತಿಯಲ್ಲಿ ಇದ್ದಾರೆ ಎಂದು ಟೀಕಾಪ್ರಹಾರ ಮಾಡಿದರು.

ನಮ್ಮಲ್ಲಿಯೇ ಹುಟ್ಟಿ, ನಮ್ಮ ಜೊತೆಯಲ್ಲೇ ಬೆಳೆದವರು ಯಾವ ಜಾತಿ, ಧರ್ಮದವರಾದರೇನು ಅವರು ಭಾರತೀಯರು, ಇವರ ವಿರುದ್ಧ ನಮ್ಮ ಮಕ್ಕಳನ್ನು ಎತ್ತಿ ಕಟ್ಟುವುದೆಂದರೇನು, ಮಚ್ಚು, ಲಾಂಗು ಹಿಡಿದು ಹೊಡೆದಾಡುವುದೆಂದರೇನು ಎಂಬುದನ್ನು ತಂದೆ ತಾಯಿಯರು ಯೋಚನೆ ಮಾಡಬೇಕು, ರಾಮಾಯಣವನ್ನು ಸೀತೆಯ, ಗಾಂಧೀಯ, ವಾಲ್ಮೀಕಿಯ ಸ್ಥಾನದಲ್ಲಿ ನಿಂತು ನೋಡಬೇಕು, ರಾಮನನ್ನು ದೇವರಾಗಿ ಅಲ್ಲ, ಮನುಷ್ಯನನ್ನಾಗಿ ಅದರಲ್ಲೂ ಮರ್ಯಾದಾ ಪುರುಷೋತ್ತಮನನ್ನಾಗಿ ನೋಡಬೇಕಿದೆ, ಈ ನಿಟ್ಟಿನಲ್ಲಿ ಶಿಕ್ಷಕರ ಜವಾಬ್ದಾರಿ ಹೆಚ್ಚಾಗಿದ್ದು ಆತ್ಮಸಾಕ್ಷಿ ಸಾಯದಿರುವಂತೆ ಮಕ್ಕಳ ವ್ಯಕ್ತಿತ್ವ ಎಚ್ಚರಿಸಿ ರೂಪಿಸಬೇಕಿದೆ, ಪ್ರಜಾಪ್ರಭುತ್ವ ಉಳಿಸಬೇಕಿದೆ, ಸತ್ಪ್ರಜೆಯನ್ನಾಗಿ ಮಾಡಿ ದೇಶ ಕಟ್ಟಬೇಕಿದೆ, ಹಾದಿ ಬೀದಿಯೊಳಗೆ ಕಾಲಾಳುಗಳಾಗಿ ಮಕ್ಕಳು ನಡೆದುಕೊಳ್ಳದ ರೀತಿಯಲ್ಲಿ ಎಚ್ಚರ ವಹಿಸಬೇಕಿದೆ ಎಂದರು.

ಸಮ್ಮೇಳನಾಧ್ಯಕ್ಷೆ ಪ್ರೊ.ಕೃಷ್ಣಾಬಾಯಿ ಹಾಗಲವಾಡಿ, ಶಾಸಕ ಸಿ.ಬಿ.ಸುರೇಶ್ ಬಾಬು, ಸಾಹಿತಿ ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಕಂಟಲಗೆರೆ ಸಣ್ಣಹೊನ್ನಯ್ಯ, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ತಾಲೂಕು ಕಸಾಪ ಅಧ್ಯಕ್ಷ ರವಿಕುಮಾರ್, ಹೋಬಳಿ ಕಸಾಪ ಅಧ್ಯಕ್ಷ ನಾರಾಯಣಪ್ಪ, ತಹಸೀಲ್ದಾರ್ ಗೀತಾ, ಪಪಂ ಅಧ್ಯಕ್ಷ ಕಿರಣ್, ಉಪಾಧ್ಯಕ್ಷೆ ಶೃತಿ, ನಿವೃತ್ತ ಜಿಲ್ಲಾಧಿಕಾರಿ ಶ್ರೀರಂಗಯ್ಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜಕುಮಾರ್, ಎಇಇ ಗವೀರಂಗಯ್ಯ, ಬಿಇಒ ಕಾಂತರಾಜು, ಜಿಪಂ ಮಾಜಿ ಸದಸ್ಯೆ ಮಂಜುಳಾ, ತಾಪಂ ಮಾಜಿ ಸದಸ್ಯರಾದ ಏಜೆಂಟ್ ಕುಮಾರ್, ಶಿವನಂಜಪ್ಪ, ಶಿಕ್ಷಕರ ಸಂಘದ ಸುರೇಶ್, ಕರವೇಯ ಚನ್ನಬಸವಯ್ಯ, ಪ್ರಕಾಶ್ ಇತರರು ಇದ್ದರು.
ಕನ್ನಡ ಭವನಕ್ಕೆ 5 ಲಕ್ಷ ರೂ.
11 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸವಿನೆನಪಿಗೆ ಹುಳಿಯಾರಿನಲ್ಲಿ ಕನ್ನಡ ಭವನ ನಿರ್ಮಾಣಕ್ಕೆ ಕಸಾಪ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದ್ದು ಈ ಕಟ್ಟಡಕ್ಕೆ ಶಾಸಕ ನಿಧಿಯಿಂದ 5 ಲಕ್ಷ ರೂ. ಧನ ಸಹಾಯ ಮಾಡುವ ಜೊತೆಗೆ ವಿವಿಧ ಇಲಾಖೆಗಳಿಂದ ಹಣ ಕೊಡಿಸುತ್ತೇನೆ, ಚಿಕ್ಕನಾಯಕನ ಹಳ್ಳಿಯ ತೀನಂಶ್ರೀ ಭವನಕ್ಕೆ 1 ಕೋಟಿ ರೂ. ಮಂಜೂರು ಮಾಡಿಸಿದ್ದು ಶೀಘ್ರದಲ್ಲೇ ಕಟ್ಟಡದ ಸಂಪೂರ್ಣ ಕಾರ್ಯ ಮುಗಿಸುತ್ತೇನೆ, ಈ ಮೂಲಕ ತಾಲೂಕಿನಲ್ಲಿ ಕನ್ನಡ ಕಲೆ, ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದೇನೆ, ರಾಜ್ಯದಲ್ಲಿ 9 ಸಾವಿರಕ್ಕೂ ಹೆಚ್ಚು ಕನ್ನಡ ಶಾಲೆಗಳು ಮುಚ್ಚಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ, ಆದರೆ ಕನ್ನಡ ಶಾಲೆಗಳನ್ನು ಮುಚ್ಚುವ ಬದಲು ಇಂದಿನ ಕಾಲಕ್ಕೆ ಅಗತ್ಯವಾಗಿರುವ ಇಂಗ್ಲಿಷ್ ಗೂ ಆದ್ಯತೆ ನೀಡಿ ಶಾಲೆಗಳನ್ನು ಉಳಿಸಬೇಕಿದೆ.
-ಸಿ.ಬಿ.ಸುರೇಶ್ ಬಾಬು, ಶಾಸಕ, ಚಿಕ್ಕನಾಯಕನ ಹಳ್ಳಿ.

Get real time updates directly on you device, subscribe now.

Comments are closed.

error: Content is protected !!