ತುಮಕೂರು: ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ, ಉಕ್ಕಿನ ಮಹಿಳೆ ಇಂದಿರಾ ಗಾಂಧಿ ಹಾಗೂ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಅಧ್ಯಕ್ಷತೆಯಲ್ಲಿ ಹುತ್ಮಾತರ ದಿನವಾಗಿ ಆಚರಿಸಲಾಯಿತು.
ರಾಷ್ಟ್ರಪಿತ ಮಹಾತ್ಮಗಾಂಧಿ, ಮಾಜಿ ಪ್ರಧಾನಿ ಇಂದಿರಾಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೂವರು ಮಹಾನ್ ನಾಯಕರ ಜೀವನ, ಸಾಧನೆ ಮತ್ತು ತತ್ವಾದರ್ಶ ನೆನದು ಹುತಾತ್ಮರಿಗೆ ಗೌರವ ಸಲ್ಲಿಸಿದರು.
ಈ ವೇಳೆ ಮಾಜಿ ಟೂಡಾ ಅಧ್ಯಕ್ಷ ರೆಡ್ಡಿ ಚಿನ್ನಯಲ್ಲಪ್ಪ ಮಾತನಾಡಿ, ಸ್ವಾತಂತ್ರವೆಂಬುದು ಭಾರತಕ್ಕೆ ಸುಲಭವಾಗಿ ಸಿಗಲಿಲ್ಲ, ಲಕ್ಷಾಂತರ ಜನರು ತಮ್ಮ ಪ್ರಾಣ ಬಲಿಕೊಟ್ಟು ಇದನ್ನು ನಮಗೆ ತಂದು ಕೊಟ್ಟಿದ್ದಾರೆ, ಅಂದು ಬ್ರಿಟಷರ ಜೊತೆ ಶಾಮೀಲಾಗಿ ಸ್ವಾತಂತ್ರ ಹೋರಾಟದ ದಿಕ್ಕು ತಪ್ಪಿಸಲು ಹೊರಟವರು, ಇಂದು ಅಧಿಕಾರದ ಗದ್ದುಗೆ ಹಿಡಿದು ದೇಶದ ಜನರನ್ನು ಧರ್ಮ, ದೇವರ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಸರಿಯಾಗಿ ಕೌಂಟರ್ ಕೊಡುವಂತೆ ಕಾಂಗ್ರೆಸ್ ಕಾರ್ಯಕರ್ತರು ಸಿದ್ಧವಾಗಬೇಕಿದೆ, ಕಳೆದ ವಿಧಾನಸಭಾ ಚುನಾವಣೆ ವೇಳೆ ಒಗ್ಗಟ್ಟು ಕಾಯ್ದುಕೊಂಡಂತೆ ಲೋಕಸಭಾ ಚುನಾವಣೆಯಲ್ಲಿಯೂ ಒಗ್ಗೂಡಿದರೆ ರಾಜ್ಯದ 28 ಕ್ಷೇತ್ರಗಳಲ್ಲಿ 20 ರಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ ಎಂದರು.
ತುಮಕೂರು ನಗರಸಭೆಯ ಮಾಜಿ ಸದಸ್ಯ ನರಸೀಯಪ್ಪ ಮಾತನಾಡಿ, ಕಾಯಕವನ್ನೇ ಜಾತಿಯನ್ನಾಗಿಸಿದ ವರ್ಣಾಶ್ರಮ ವ್ಯವಸ್ಥೆಯಿಂದ ಭಾರತ ಇಂದು ನಲುಗಿ ಹೋಗುತ್ತಿದ್ದು, ಇದರಿಂದ ಹೊರಬೇಕೆಂದರೆ ಅಂಬೇಡ್ಕರ್ ಅವರ ಸಮಪಾಲು, ಸಮಬಾಳು ಎಂಬ ಸಂವಿಧಾನವೊಂದೇ ದಾರಿಯಾಗಿದೆ, ಈ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಒಂದು ತತ್ವ ಸಿದ್ಧಾಂತ ಇದೆ, ಎಂದಿಗೂ ತನ್ನ ಜಾತ್ಯಾತೀತ ತತ್ವದಲ್ಲಿ ರಾಜಿ ಮಾಡಿಕೊಳ್ಳದು, ಹಾಗಾಗಿ ಶ್ರೀಲಂಕಾಕ್ಕೆ ಶಾಂತಿ ಪಾಲನಾ ಪಡೆ ಕಳುಹಿಸಿದ ಏಷಿಯಾದಲ್ಲಿ ಶಾಂತಿ ನೆಲೆಸುವಂತೆ ಮಾಡಿದ ರಾಜೀವಗಾಂಧಿ ಎಲ್ಟಿಟಿಇಗಳ ಗುಂಡಿಗೆ ಬಲಿಯಾಗಬೇಕಾಯಿತು, ಖಲಿಸ್ಥಾನಗಳ ಅಟ್ಟಹಾಸಕ್ಕೆ ಆಸ್ಪದ ಕೊಡದೆ ಅಮೃತ್ ಸರ್ನ ಗೋಲ್ಡನ್ ಟೆಂಪಲ್ ನಲ್ಲಿ ಅಡಗಿದ್ದ ಉಗ್ರರನ್ನು ಮಟ್ಟ ಹಾಕಿದ ಕಾರಣಕ್ಕೆ ತನ್ನ ಅಂಗರಕ್ಷಕರಿಂದಲೇ ಇಂದಿರಾಗಾಂಧಿ ಮರಣ ಹೊಂದಿದರು, ದೇಶದ ಸ್ವಾತಂತ್ರ ಹೋರಾಟದ ನಾಯಕತ್ವ ತೆಗೆದುಕೊಂಡು ಬ್ರಿಟಿಷರ ದಾಸ್ಯದಿಂದ ಭಾರತೀಯರನ್ನು ಬಿಡಿಸಿದ ಮಹಾತ್ಮ ಗಾಂಧಿ ಗೂಡ್ಸೆ ಬಂದೂಕಿಗೆ ಬಲಿಯಾದರು, ಕಾಂಗ್ರೆಸ್ ಗೆ ತನ್ನದೇ ಆದ ಇತಿಹಾಸ, ಪರಂಪರೆ ಇದೆ, ಅದನ್ನು ಮೊದಲು ನಾವುಗಳು ಅರ್ಥ ಮಾಡಿಕೊಂಡು ಮುನ್ನಡೆಯಬೇಕಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿ, ಭಾರತ ಎಂಬುದು ವಿವಿಧತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ, ಇಂತಹ ರಾಷ್ಟ್ರದಲ್ಲಿ ಶ್ರೀರಾಮನ ಹೆಸರಿನಲ್ಲಿ ಬಿಜೆಪಿ ಮತ್ತು ಆರ್ ಎಸ್ ಎಸ್ ನವರು ಮಾಡಬಾರದ ಕೆಲಸ ಮಾಡಿ, ದೇಶ ಹಿಬ್ಬಾಗಿಸುವ ಕೆಲಸ ಮಾಡುತ್ತಿದ್ದಾರೆ, ಕಾಂಗ್ರೆಸ್ನವರದ್ದು ಶ್ರೀರಾಮ್ ಆದರೆ, ಬಿಜೆಪಿಯವರದ್ದು ನಾಥೂರಾಮ್, ದೇಶದ ಸಂವಿಧಾನಕ್ಕೆ ಬದಲಾಗಿ ಮನುಸ್ಮತಿ ತರಬೇಕೆಂಬ ಅಜೆಂಡಾದೊಂದಿಗೆ ಬಿಜೆಪಿ ಹೆಜ್ಜೆ ಇಡುತ್ತಿದೆ, ಒಂದು ಜಾತ್ಯಾತೀತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎನಿಸಿಕೊಂಡಿರುವ ಹೆಚ್.ಡಿ.ದೇವೇಗೌಡರು ಸಹ ಮೋದಿ ಬಿಟ್ಟರೆ ಪ್ರಧಾನಿಯಾಗಲು ಯೋಗ್ಯರಿಲ್ಲ ಎಂಬ ಹೇಳಿಕೆ ನೀಡಿರುವುದು ನಿಜಕ್ಕೂ ನೋವಿನ ಸಂಗತಿ, ದೇಶವನ್ನು ಮತ್ತೊಮ್ಮೆ ಪುರೋಹಿತ ಶಾಹಿಗಳ ಕೈಗೆ ಒಪ್ಪಿಸಲು ಎಲ್ಲರೂ ಹೊರಟತಂತೆ ಕಾಣುತ್ತಿದೆ, ಇದಕ್ಕೆ ಎಂದಿಗೂ ಕಾಂಗ್ರೆಸ್ ಪಕ್ಷ ಅವಕಾಶ ಕೊಡಬಾರದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ ಮಾತನಾಡಿ, ದೇಶದ ಸ್ವಾತಂತ್ರಕ್ಕಾಗಿ ಹೋರಾಟ ಮಾಡಿದ ಪಕ್ಷದ ಸಾಧನೆಯನ್ನು ಜನತೆ ನೋಡಿದ್ದಾರೆ, ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಪಡಿಸಿದ ಶಾಲೆ, ಕಾಲೇಜುಗಳಲ್ಲಿ ಓದಿ, ಪದವಿ ಪಡೆದವರು ಇಂದು ದೇಶಕ್ಕೆ ಕಾಂಗ್ರೆಸ್ ಕೊಡುಗೆ ಏನು ಎಂದು ಕೇಳುತ್ತಿದ್ದಾರೆ, ನೇರ ನಗದು, ಡಿಜಿಟಲ್ ಕರೆನ್ಸಿ ಬಗ್ಗೆ ಮಾತನಾಡುವ ಬಿಜೆಪಿಗರೇ ಇದನ್ನು ಸ್ಥಾಪಿಸಿದವರು ಯಾರು, ಬ್ಯಾಂಕ್ ಗಳ ರಾಷ್ಟ್ರೀಕರಣ, ವಿಜ್ಞಾನ ತಂತ್ರಜ್ಞಾನಕ್ಕೆ ಒತ್ತು ನೀಡಿದ ರಾಜೀವ್ ಗಾಂಧಿ ಅವರನ್ನು ಮರೆಯಲು ಸಾಧ್ಯವೇ, ಕಾಂಗ್ರೆಸ್ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಈ ವಿಚಾರ ತಲುಪಿಸಿ ಶ್ರೀರಾಮನ ಹೆಸರಿನಲ್ಲಿ ಜನರನ್ನು ಸಾಲದ ಕೂಪಕ್ಕೆ ದೂಡುತ್ತಿರುವ ಬಿಜೆಪಿಯ ಹುನ್ನಾರ ಬಯಲಿಗೆ ಎಳೆಯಬೇಕಿದೆ ಎಂದರು.
ಮುಖಂಡರಾದ ರೇವಣ್ಣಸಿದ್ದಯ್ಯ, ನಟರಾಜ ಶೆಟ್ಟಿ, ಷಣ್ಮುಖಪ್ಪ, ಸುಜಾತ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಫಯಾಜ್, ನರಸಿಂಹ ಮೂರ್ತಿ, ಕೆಂಪಣ್ಣ, ಸುಲ್ತಾನ್ ಮೊಹಮದ್, ಶಿವಾಜಿ, ಕೈದಾಳ ರಮೇಶ್, ಅಸ್ಲಾಂ ಪಾಷ, ನ್ಯಾತೇಗೌಡ, ಕವಿತಾ, ಮಂಗಳ, ಕುತ್ಬುದ್ದೀನ್, ರಘು, ಭಾಗ್ಯ, ವಸುಂದರ ಹಾಜರಿದ್ದರು.
Comments are closed.