ತುಮಕೂರು: ನಾಡಿನ ಜನರಲ್ಲಿ ಸ್ವಾಭಿಮಾನ, ಸ್ವಾವಲಂಬನೆ, ಆತ್ಮಗೌರವ ಬೆಳೆಸದೆ ಕೇವಲ ಪರಾವಲಂಭಿಯಾಗಿ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ರಾಮಕೃಷ್ಣ, ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ನಗರದ ವಿದ್ಯೋದಯ ಕಾನೂನು ಕಾಲೇಜಿನಲ್ಲಿ ಭಾರತ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವಾಲಯ ಹಾಗೂ ಕರ್ನಾಟಕ ಕಾನೂನು ವಿವಿಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಯುವ ಸಂವಾದ ಇಂಡಿಯಾ- 2047 ಉದ್ಘಾಟಿಸಿ ಮಾತನಾಡಿ, ಜನರಲ್ಲಿ ದುಡಿಯುವ ಮನೋಭಾವ ಬೆಳೆಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಯುವ ಜನತೆಯೇ ದೇಶದ ನಿಜವಾದ ಸಂಪತ್ತು, ಆ ಸಂಪತ್ತನ್ನು ಸಂಪನ್ಮೂಲವಾಗಿಸುವ ಗುರುತರ ಜವಾಬ್ದಾರಿ ವಿಶ್ವವಿದ್ಯಾಲಯಗಳ ಮೇಲಿದೆ.ಹಾಗಾಗಿ ದೇಶದ 60 ರಷ್ಟು ಯುವ ಜನರನ್ನು ಸಮರ್ಥವಾಗಿ ಬಳಸಿಕೊಳ್ಳುವ ನಿಟ್ಟಿನಲ್ಲಿ ದಾಸ್ಯ ಮುಕ್ತ, ಹೊಸಾಹತು ಮನೋಸ್ಥಿತಿಯಿಂದ ಯುವ ಜನರನ್ನು ಹೊರ ತಂದು, ನಮ್ಮ ಪರಂಪರೆ ಮತ್ತು ನಡೆದು ಬಂದ ದಾರಿ ನೆನಪಿಸುವ ಮೂಲಕ ನಾಗರಿಕರ ಜವಾಬ್ದಾರಿಯನ್ನು ನೆನಪು ಮಾಡುವುದೇ ಈ ಸಂವಾದದ ಉದ್ದೇಶವಾಗಿದೆ ಎಂದು ತಿಳಿಸಿದರು.
ವಿದೇಶಿಯರ ಭೌದ್ದಿಕತೆಗೆ ಹೋಲಿಕೆ ಮಾಡಿದರೆ ಭಾರತೀಯರು ಅತಿ ಬುದ್ಧಿವಂತರು, ಆದರೆ ಅವರನ್ನು ಪರಾವಲಂಭಿಗಳಾಗಿ ಮಾಡುವುದು ತರವಲ್ಲ, ಅವರಲ್ಲಿ ಸ್ವಾಭಿಮಾನ ಬೆಳೆಸಿ, ತಮ್ಮಲ್ಲಿಯೇ ಇರುವ ಸಾಮರ್ಥ್ಯ ಉದ್ದೀಪಗೊಳಿಸುವ ಕೆಲಸ ಆಗಬೇಕು, ಪ್ರಾಕೃತಿಕ ಸಂಪತ್ತಿನಿಂದ ದೇಶದ ಅಭಿವೃದ್ಧಿ ಅಳೆಯಲು ಸಾಧ್ಯವಿಲ್ಲ, ಅದು ಜನರ ಜ್ಞಾನದ ಮೇಲೆ ನಿಂತಿದೆ, ತಾವು ಗಳಿಸಿರುವ ಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡಲ್ಲಿ ದೇಶವನ್ನು ಸಮರ್ಥವಾಗಿ ಕಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯೋದ್ಯಯ ಪ್ರತಿಷ್ಠಾನದ ಸಿಇಓ ಪ್ರೊ.ಕೆ.ಚಂದ್ರಣ್ಣ ಮಾತನಾಡಿ, ನಮ್ಮ ಕಾಲೇಜಿನಲ್ಲಿ ಯುವ ಸಂವಾದ 2047 ಕಾರ್ಯಕ್ರಮ ಯುವ ಜನತೆಯನ್ನು ಸಮರ್ಥವಾಗಿ ದೇಶ ಕಟ್ಟಲು ಬೆಳೆಸಿಕೊಳ್ಳಲು ಹೇಗೆ ಕಾರ್ಯಾನ್ಮೂಖವಾಗಬೇಕು ಎಂಬ ಮಾರ್ಗದರ್ಶನ ಮಾಡುವ ಉದ್ದೇಶ ಹೊಂದಿದೆ, ಯುವ ಜನರು ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ, ಅವರನ್ನು ಸಂಸ್ಕಾರಯುತವಾಗಿ ಬೆಳೆಸಿದಲ್ಲಿ ತಂದೆ, ತಾಯಿಗಳಿಂದ ದೂರವಾಗಿ ಬದುಕುವ ಯುವ ಜನರಿಗೆ ತಿಳಿ ಹೇಳುವ ಕೆಲಸ ಇದಾಗಿದೆ ಎಂದರು.
ಎನ್ ಎಸ್ ಎಸ್ ಸಂಯೋಜಕ ಡಾ.ನಟರಾಜು.ಜಿ.ವೈ. ಮಾತನಾಡಿ, ಭಾರತದಲ್ಲಿ ಶೇ.60 ರಷ್ಟು ಯುವ ಜನರಿದ್ದ ಅವರನ್ನು ರಾಷ್ಟ್ರದ ಅಭಿವೃದ್ಧಿಯಲ್ಲಿ ಬಳಸಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರಾಷ್ಟ್ರದ ಸುಮಾರು ಐದುನೂರು ಪದವಿ ಮತ್ತು ವಿವಿಗಳಲ್ಲಿ ಹಾಗೆಯೇ ಕರ್ನಾಟಕದ 50 ವಿವಿಗಳಲ್ಲಿ ಇಂತಹ ಸಂವಾದ ಏರ್ಪಡಿಸಲು ತೀರ್ಮಾನಿಸಿದ್ದು, ತುಮಕೂರಿನಿಂದ ಆಯ್ಕೆಯಾಗಿರುವ ಏಕೈಕ ಕಾಲೇಜು ನಮ್ಮದಾಗಿದೆ, ಮುಂದಿನ ಒಂದು ವರ್ಷ ಕಾಲ ಯುವ ಜನರಿಗೆ ಸಂಬಂಧಿಸಿದಂತಹ ಹಲವು ಕಾರ್ಯಕ್ರಮಗಳನ್ನು ಕಾಲೇಜಿನ ಎನ್ ಎಸ್ ಎಸ್ ವತಿಯಿಂದ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಕಾರ್ಯಕ್ರಮದ ವೇಳೆ ಭಾರತೀಯ ಅಂಧರ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ದೀಪಿಕಾ.ಟಿ.ಸಿ. ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು, ಅಲ್ಲದೆ ಕಾಲೇಜಿನ ಗುಡ್ಡಗಾಡು ಓಟಗಾರ ಜೀವನ್ ಅವರನ್ನು ಅಭಿನಂದಿಸಲಾಯಿತು. ಐಕ್ಯೂಎಸಿ ಸಂಯೋಜಕ ಕುಮಾರ್.ಎನ್.ಹೆಚ್, ಎನ್ ಎಸ್ಎಸ್ ಅಧಿಕಾರಿ ಡಾ.ಕಿಶೋರ್.ವಿ, ಪ್ರಾಂಶುಪಾಲರಾದ ಶಾಮ್ ಸೈಯಿದ್ ಇತರರು ಇದ್ದರು.
Comments are closed.