ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಂಗಳವಾರ ಜಿಲ್ಲೆಯ ತುರುವೇಕೆರೆ, ತಿಪಟೂರು ತಾಲ್ಲೂಕಿನ ನಾಡಕಚೇರಿ, ತಾಲ್ಲೂಕು ಕಚೇರಿ, ತಾಲ್ಲೂಕು ಪಂಚಾಯತಿಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಿದರು.
ಈ ದಿನವೇ ವಿಲೇವಾರಿಗೆ ಸೂಚನೆ: ಮೊದಲಿಗೆ ತುರುವೇಕೆರೆ ತಾಲ್ಲೂಕು ಮಾಯಸಂದ್ರ ನಾಡಕಚೇರಿಗೆ ಭೇಟಿ ನೀಡಿ ಪರಿಶೀಲನೆ ಆರಂಭಿಸಿದರು, ಕಚೇರಿ ಸಮಯಕ್ಕೆ ಸರಿಯಾಗಿ ಭೇಟಿ ನೀಡಿ ಸಿಬ್ಬಂದಿ ಹಾಜರಾತಿ ಹಾಗೂ ವಿವಿಧ ಸೌಲಭ್ಯ ಕೋರಿ ಸಾರ್ವಜನಿಕರು ಸಲ್ಲಿಸಿದ ಅರ್ಜಿಗಳ ವಿಲೇವಾರಿ ಪ್ರಗತಿ ಪರಿಶೀಲಿಸಿದರು, ಸಾರ್ವಜನಿಕರಿಗಾಗಿ ಒದಗಿಸುವ ಸೌಲಭ್ಯಗಳಿಗೆ ಸಂಬಂಧಿಸಿದಂತೆ ವಿವಿಧ ಕಡತ ಪರಿಶೀಲಿಸಿದ ಅವರು ಜನವರಿ 3 ರಂದು ಸಲ್ಲಿಸಿರುವ ಅರ್ಜಿಗಳನ್ನು ಇನ್ನು ಬಾಕಿ ಉಳಿಸಿಕೊಂಡಿರುವ ಬಗ್ಗೆ ಸಿಬ್ಬಂದಿಗೆ ಕಾರಣ ಕೇಳಿದರು.
ಜನರ ತೆರಿಗೆ ಹಣವನ್ನು ನಿಮಗೆ ವೇತನವನ್ನಾಗಿ ಪಾವತಿಸಲಾಗುತ್ತಿದೆ, ಜವಾಬ್ದಾರಿಯಿಂದ ಸರ್ಕಾರಿ ಸೇವೆ ಸಲ್ಲಿಸಿ ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಸರ್ಕಾರಿ ಸೌಲಭ್ಯ ತಲುಪಿಸಬೇಕೆಂದು ನಿರ್ದೇಶನ ನೀಡಿದರು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿಂಚಣಿ ಮಂಜೂರಾತಿಗೆ ಸಂಬಂಧಿಸಿದ 122 ಅರ್ಜಿ ಬಾಕಿ ಇರುವುದನ್ನು ಗಮನಿಸಿದ ಅವರು ಈ ದಿನವೇ ಎಲ್ಲಾ 122 ಅರ್ಜಿಗಳನ್ನು ವಿಲೇವಾರಿ ಮಾಡಬೇಕೆಂದು ಸೂಚಿಸಿದರಲ್ಲದೆ, ಅನಗತ್ಯ ದಾಖಲೆಗಳನ್ನು ಕೇಳಿ ಅರ್ಜಿದಾರರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸಬಾರದು, ಮುಂದಿನ ದಿನಗಳಲ್ಲಿ ಸ್ವೀಕೃತ ಅರ್ಜಿಗಳನ್ನು 4 ದಿನಗಳೊಳಗೆ ವಿಲೇವಾರಿ ಮಾಡದ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನಿರೀಕ್ಷಕರಿಗೆ ಶೋಕಾಸ್ ನೋಟೀಸ್ ನೀಡಲಾಗುವುದೆಂದು ಎಚ್ಚರಿಕೆ ನೀಡಿದರು.
ವರ್ಗಾವಣೆಗೆ ಆದೇಶ: ನಂತರ ತುರುವೇಕೆರೆ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಅಭಿಲೇಖಾಲಯ, ಆಹಾರ ಶಾಖೆ, ಚುನಾವಣಾ ಶಾಖೆ, ಭೂ ದಾಖಲೆಗಳ ಶಾಖೆ ಪರಿಶೀಲಿಸುತ್ತಾ, ಸರ್ಕಾರಿ ಅಧಿಕಾರಿಗಳು, ನೌಕರರು ಜನ ಸಾಮಾನ್ಯರಿಗೆ ಪ್ರಾಮಾಣಿಕ ಸೇವೆ ನೀಡುವ ಮೂಲಕ ಇಲಾಖೆಗೆ ಉತ್ತಮ ಹೆಸರು ತರಬೇಕು, ಒಂದೇ ಸ್ಥಳದಲ್ಲಿ ಒಂದೇ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಂದ ಕರ್ತವ್ಯ ನಿರ್ಲಕ್ಷತೆ ಹೆಚ್ಚಾಗುವ ಸಾಧ್ಯತೆ ಇರುತ್ತದೆ, ಈ ನಿಟ್ಟಿನಲ್ಲಿ ದೀರ್ಘಾವಧಿಯಿಂದ ಒಂದೇ ಕಡೆ ಕೆಲಸ ಮಾಡುವವರನ್ನು ಬೇರೆಡೆ ವರ್ಗಾವಣೆ ಮಾಡಬೇಕೆಂದು ತಹಶೀಲ್ದಾರ್ ರೇಣುಕುಮಾರ್ ಅವರಿಗೆ ಸ್ಥಳದಲ್ಲಿಯೇ ಆದೇಶಿಸಿದರು.
ಅರ್ಜಿ ವಿಲೇವಾರಿ ಮಾಡದ ನೌಕರರ ಬಗ್ಗೆ ಸಾರ್ವಜನಿಕರಿಂದ ಪ್ರತಿ ದಿನ ದೂರು ಬರುತ್ತಲೇ ಇವೆ, ಮತ್ತೊಮ್ಮೆ ದೂರು ಬಂದರೆ ಅಂತಹವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರಲ್ಲದೆ, ಅನ್ನಭಾಗ್ಯ ಯೋಜನೆಯಡಿ ಹೊಸ ಪಡಿತರ ಚೀಟಿಗಾಗಿ ಸಲ್ಲಿಸಿದ ಅರ್ಜಿಗಳನ್ನು ಪರಿಶೀಲಿಸಿದ ಅವರು ಬಾಕಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ನಿರ್ದೇಶನ ನೀಡಿದರು.
ಕಚೇರಿ ಕೊಠಡಿಗಳನ್ನು ಪರಿಶೀಲಿಸಿ, ಕೊಠಡಿಗಳನ್ನು ತಮ್ಮ ಮನೆಯಂತೆಯೇ ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ತಿಳಿಸಿದರಲ್ಲದೆ ಕಂದಾಯ ಸಚಿವರು ಎಲ್ಲಾ ಕಚೇರಿಗೆ ಭೇಟಿ ನೀಡುವ ಕಾರ್ಯಕ್ರಮವಿದ್ದು, ಬಾಕಿ ಇರುವ ಭೂಮಿ ಪೆಂಡೆನ್ಸಿ ಹಾಗೂ ಚುನಾವಣೆ ಶಾಖೆಯಲ್ಲಿ ಬಾಕಿ ಇರುವ ನಮೂನೆ 6, 7, 8ರಡಿ ಸ್ವೀಕೃತ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕೆಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿ ಸಪ್ತಶ್ರೀ ಮತ್ತಿತರರು ಹಾಜರಿದ್ದರು.
Comments are closed.