ಕುರುಬರ ಹಾಸ್ಟೆಲ್ ಗೆ ಕಲ್ಲು ತೂರಾಟ ಖಂಡನೀಯ

32

Get real time updates directly on you device, subscribe now.


ತುಮಕೂರು: ಮಂಡ್ಯ ಜಿಲ್ಲೆ ಕೆರೆಗೋಡಿನ ಹನುಮಧ್ವಜ ವಿಚಾರವಾಗಿ ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಹಮ್ಮಿ ಕೊಂಡಿದ್ದ ಪ್ರತಿಭಟನೆಯ ವೇಳೆ ಕುರುಬರ ಹಾಸ್ಟೆಲ್ ಗೆ ಕಲ್ಲು ತೂರಾಟ ನಡೆಸಿ ಹಾಸ್ಟೆಲ್ ಕಟ್ಟಡದಲ್ಲಿ ತೂಗು ಹಾಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಭಕ್ತ ಕನಕದಾಸರ ಭಾವಚಿತ್ರಗಳನ್ನು ಒಳಗೊಂಡ ಫ್ಲೆಕ್ಸ್ ಹರಿದು ಹಾಕಿ ವಿಕೃತಿ ಮೆರೆದಿರುವ ಕಿಡಿಗೇಡಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜಿಲ್ಲಾ ಕುರುಬರ ಸಂಘ, ಕನಕ ಯುವ ಸೇನೆ, ಕರ್ನಾಟಕ ಪ್ರದೇಶ ಕುರುಬರ ಸಂಘ ವತಿಯಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಕುರುಬ ಸಮುದಾಯದ ಮುಖಂಡರು, ಸರಕಾರ ಈ ಕೂಡಲೇ ಪ್ರತಿಭಟನೆಯ ವೇಳೆ ರೇಕಾರ್ಡ್ ಆಗಿರುವ ವೀಡಿಯೋ ಪುಟೇಜ್ ಆಧಾರವಾಗಿಟ್ಟು ಕೊಂಡು ಫ್ಲೆಕ್ಸ್ ಹರಿದು ಹಾಕಿದ ಹಾಗೂ ಕುರುಬರ ಹಾಸ್ಟೆಲ್ ಗೆ ಕಲ್ಲೂ ತೂರಾಟ ಮಾಡಿ ಅದರ ಕಿಟಿಕಿ ಬಾಗಿಲುಗಳ ಗಾಜುಗಳನ್ನು ಒಡೆದು ಹಾಕಿದ ವ್ಯಕ್ತಿಗಳನ್ನು ಬಂಧಿಸಿ, ಕಠಿಣ ಶಿಕ್ಷೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಸುರೇಶ್.ಟಿ.ಆರ್. ಮಾತನಾಡಿ, ಹನುಮ ಧ್ವಜಕ್ಕೂ ಕುರುಬರಿಗೂ ಸಂಬಂಧವಿಲ್ಲ, ಹಾಗಿದ್ದರೂ ಪ್ರತಿಭಟನೆಯ ವೇಳೆ ಕುರುಬರ ಹಾಸ್ಟೆಲ್ ನ್ನು ಕೇಂದ್ರೀಕರಿಸಿ ದಾಳಿ ನಡೆದಿರುವುದು ಖಂಡನೀಯ, ಕುರಿ ಕಾಯುವ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬ ಎರಡು ಬಾರಿ ಮುಖ್ಯಮಂತ್ರಿಯಾಗಿರುವುದು ಇತರೆ ಸಮುದಾಯಗಳಿಗೆ ಸಹಿಸಲು ಸಾಧ್ಯವಿಲ್ಲದಂತಾಗಿ ಪ್ರತಿಭಟನೆಯ ನೆಪದಲ್ಲಿ ಕುರುಬರನ್ನು ಹೆದರಿಸುವ ತಂತ್ರಕ್ಕೆ ಕೈಹಾಕಿದ್ದಾರೆ, ಕುರುಬರು ಸಹ ರಾಜ್ಯದಲ್ಲಿ ಅತಿದೊಡ್ಡ ಜನಸಂಖ್ಯೆ ಹೊಂದಿದ್ದು, ಇವರ ಈ ಧೋರಣೆ ಹೀಗೆಯೇ ಮುಂದುವರೆದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದರು.
ಕನಕ ಯುವಸೇನೆಯ ಜಿಲ್ಲಾಧ್ಯಕ್ಷ ಕೆಂಪರಾಜು ಮಾತನಾಡಿ, ಮಂಡ್ಯದ ಕೆರಗೋಡಿನಲ್ಲಿ ನಡೆದಿರುವುದು ಅತ್ಯಂತ ಹೇಯವಾದುದು, ನೇರವಾಗಿ ಸಿದ್ದರಾಮಯ್ಯನವರನ್ನು ಎದುರಿಸಲಾಗದೆ ಕಿಡಿಗೇಡಿಗಳು ಸಮುದಾಯದ ಮಕ್ಕಳು ಕಲಿಯುತ್ತಿರುವ ಹಾಸ್ಟೆಲ್ ಮೇಲೆ ಕಲ್ಲು ತೂರಾಟ ನಡೆಸಿ ಬೇದರಿಕೆ ಒಡ್ಡುವ ತಂತ್ರಗಾರಿಕೆ ನಡೆಸಿದ್ದಾರೆ, ಈ ತಂತ್ರಗಳಿಗೆ, ಕುತಂತ್ರಗಳಿಗೆ ನಾವು ಹೆದರುವುದಿಲ್ಲ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ, ಕಾನೂನಿನ ಹೋರಾಟಗಳಿಗೆ ನಮ್ಮ ಅಭ್ಯಂತರವಿಲ್ಲ, ಎಲ್ಲರಿಗೂ ಪ್ರತಿಭಟಿಸುವ ಹಕ್ಕಿದೆ, ಹಾಗೆಂದ ಮಾತ್ರಕ್ಕೆ ಇನ್ನೊಂದು ಸಮುದಾಯದ ಆಸ್ತಿಪಾಸ್ತಿ ಹಾನಿ ಮಾಡಿ, ಗಾಸಿಗೊಳಿಸುವ ಪ್ರಯತ್ನ ಸಲ್ಲದು, ನಾವು ಕೂಡ ಸಂಘಟಿರಾಗಿದ್ದೆವೆ, ನಿಮಗೆ ಪ್ರತ್ಯುತ್ತರ ನೀಡುವಷ್ಟು ಶಕ್ತಿ ಎಂಬುದನ್ನು ನೀವುಗಳು ಅರ್ಥ ಮಾಡಿಕೊಳ್ಳಬೇಕು, ಇದು ಮುಂದುವರೆದರೆ ಅನಿವಾರ್ಯ ವಾಗಿ ನಾವು ಬೀದಿಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿ, ಹಿಂದೂ ಹೆಸರಿನಲ್ಲಿ ಗಲಾಟೆ ನಡೆಸುತ್ತಿರುವ ನಾಯಕರು ಅರ್ಥ ಮಾಡಿಕೊಳ್ಳಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನಕದಾಸರು ಇಬ್ಬರು ಸಹ ಹಿಂದೂಗಳೇ ಆಗಿದ್ದಾರೆ, ಹನುಮ ಧ್ವಜ ಅದು ಸರಕಾರ ಮತ್ತು ನಿಮ್ಮ ನಡುವಿನ ಹೋರಾಟ, ಅದಕ್ಕೂ ಕುರುಬರ ಸಂಘಕ್ಕೂ ಸಂಬಂಧವಿಲ್ಲ, ಆದರೆ ಕುರುಬರನ್ನು ಗುರಿಯಾಗಿಸಿಕೊಂಡು ಹೀನ ಕೃತ್ಯ ನಡೆಸಿದರೆ ಸಹಿಸಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಮಹಾಲಿಂಗಯ್ಯ, ವಕೀಲ ರಾಜೇಶ್, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಮಾಲೂರಪ್ಪ, ಸಿ.ಪುಟ್ಟರಾಜು, ಕುಮಾರ ಸ್ವಾಮಿ, ನರಸಿಂಹ ಮೂರ್ತಿ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಗೌರವಾಧ್ಯಕ್ಷ ರಾಜು, ಧರ್ಮರಾಜು, ಟಿ.ಈ.ರಘುರಾಮ್, ವಿರೂಪಾಕ್ಷ, ಟಿ.ಹೆಚ್.ಮಹದೇವ್ ಮತ್ತಿತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!