ತುಮಕೂರು: ಶಿಕ್ಷಣದಿಂದ ಮಾತ್ರ ಮನುಷ್ಯ ಸ್ವಾಭಿಮಾನ ಮತ್ತು ಸ್ವಾವಲಂಬನೆಯಿಂದ ಬದುಕಲು ಸಾಧ್ಯ, ಹಾಗಾಗಿ ಬೀದಿ ಬದಿ ವ್ಯಾಪಾರಿಗಳು ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವಂತೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಕಾರ್ಯದರ್ಶಿ ನ್ಯಾ.ನೂರುನ್ನಿಸಾ ಕರೆ ನೀಡಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ರಸ್ತೆ ಬದಿ ವ್ಯಾಪಾರಿಗಳ ಮಹಾ ಮಂಡಳ, ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ 4ನೇ ವರ್ಷದ ಬೀದಿ ಬದಿ ವ್ಯಾಪಾರಿಗಳ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ನಿಮ್ಮ ಮಕ್ಕಳು ನಿಮಗಿಂತ ನೆಮ್ಮದಿಯ ಜೀವನ ನಡೆಸಬೇಕೆಂದರೆ ಇಂದಿನಿಂದಲೇ ಅವರಿಗೆ ಒಳ್ಳೆಯ ಶಿಕ್ಷಣ ನೀಡಿ ಎಂದರು.
ಸಂವಿಧಾನದಲ್ಲಿ ಎಲ್ಲರೂ ಗೌರವಯುತವಾಗಿ ಬದುಕಲು ಬೇಕಾದ ಹಕ್ಕುಗಳನ್ನು ನೀಡಿದೆ, ಆ ಹಕ್ಕುಗಳ ನಿಮ್ಮವಾಗಬೇಕಾದರೆ ನೀವು ಸಂಘಟಿತರಾಗಿ ಹೋರಾಟ ನಡೆಸಬೇಕಾಗಿದೆ, ಜನರಿಗೆ ಗೌರವಯುತವಾದ ಬದುಕು ದೊರೆಯಬೇಕು ಎಂಬ ಉದ್ದೇಶದಿಂದಲೇ ಸರಕಾರ ಹಲವಾರು ಯೋಜನೆ ಜಾರಿಗೆ ತಂದಿದೆ, ಜೊತೆಗೆ ಅದರ ಮೇಲ್ವಿಚಾರಣೆಗೆ ಸಮಿತಿಗಳನ್ನು ರಚಿಸಿದೆ, ತುಮಕೂರು ಮಹಾ ನಗರ ಪಾಲಿಕೆಯಲ್ಲಿ ಬೀದಿಗಳ ವ್ಯಾಪಾರಿಗಳ ಕುಂದು ಕೊರತೆ ಆಲಿಸಲು ನಿವೃತ್ತ ನ್ಯಾಯಾಧೀಶರೊಬ್ಬರನ್ನು ಸರಕಾರ ನೇಮಕ ಮಾಡಿದೆ, ನಿಮ್ಮ ದುಖಃ ದುಮ್ಮಾನಗಳನ್ನು ಅವರ ಬಳಿ ಹೇಳಿಕೊಂಡಲ್ಲಿ ಪರಿಹಾರ ದೊರೆಯಲಿದೆ ಎಂದು ಸಲಹೆ ನೀಡಿದರು.
ಇಂದು ಮನೆಗಳ ನಡುವೆ ಗೋಡೆ ಎದ್ದಂತೆ ಮನಸ್ಸುಗಳ ನಡುವೆಯೂ ಗೋಡೆ ಎದ್ದಿವೆ, ಯಾವ ಧರ್ಮವೂ ಹಿಂಸೆ, ದ್ವೇಷ ಬೋಧಿಸುವುದಿಲ್ಲ, ಎಲ್ಲಾ ಧರ್ಮ ಗ್ರಂಥಗಳು ಒಳ್ಳೆಯದನ್ನೇ ಹೇಳಿವೆ, ಅವುಗಳೆಲ್ಲದರ ಸಾರವನ್ನು ನಮ್ಮ ಸಂವಿಧಾನದಲ್ಲಿ ಅಳವಡಿಸಲಾಗಿದೆ, ಹಾಗಾಗಿ ಎಲ್ಲಾ ಧರ್ಮ ಗ್ರಂಥಗಳಿಗಿಂತ ಸಂವಿಧಾನ ಶ್ರೇಷ್ಠವಾದುದ್ದು, ಅದರ ಅಡಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಗು ಘನತೆಯಿಂದ ಬದುಕಲು ಅವಕಾಶ ಕಲ್ಪಿಸಿದೆ, ಇನ್ನೊಬ್ಬನಿಗೆ ನೋವುಂಟು ಮಾಡದೆ, ಇನ್ನೊಬ್ಬರ ಹಕ್ಕನ್ನು ಕಸಿಯದೆ ಹೇಗೆ ನನ್ನ ಹಕ್ಕು ಮತ್ತು ಕರ್ತವ್ಯ ನಿಭಾಯಿಸಬಹುದು ಎಂಬ ಸಾಮಾನ್ಯ ಪ್ರಜ್ಞೆ ಪ್ರತಿಯೊಬ್ಬ ಪ್ರಜೆಯೂ ಬೆಳೆಸಿಕೊಂಡರೆ ಕೋರ್ಟ್, ಕಾನೂನು, ಪೊಲೀಸ್ ಠಾಣೆಗಳಿಂದ ದೂರ ಉಳಿಯ ಬಹುದು ಎಂದು ಕಿವಿಮಾತು ಹೇಳಿದರು.
ರಾಮರಾಜ್ಯದ ಬಗ್ಗೆ ಎಲ್ಲರೂ ಮಾತನಾಡುತ್ತೇವೆ, ರಾವಣ ಕೆಟ್ಟವನೆಂಬಂತೆ ನೋಡುತ್ತೇವೆ, ಆದರೆ ಎಂದಿಗೂ ಆತ ಸೀತೆಯ ಆಶಯಕ್ಕೆ ವಿರುದ್ಧವಾಗಿ ಆಕೆಯೊಂದಿಗೆ ನಡೆದುಕೊಳ್ಳಲಿಲ್ಲ, ಆಧುನಿಕ ಯುಗದಲ್ಲಿ ನೂರಾರು ರಾವಣರು ನಮ್ಮ ಸುತ್ತಮುತ್ತ ಇದ್ದಾರೆ, ಬಹಳ ಎಚ್ಚರಿಕೆಯಿಂದ ಹೆಣ್ಣು ಮಕ್ಕಳು ಇರಬೇಕಾಗಿದೆ, ಏನಾದರೂ ಆಗು ಮೊದಲು ಮಾನವನಾಗು ಎಂಬ ಕವಿ ವಾಣಿಯಂತೆ ನಾವೆಲ್ಲರೂ ನಡೆದುಕೊಳ್ಳಬೇಕಿದೆ, ಮಹಾತ್ಮಗಾಂಧಿ ಅವರ ರಾಮರಾಜ್ಯ ನಮ್ಮದಾಗಲಿ ಎಂದರು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹಿರೇಮಠದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಎಲ್ಲಾ ಅಸ್ತ್ರಗಳಿಗಿಂತ ಸಂಘಟನೆ ಎಂಬುದೇ ಪ್ರಬಲವಾಗಿದೆ, ಬಿಡಿ ಹೋರಾಟಗಳಿಂದ ಯಾವುದೇ ಪ್ರಯೋಜನವಿಲ್ಲ, ಹಾಗಾಗಿ ಎಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಇಳಿದಾಗ ಮಾತ್ರ ಸಂವಿಧಾನ ಬದ್ದವಾಗಿ ಸರಕಾರದ ಸವಲತ್ತು ಪಡೆಯಲು ಸಾಧ್ಯ, ಬೀದಿ ಬದಿ ವ್ಯಾಪಾರಗಳೆಂದರೆ ಭಿಕ್ಷೆ ಬೇಡಲು ಕುಳಿತವರಲ್ಲ ಅಥವಾ ಬಿಟ್ಟಿ ಭಾಗ್ಯಗಳಿಗೆ ಕಾದು ಕುಳಿತವರಲ್ಲ, ಇಡೀ ದಿನ ಕಷ್ಟಪಟ್ಟು ದುಡಿದು ಅದರಲ್ಲಿ ಬಂದ ಹಣದಲ್ಲಿ ಜೀವನ ನಡೆಸುವ ಸ್ವಾಭಿಮಾನಿಗಳು, ಹಾಗಾಗಿ ಎಲ್ಲರೂ ಸಂಘಟಿತರಾಗಿ, ಅಸಂಘಟಿತ ಎಂಬ ಪದ ಕಿತ್ತು ಹಾಕಿ ಎಂದರು.
ಶಿಕ್ಷಣ ಅತಿ ಮುಖ್ಯ, ಒಂದು ಕಾಲದಲ್ಲಿ ಶಿಕ್ಷಣ ದೊರೆಯದೆ ಇದ್ದಾಗ ಬ್ರಿಟಿಷರ ದಾಸ್ಯಕ್ಕೆ ತುತ್ತಾಗಿದ್ದೇವು, ಆ ವೇಳೆ ಶಿಕ್ಷಣ ಕಲಿತ ಮಹನೀಯರು ಭಾರತೀಯರ ಮೇಲಾಗುತ್ತಿರುವ ದಬ್ಬಾಳಿ, ದೌರ್ಜನ್ಯ, ಶೋಷಣೆ ತಿಳಿಸಿದ್ದರಿಂದಲೇ ಎಲ್ಲರೂ ಒಗ್ಗೂಡಿ ಸ್ವಾತಂತ್ರ ಹೋರಾಟ ರೂಪಿಸಲು ಸಾಧ್ಯವಾಯಿತು, ವಿದ್ಯೆ ನಿಮ್ಮಲ್ಲಿ ಸರಿ ತಪ್ಪುಗಳ ಅರಿವು ಮೂಡಿಸುವದಲ್ಲದೆ, ಹೋರಾಟದ ಮಾನೋಭಾವನೆ ಉಂಟು ಮಾಡುತ್ತದೆ, ಬೀದಿ ಬದಿ ವ್ಯಾಪಾರಿಗಳೆಂಬ ಕೀಳಿರಿಮೆ ಕಿತ್ತು ಹಾಕಿ ನೀವು ಪರೋಕ್ಷವಾಗಿ ಕಟ್ಟುತ್ತಿರುವ ತೆರಿಗೆ, ದೊಡ್ಡ ದೊಡ್ಡ ವ್ಯಾಪಾರಸ್ಥರು ಕಟ್ಟುವ ತೆರಿಗೆಗಿಂತಲೂ ಹೆಚ್ಚು ಮೌಲ್ಯಯುತ ವಾದುದ್ದು, ದೇಶದ ಆರ್ಥಿಕ ಬೆಳೆವಣಿಗೆಯಲ್ಲಿ ನಿಮ್ಮ ಪಾತ್ರವು ಇದೆ ಎಂದು ಹುರಿದುಂಬಿಸಿದರು.
ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಭದ್ರೇಗೌಡ, ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್, ಮಾರುತಿ, ಮೆಡಿಕಲ್ ಮಹೇಂದ್ರ, ಮನ್ನೋತ್, ಕಟ್ಟಡ ನಿರ್ಮಾಣ ಮತ್ತು ಅಸಂಘಟಿತ ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜು, ರಾಜ್ಯ ಕಾರ್ಯಾಧ್ಯಕ್ಷ ಆರ್.ಶ್ರೀನಿವಾಸ್, ತುಮಕೂರು ಜಿಲ್ಲಾ ಬೀದಿ ಬದಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಮಂಜುನಾಥ್, ಖಜಾಂಚಿ ಜಗದೀಶ್, ಸಂಘಟನಾ ಕಾರ್ಯದರ್ಶಿ ಲೋಕೇಶ್, ಪ್ರಭಾಕರ್, ಸಮಲತ, ಸುಜಾತ ಮತ್ತಿತರರು ಪಾಲ್ಗೊಂಡಿದ್ದರು.
Comments are closed.