ಕುಣಿಗಲ್: ಬೆಸ್ಕಾಂ ವಿಭಾಗೀಯ ಕಚೇರಿಯ ಮುಂಭಾಗದಲ್ಲಿನ ಮುಖ್ಯರಸ್ತೆಗೆ 11ಕೆವಿ ವಿದ್ಯುತ್ ಲೈನ್ ತುಂಡಾಗಿ ಬುಧವಾರ ಮಧ್ಯಾಹ್ನ ದಿಡೀರ್ ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗದೆ ಕೆಲಕಾಲ ಮುಖ್ಯರಸ್ತೆಯಲ್ಲಿ ಸಂಚಾರ ವ್ಯತ್ಯಯವಾಯಿತು.
ಪಟ್ಟಣದ ಬೆಸ್ಕಾಂ ವಿಭಾಗೀಯ ಕಚೇರಿ ಹಿಂದೆಯೆ ಕೆಪಿಟಿಸಿಎಲ್ ವಿತರಣೆ ಕೇಂದ್ರ ಇದೆ, ವಿತರಣೆ ಕೇಂದ್ರದಿಂದ ಹಲವು ಗ್ರಾಮಾಂತರ, ಪಟ್ಟಣಕ್ಕೆ ವಿದ್ಯುತ್ ಪೂರೈಕೆಗೆ 11ಕೆವಿ ಸೇರಿದಂತೆ ಅಧಿಕ ಸಾಮಾರ್ಥ್ಯದ ಲೈನ್ ಕಚೇರಿ ಮುಂಭಾಗ ಪಟ್ಟಣದ ಮುಖ್ಯರಸ್ತೆ ಹಾದು ಮತ್ತೊಂದು ಬದಿಗೆ ಹೋಗಿದೆ, ನಿಯಮಗಳ ಪ್ರಕಾರ ಈರೀತಿ ಮುಖ್ಯ ರಸ್ತೆಯಲ್ಲಿ ಅಧಿಕ ಸಾಮಾರ್ಥ್ಯದ ಲೈನ್ ಹೋದರೆ ಕೆಳಗೆ ರೋಡ್ ಕ್ರಾಸ್ ಗಾರ್ಡ್ ಹಾಕಬೇಕು, ಆದರೆ ಬೆಸ್ಕಾಂ ವಿಭಾಗೀಯ ಕಚೇರಿ ಮುಂದೆ ಗಾರ್ಡ್ ಹಾಕದ ಕಾರಣ, ಮಧ್ಯಾಹ್ನ ತುಂಡಾದ 11ಕೆವಿ ಲೈನ್ ರಸ್ತೆಗೆ ಬಿದ್ದಿತು, ಮುಂಭಾಗದಲ್ಲಿ ಸಾರ್ವಜನಿಕ ಆಸ್ಪತ್ರೆ, ಪೊಲೀಸ್ ಠಾಣೆ ಪಕ್ಕದಲ್ಲಿ ತಾಲೂಕು, ತಾಪಂ ಕಚೇರಿ ಇರುವ ಕಾರಣ ಸಹಜವಾಗಿ ಹೆದ್ದಾರಿಯಲ್ಲಿ ಜನದಟ್ಟಣೆ ಇರುತ್ತದೆ, ಲೈನ್ ರಸ್ತೆಗೆ ಬಿದ್ದದ್ದನ್ನು ಗಮನಿಸಿದ ಎಳನೀರು ವ್ಯಾಪಾರಿ, ಬೀದಿ ಬದಿ ವ್ಯಾಪಾರಿಗಳು, ಜರನ್ನು ಎಚ್ಚರಿಸಿ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆದರು. ಒಳಗಿದ್ದ ಬೆಸ್ಕಾಂ ಸಿಬ್ಬಂದಿ ಸಹ ರಸ್ತೆಗೆ ಓಡಿಬಂದರು, ಲೈನ್ ತುಂಡಾದ ಕೂಡಲೆ ವಿದ್ಯುತ್ ಸಂಚಾರ ಕಡಿತಗೊಂಡ ಹಾಗೂ ವಾಹನ ಸಂಚಾರ ತಡೆದ ಮೇರೆಗೆ ಯಾವುದೆ ಅನಾಹುತ ಸಂಭವಿಸಲಿಲ್ಲ, ಘಟನೆ ಬಗ್ಗೆ ಬೆಸ್ಕಾಂ ನಿರ್ಲಕ್ಷ್ಯ ಖಂಡಿಸಿದ ದಿನೇಶ್ ಇತರರು ಬೆಸ್ಕಾಂ ಸಿಬ್ಬಂದಿ ನಿಯಮಪಾಲನೆ ಮಾಡುವಲ್ಲಿ ವಿಫಲವಾಗಿದ್ದಾರೆ, ವಿಭಾಗೀಯ ಕಚೇರಿ ಮುಂದೆಯೆ ಗಾರ್ಡ್ ಅಳವಡಿಸಿಲ್ಲದೆ ಇರುವುದು ಇಲಾಖೆಯ ಕಾರ್ಯ ವೈಖರಿಗೆ ಸಾಕ್ಷಿಯಾಗಿದೆ, ಒಂದು ವೇಳೆ ಲೈನ್ ನಲ್ಲಿ ವಿದ್ಯುತ್ ಇಲ್ಲದೆ ಇದ್ದರೂ ಯಾವುದೇ ವಾಹನ ವೇಗವಾಗಿ ಹೋದಲ್ಲಿ ಲೈನ್ ವಾಹನಕ್ಕೆ ಸಿಲುಕಿ ಅಕ್ಕಪಕ್ಕದ ಕಂಬಗಳು ರಸ್ತೆಗೆ ಬಿದ್ದು ಮತ್ತಷ್ಟು ಅನಾಹುತ ಆಗುತ್ತಿತ್ತು, ಇನ್ನಾದರೂ ಇಂತಹ ದುರಂತ ತಪ್ಪಿಸಲು ಅಗತ್ಯ ಎಚ್ಚರಿಕೆ ಕ್ರಮ ವಹಿಸಬೇಕೆಂದು ಒತ್ತಾಯಿಸಿದ್ದಾರೆ.
ಬೆಸ್ಕಾಂ ಸಿಬ್ಬಂದಿ ಕೂಡಲೆ ಲೈನ್ ದುರಸ್ತಿಗೊಳಿಸುವ ಕೆಲಸಕ್ಕೆ ಮುಂದಾದರು, ಈ ಬಗ್ಗೆ ಎಇಇ ವೀರಭದ್ರಚಾರ್ ಪ್ರತಿಕ್ರಿಯಿಸಿ ಅಧಿಕ ಒತ್ತಡದಿಂದ ಲೈನ್ ತುಂಡಾಗಿರುವ ಸಾಧ್ಯತೆ ಇದ್ದು, ಈಗಾಗಲೆ ಹಿಂದೆ ಗಾರ್ಡ್ ಹಾಕಿದ್ದು ಲಾರಿಯೊಂದು ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮ ಗಾರ್ಡ್ ತುಂಡಾಗಿತ್ತು, ಕೂಡಲೆ ಗಾರ್ಡ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
Comments are closed.