ಎಲ್ಲಾ ಜನಪರ ಯೋಜನೆ ಮುಂದುವರಿಯಲಿವೆ

ಟೀಕಿಸುವವರಿಗೆ ಅಭಿವೃದ್ಧಿ ಕಾರ್ಯಗಳೇ ಉತ್ತರ: ಡಾ.ಪರಮೇಶ್ವರ

29

Get real time updates directly on you device, subscribe now.


ತುಮಕೂರು: ಕಳೆದ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿ ಯೋಜನೆಗಳ ಭರವಸೆಯನ್ನು ನಮ್ಮ ಪಕ್ಷ ನೀಡಿತ್ತು, ಅನೇಕರಿಗೆ ಗ್ಯಾರಂಟಿ ಕಾರ್ಡ್ಗಳ ಮೇಲೆ ಭರವಸೆ ಇರಲಿಲ್ಲ, ಸರ್ಕಾರ ರಚನೆಯಾದ ಬಳಿಕ 36 ಸಾವಿರ ಕೋಟಿ ರೂ. ಖರ್ಚು ಮಾಡಿ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸಿದ್ದೇವೆ, ಮುಂಬರುವ ಆರ್ಥಿಕ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 58 ಸಾವಿರ ಕೋಟಿ ರೂ. ಖರ್ಚಾಗಲಿದ್ದು, ಈ ಎಲ್ಲ ಜನಪರ ಯೋಜನೆ ಮುಂದುವರಿಯಲಿವೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಕೊರಟಗೆರೆ ವಿಧಾನಸಭಾ ಕ್ಷೇತ್ರದ ಕೋರ ಹೋಬಳಿ ವ್ಯಾಪ್ತಿಯ, ಕೆಸ್ತೂರು, ದೇವಲಾಪುರ ಹಾಗೂ ಚಿಕ್ಕತೊಟ್ಲುಕೆರೆ ಗ್ರಾಮ ಪಂಚಾಯಿತಿಗಳಲ್ಲಿ ಜನಸಂಪರ್ಕ ಸಭೆ ನಡೆಸಿ ಜನರ ಕುಂದು- ಕೊರತೆ ಆಲಿಸಿ, ಬಳಿಕ ಜನರಿಗೆ ಐದು ಗ್ಯಾರಂಟಿ ಯೋಜನೆಗಳ ಸವಲತ್ತು ಪತ್ರ ವಿತರಿಸಿ ಮಾತನಾಡಿ, ನಮ್ಮ ಸರ್ಕಾರವನ್ನು ಟೀಕೆ ಮಾಡುವವರಿಗೆ ಎಂಟು ತಿಂಗಳ ಅವಧಿಯಲ್ಲಿ ನಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳೇ ಸೂಕ್ತ ಉತ್ತರ ಎಂದರು.

ಬಡತನ ನಿರ್ಮೂಲನೆಗೆ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಯೋಜನೆ ನೀಡುವುದಾಗಿ ಭರವಸೆ ನೀಡಿದ್ದೆವು, ಐದು ಗ್ಯಾರಂಟಿಗಳನ್ನು ಕೊಟ್ಟ ಮಾತಿನಂತೆ ಅನುಷ್ಠಾಗೊಳಿಸಿದ್ದೇವೆ, ಯಾವುದೇ ಟೀಕೆ ಟಿಪ್ಪಣಿ ಲೆಕ್ಕಿಸದೆ, ಬಡ ಜನರಿಗೆ ಕಾರ್ಯಕ್ರಮ ಕೊಟ್ಟಿದ್ದೇವೆ, ಈ ಯೋಜನೆಗಳಿಂದ ಸರ್ಕಾರದ ಬೊಕ್ಕಸಕ್ಕೆ ಆಗಲಿ, ಇತರೆ ಅಭಿವೃದ್ಧಿ ಕಾರ್ಯಗಳಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ ಎಂದರು.
ಬಡತನ ನಿರ್ಮೂಲನೆಗೆ ಯಾವುದೇ ಸರ್ಕಾರವಾಗಲಿ ಇಷ್ಟೊಂದು ಅನುದಾನ ಖರ್ಚು ಮಾಡಿಲ್ಲ, ಇದೇ ಮೊದಲ ಬಾರಿಗೆ ಬಡವರಿಗೆ ದೊಡ್ಡ ಮಟ್ಟದ ಸಹಾಯವಾಗಲು ಕೆಲಸ ಮಾಡಿರುವುದಕ್ಕೆ ಸಹಿಸದ ವಿಪಕ್ಷದವರು ಅನವಶ್ಯಕ ಟೀಕೆ ಮಾಡುತ್ತಿದ್ದಾರೆ, ಹಣಕಾಸಿನ ಲೆಕ್ಕಚಾರ ಇಟ್ಟುಕೊಂಡೇ ಚುನಾವಣೆ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಯೋಜನೆ ಘೋಷಿಸಿದ್ದೆವು, ಮಧ್ಯವರ್ತಿಗಳು ತಿನ್ನುವುದಕ್ಕೆ ಅವಕಾಶವಿಲ್ಲದಂತೆ ಮಾಡಿದ್ದೇವೆ, ಬಡವರಿಗೆ ಸೇರಬೇಕಾದ ಹಣ ಸೋರಿಕೆಯಾಗದಂತೆ ಅನುಷ್ಠಾನಗೊಳಿಸಿದ್ದೇವೆ,
ಕೃಷಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಬಡಜನರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆ ಅನುಷ್ಠಾನಗೊಳಿಸಿದ್ದೇವೆ, 10 ಕೆಜಿ ಅಕ್ಕಿ ನೀಡಬೇಕೆಂಬುದು ಉದ್ದೇಶ, ನಿಮ್ಮ ತೆರಿಗೆ ಹಣ ನಿಮಗೆ ಕೊಡುವುದು ತಪ್ಪ, ಇದಕ್ಕೆಲ್ಲ ಟೀಕೆ ಮಾಡಿದರೆ ಹೆದರುವುದಿಲ್ಲ, ಮುಂದಿನ ಐದು ವರ್ಷದವರೆಗೆ ಗ್ಯಾರಂಟಿ ಯೋಜನೆಗಳನ್ನು ಮುಂದುವರೆಸುತ್ತೇವೆ, ಮಹಿಳೆಯರ ಜೀವನ ಸರಳಗೊಳಿಸಿದ್ದೇವೆ, ವಿದ್ಯಾವಂತ ನಿರುದ್ಯೋಗ ಯುವಕರಿಗೆ ಕೆಲಸ ಸಿಗುವವರೆಗೆ ಸಹಾಯ ಮಾಡಿದ್ದೇವೆ, ನುಡಿದಂತೆ ನಡೆದುಕೊಂಡಿರುವುದು ತಪ್ಪೇ ಎಂದು ಪ್ರಶ್ನಿಸಿದರು.

ವಸಂತಾನರಸಾಪುರ ಕೈಗಾರಿಕೆ ಪ್ರದೇಶ ಇರುವುದರಿಂದ ಯುವಕರಿಗೆ ಉದ್ಯೋಗಾವಕಾಶ ಹೆಚ್ಚಿರುತ್ತವೆ, ನಮ್ಮ ಮಕ್ಕಳು ಐಟಿಐ, ಡಿಪ್ಲೋಮಾ ಕೋರ್ಸ್ ಕಲಿತರೆ ಅವರಿಗೆ ಕೆಲಸ ಸುಲಭವಾಗಿ ಸಿಗುತ್ತದೆ, ಕೋರ ವ್ಯಾಪ್ತಿಯಲ್ಲಿ ಐಟಿಐ, ಡಿಪ್ಲೋಮಾ ಕಾಲೇಜು ಆರಂಭಿಸಲಾಗುವುದು, ಚುನಾವಣೆಯ ಪ್ರಣಾಳಿಕೆಯನ್ನು ನಾನೇ ಬರೆದಿದ್ದು, 2013ರ ನಮ್ಮ ಪಕ್ಷ ನೀಡಿದ್ದ 165 ಭರವಸೆಗಳ ಪೈಕಿ 158 ಭರವಸೆ ಈಡೇರಿಸಿತ್ತು, ಈ ಬಾರಿಯು ಸಹ ನಾವು ಕೊಟ್ಟ ಎಲ್ಲಾ ಭರವಸೆಗಳನ್ನು ಹಂತಹಂತವಾಗಿ ಈಡೇರಿಸುತ್ತೇವೆ ಎಂದರು.
ಮೊದಲ ಸಂಪುಟ ಸಭೆಯಲ್ಲಿ 10 ಕೆಜಿ ನೀಡುವುದಾಗಿ ಭರವಸೆ ನೀಡಿದ್ದೆವು, ಕೇಂದ್ರ ಸರ್ಕಾರ ಇನ್ನೈದು ಕೆಜಿ ನೀಡಲಿಲ್ಲ, ಇದರ ಹಣವನ್ನು ನೀಡುತ್ತೇವೆ ಎಂದರು ಅಕ್ಕಿ ನೀಡಲಿಲ್ಲ, ಹೀಗಾಗಿ ಐದು ಕೆಜಿ ಅಕ್ಕಿಯ ಹಣವನ್ನು ಕಾರ್ಡ್ದಾರರ ಖಾತೆಗೆ ಹಾಕುತ್ತಿದ್ದೇವೆ, ಜನರಿಗೆ ನೇರವಾಗಿ ಸರ್ಕಾರದ ಸವಲತ್ತು ತಲುಪುತ್ತಿರಲಿಲ್ಲ, ಹಣ ಹಿಡಿದುಕೊಳ್ಳುವುದು ಸರ್ಕಾರದ ಗಮನಕ್ಕೆ ಬಂದಿತ್ತು, ಹೀಗಾಗಿ ಮಹಿಳೆಯರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತಿದೆ, ಕೋರ ಗ್ರಾಪಂ ವ್ಯಾಪ್ತಿಯಲ್ಲಿ 1380 ಮಹಿಳೆಯರು ಗೃಹಲಕ್ಷ್ಮೀ ಯೋಜನೆಯ ಸವಲತ್ತು ಪಡೆಯುತ್ತಿದ್ದಾರೆ, ತಾಂತ್ರಿಕ ಸಮಸ್ಯೆಯಿಂದ 6 ಮಹಿಳೆಯರಿಗೆ ಸೌಲಭ್ಯ ಸಿಕ್ಕಿಲ್ಲ, ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಜಿಲ್ಲೆಯಲ್ಲಿ 30 ಸಾವಿರ ಫಲಾನುಭವಿಗಳಿಗೆ ಸುಮಾರು 700 ಕೋಟಿ ರೂ. ಸವಲತ್ತು, ಅಭಿವೃದ್ಧಿ ಕಾಮಗಾರಿ ನೆರವೇರಿಸಿದ್ದೇವೆ, ಜನರ ಯಾವುದೇ ಕೆಲಸ ಕಾರ್ಯಗಳನ್ನು ಸರ್ಕಾರ ನಿಲ್ಲಿಸಿಲ್ಲ, ಇದನ್ನು ತಾವು ಕಣ್ಣಾರೆ ಕಂಡಿದ್ದೀರಿ, ಯಾರಾದರೂ ಸರ್ಕಾರದ ಬಗ್ಗೆ ಅಪಪ್ರಚಾರ ಮಾಡಿದರೆ ಈ ವಿಚಾರವನ್ನು ಅವರಿಗೆ ಎಚ್ಚರಿಸಬೇಕು, ಅಕ್ಕಿ ರಾಂಪುರದಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಗ್ರಾಪಂ ಕಾರ್ಯಾಲಯ ಕಟ್ಟಿಸಿ ಕೊಡಲಾಗಿದೆ, ಅದೇರೀತಿ ಕೋರಾ ಗ್ರಾಪಂ ಕಾರ್ಯಾಲಯ ನಿರ್ಮಿಸಲಾಗುವುದು, ಕಾರ್ಯಾಲಯವನ್ನು ಬೇರೆಡೆ ಸ್ಥಳಾಂತರಿಸಿ, ಪಂಚಾಯಿತಿಯಲ್ಲಿರುವ 37 ಲಕ್ಷ ರೂ. ಅನುದಾನದಿಂದ ಕಾಮಗಾರಿ ಆರಂಭಿಸಿ, ತದನಂತರ ಅನುದಾನ ಬಿಡುಗಡೆ ಮಾಡಲಾಗುವುದು ಎಂದರು.
ಜಿಲ್ಲಾಧಿಕಾರಿ ಶುಭಾ ಕಲ್ಯಾಣ್, ಸಿಇಒ ಜಿ.ಪ್ರಭು, ಎಸ್ ಪಿ ಅಶೋಕ್, ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ತಾಲ್ಲೂಕು ಅಧಿಕಾರಿಗಳು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!