ತುಮಕೂರು: ವಿಶ್ವ ಕ್ಯಾನ್ಸರ್ ಜಾಗೃತಿ ದಿನಾಚರಣೆ ಅಂಗವಾಗಿ ಶನಿವಾರ ನಗರದ ಐಎಂಎ ಸಭಾಂಗಣದಲ್ಲಿ ಕ್ಯಾನ್ಸರ್ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ವಿವಿಧೆಡೆಗಳಿಂದ ಆಗಮಿಸಿದ್ದ ನೂರಾರು ಜನ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಶಿಬಿರದ ಪ್ರಯೋಜನ ಪಡೆದರು.
ಭಾರತೀಯ ವೈದ್ಯಕೀಯ ಸಂಘ ಹಾಗೂ ಸರ್ಜಿಕಲ್ ಸೊಸೈಟಿಯ ಜಿಲ್ಲಾ ಶಾಖೆ, ಆಸ್ಟರ್ ಸಿಎಂಐ ಆಸ್ಪತ್ರೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಶಿಬಿರದಲ್ಲಿ ತಜ್ಞವೈದ್ಯರು ಪಾಲ್ಗೊಂಡು ತಪಾಸಣೆ ಮಾಡಿದರು.
ಶಿಬಿರದಲ್ಲಿ ಉಚಿತವಾಗಿ ವೈದ್ಯರೊಡನೆ ಸಮಾಲೋಚನೆ, ಸೀರಮ್ ಪಿಎಸ್ಎ ಪರೀಕ್ಷೆ, ಫೇಕಲ್ ಇಮ್ಯುನೊಕೆಮಿಕಲ್ ಟೆಸ್ಟ್, ಸ್ತನ ಸ್ಕ್ರೀನಿಂಗ್, ಪ್ಯಾಪ್ ಸ್ಮೀಯರ್ ಪರೀಕ್ಷೆ ನಡೆಸಲಾಯಿತು, ಐಎಂಎ ತುಮಕೂರು ಅಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ, ಕಾರ್ಯದರ್ಶಿ ಡಾ.ಜಿ.ಮಹೇಶ್, ಅಸೋಸಿಯೇಷನ್ ಆಫ್ ಸರ್ಜನ್ ಇಂಡಿಯಾದ ತುಮಕೂರು ಘಟಕ ಅಧ್ಯಕ್ಷ ಡಾ.ಪ್ರಶಾಂತ್ ಬಿ.ನಿರ್ವಾಣಿ ರಾವ್, ಕಾರ್ಯದರ್ಶಿ ಡಾ.ಚೇತನ್, ಸರ್ಜಿಕಲ್ ಆಂಕೋಲಜಿ ಸಲಹೆಗಾರ ಡಾ.ಜಿ.ಗಿರೀಶ್, ಡಾ.ದರ್ಶನ್ ಪಾಟೀಲ್, ವಿಕಿರಣ ಆಂಕೋಲಜಿ ಸಲಹೆಗಾರರದ ಡಾ.ಎನ್.ಸುನೀತಾ, ಡಾ.ಸಿ.ಹೆಚ್.ಪುಷ್ಪಾ ನಾಗ್ ಶಿಬಿರದ ನೇತೃತ್ವ ವಹಿಸಿದ್ದರು.
ಈ ವೇಳೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಐಎಂಎ ತುಮಕೂರು ಅಧ್ಯಕ್ಷ ಡಾ.ಹೆಚ್.ವಿ.ರಂಗಸ್ವಾಮಿ, ಮೊದಲು ಇದ್ದಂತೆ ಈಗ ಕ್ಯಾನ್ಸರ್ ಬಗ್ಗೆ ಭಯಪಡುವುದು ಬೇಡ, ಕ್ಯಾನ್ಸರ್ ಅನ್ನು ಆರಂಭದಲ್ಲೇ ಗುರುತಿಸಿ ಗುಣಪಡಿಸಲು ಅವಕಾಶವಿದೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಂತಹ ಸಾಕಷ್ಟ ಕಾರ್ಯಕ್ರಮ ಸರ್ಕಾರ, ವಿವಿಧ ಸಂಸ್ಥೆಗಳು ಮಾಡಲಾಗುತ್ತಿವೆ ಎಂದರು.
ಆರೈಕೆಯ ಅಂತರ ಮುಚ್ಚಿ ಎಂಬ ಘೋಷಣೆಯೊಂದಿಗೆ ಈ ಬಾರಿ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ ಆಚರಿಸಲಾಗುತ್ತಿದೆ, ಆರಂಭದ ಹಂತದಲ್ಲೇ ಕ್ಯಾನ್ಸರ್ ಪತ್ತೆ ಮಾಡಿದರೆ ಚಿಕಿತ್ಸೆ ನೀಡಿ, ಗುಣ ಪಡಿಸಬಹುದು, ಆದರೆ ನಮ್ಮಲ್ಲಿ ಕ್ಯಾನ್ಸರ್ ಪತ್ತೆ ವಿಳಂಬವಾಗುತ್ತಿದೆ, ಕಡೆಯ ಹಂತದಲ್ಲಿ ಪತ್ತೆ ಮಾಡುವುದರಿಂದ ಅಪಾಯ ಸಂಭವಿಸುತ್ತದೆ, ಪ್ರತಿಯೊಬ್ಬರೂ ಐದು ವರ್ಷಕ್ಕೊಮ್ಮೆ ಕ್ಯಾನ್ಸರ್ ತಪಾಸಣೆ ಮಾಡಿಸಿಕೊಂಡರೆ ಈ ಕಾಯಿಲೆಯಿಂದ ಮುಕ್ತರಾಗಬಹುದು, ಈ ಬಗ್ಗೆ ವಿವಿಧ ಹಂತದಲ್ಲಿ ಜನ ಜಾಗೃತಿ ಮಾಡಲಾಗುತ್ತಿದೆ ಎಂದು ಹೇಳಿದರು.
ಸರ್ಜಿಕಲ್ ಆಂಕೋಲಜಿ ಸಲಹೆಗಾರ ಡಾ.ಜಿ.ಗಿರೀಶ್ ಮಾತನಾಡಿ, ಒಂದೊಂದು ಮಾದರಿ ಕ್ಯಾನ್ಸರ್ಗೂ ಒಂದೊಂದು ರೋಗ ಲಕ್ಷಣ ಕಂಡು ಬರುತ್ತವೆ, ಕೆಲವೊಮ್ಮೆ ಲಕ್ಷಣ ಕಂಡು ಬರುವುದಿಲ್ಲ, ನಿಯಮಿತ ತಪಾಸಣೆಯಿಂದ ಕ್ಯಾನ್ಸರ್ ತಪಾಸಣೆ ಮಾಡಿ ಗುಣಪಡಿಸಬಹುದು ಎಂದರು.
ಸ್ತನ ಕ್ಯಾನ್ಸರ್ ಕುರಿತು ಡಾ.ಎನ್.ಸುನೀತಾ ಮಾತನಾಡಿ, ಮಹಿಳೆಯರಲ್ಲಿ ಕಂಡುಬರುವ ಕ್ಯಾನ್ಸರ್ ನಲ್ಲಿ ಶೇಕಡ 26 ರಷ್ಟು ಸ್ತನ ಕ್ಯಾನ್ಸರ್ ಇರುತ್ತದೆ, ಅರಿವಿನ ಕೊರತೆ, ತಪಾಸಣೆಯ ಹಿಂಜರಿಕೆಯಿಂದಾಗಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಪ್ರಕರಣ ಹೆಚ್ಚಾಗುತ್ತಿವೆ, ಮೊಳಕೆಯ ಹಂತದಲ್ಲೇ ಪತ್ತೆ ಮಾಡಿದರೆ ಚಿಕಿತ್ಸೆ ಮೂಲಕ ಸ್ತನ ಕ್ಯಾನ್ಸರ್ ಗುಣಪಡಿಸಬಹುದು ಎಂದರು.
ಗರ್ಭ ಕಂಠ ಕ್ಯಾನ್ಸರ್ ಕುರಿತು ಡಾ.ಪುಷ್ಪಾ ನಾಗ್ ಮಾತನಾಡಿ, ಈ ಕ್ಯಾನ್ಸರ್ ನ ಲಕ್ಷಣಗಳು ಪ್ರಮುಖವಾಗಿ ಕಂಡು ಬಾರದಿದ್ದರೂ ಹೊಟ್ಟೆ ನೋವು, ಬೆನ್ನು ನೋವು, ಅಸ್ವಾಭಾವಿಕ ರಕ್ತಸ್ರಾವ ಈ ಕ್ಯಾನ್ಸರ್ ಲಕ್ಷಣಗಳಾಗಿರಬಹುದು, ಈ ಕ್ಯಾನ್ಸರ್ ಗೆ ಕಾರಣವಾಗುವ ಹೆಚ್ ಪಿ ವಿ ವೈರಸ್ ಲೈಂಗಿಕ ಚಟುವಟಿಕೆಯಿಂದ ಹರಡುತ್ತದೆ, ವರ್ಷಕ್ಕೊಮ್ಮೆ ತಪಾಸಣೆ ಮಾಡಿಸಿಕೊಂಡರೆ ಗರ್ಭ ಕಂಠ ಕ್ಯಾನ್ಸರ್ ಅನ್ನು ಆರಂಭದಲ್ಲೇ ಪತ್ತೆ ಮಾಡಿ ಗುಣಪಡಿಸಬಹುದು ಎಂದು ಹೇಳಿದರು.
ಡಾ.ಮಂಜುನಾಥ್, ಡಾ.ಅನಿತಾ ಬಿ.ಗೌಡ ಮತ್ತಿತರರು ಭಾಗವಹಿಸಿದ್ದರು.
Comments are closed.