ತುಮಕೂರು: ಕೃತಕ ಬುದ್ಧಿಮತ್ತೆ ಸೃಜನಶೀಲತೆ ಕಸಿದುಕೊಂಡಿದೆ, ಬುದ್ಧಿಗೆ ಸೂಚನೆ ಕೊಡುವ ಅಧಿಕಾರ ಕಳೆದು ಕೊಂಡಿದ್ದೇವೆ, ವರ್ಷಗಳು ಕೆಲಸ ಮಾಡಿ ತಯಾರಾಗುತ್ತಿದ್ದ ಸಂಶೋಧನ ಪ್ರಸ್ತಾವನೆಗಳು, ಪ್ರಸ್ತುತ, ವಿಷಯದ ಸಂಶೋಧನೆಯೇ ಇಲ್ಲದೆ ಒಂದು ರಾತ್ರಿಯಲ್ಲಿ ತಯಾರಾಗುತ್ತಿವೆ, ಇದರಿಂದ ನಕಲು ಪ್ರಸ್ತಾವನೆಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ದಾವಣಗೆರೆ ವಿವಿಯ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಕಳವಳ ವ್ಯಕ್ತಪಡಿಸಿದರು.
ತುಮಕೂರು ವಿಶ್ವ ವಿದ್ಯಾಲಯ ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗ ಆಯೋಜಿಸಿದ್ದ ಮಾದರಿ ಸಂಶೋಧನ ಪ್ರಸ್ತಾವನೆ ಸಿದ್ಧಪಡಿಸುವುದು, ವಿಧಾನಗಳು ಮತ್ತು ತಂತ್ರಗಳು ಕುರಿತ ರಾಷ್ಟ್ರೀಯ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಗಾಗಿ ಯಾವುದೇ ಅನುದಾನ ನೀಡುತ್ತಿಲ್ಲ, ಇರುವ ಅನುದಾನದಲ್ಲೇ ಎಲ್ಲಾ ವಿಭಾಗಗಳ ಅಭಿವೃದ್ಧಿಗಾಗಿ ಕುಲಪತಿಗಳು ಶ್ರಮಿಸುತ್ತಿದ್ದೇವೆ, ಸಂಶೋಧನೆ, ಅಭಿವೃದ್ಧಿಗಾಗಿ ಸರ್ಕಾರದ ಸಹಾಯ ವಿವಿಗಳಿಗೆ ಅವಶ್ಯಕವಾಗಿ ಬೇಕಾಗಿದೆ, ವಿವಿಧ ವಿಭಾಗಗಳು ಸಲ್ಲಿಸುವ ಸಂಶೋಧನ ಪ್ರಸ್ತಾವನೆಗಳನ್ನು ಧನ ಸಹಾಯ ಆಯೋಗಗಳು ಒಪ್ಪಿದರೆ ಅದರಿಂದ ಬಂದ ಹಣದಲ್ಲಿ ಸಂಶೋಧನೆ ನಡೆಯುತ್ತಿವೆ, ಸಂಶೋಧನೆಗಳನ್ನು ನಿರ್ಲಕ್ಷಿಸುವುದು ಶಿಕ್ಷಣಕ್ಕೆ ಪೆಟ್ಟುಬಿದ್ದಂತೆ ಎಂದು ಬೇಸರ ವ್ಯಕ್ತಪಡಿಸಿದರು.
ಭವಿಷ್ಯದ ಉಪಯೋಗಗಳನ್ನು ಗಮನದಲ್ಲಿರಿಸಿಕೊಂಡು ಸಂಶೋಧನ ಪ್ರಸ್ತಾಪಗಳನ್ನು ಸಲ್ಲಿಸಬೇಕು, ಸಂಶೋಧನೆ ನಡೆಸುವಾಗಷ್ಟೇ ಅದರ ಸಾಧಕ ಬಾಧಕಗಳ ಬಗ್ಗೆ ನಮಗೆ ಅರಿವಾಗುವುದು, ಸಂಪನ್ಮೂಲಗಳು, ಮಾಹಿತಿ ಲಭ್ಯವಿದ್ದರೆ ಮಾತ್ರ ಸೂಕ್ತ ವಿಷಯ ಆಯ್ಕೆ ಮಾಡಿಕೊಳ್ಳಬೇಕು, ಸಂಶೋಧನೆಯ ಸಮಯದಲ್ಲಿ ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ವಿಷಯದ ಕುರಿತು ಅಧ್ಯಯನ ನಡೆಸಬೇಕು ಎಂದರು.
ಕೇವಲ ಒಂದು ದಿನದಲ್ಲಿ ತಯಾರಾದ ಸಂಶೋಧನ ಪ್ರಸ್ತಾವನೆಗಳಿಗೆ ಭವಿಷ್ಯವಿರುವುದಿಲ್ಲ, ಪ್ರಶ್ನೆಗಳಾಧಾರಿತ ತಯಾರಾದ ಪ್ರಸ್ತಾವನೆಗಳಿಂದ ದೀರ್ಘ ಕಾಲದ ಉಪಯೋಗವಿದೆ, ಜ್ಞಾನಕ್ಕಾಗಿ ಸಂಶೋಧನೆ ನಡೆಸುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಹೇಳಿದರು.
ಸಂಶೋಧನೆಯ ಪ್ರಸ್ತಾವನೆ ಸ್ಪಷ್ಟವಿರಬೇಕು, ನಕಲು ಮಾಡಬಾರದು, ಸಾಹಿತ್ಯ ವಿಮರ್ಶೆಯಲ್ಲಿ ಹೊಸ ವಿಷಯಗಳನ್ನು ಸೇರಿಸಬೇಕು, ಸಕಾರಾತ್ಮಕ ಕಲ್ಪನೆ ಮತ್ತು ಉದ್ದೇಶಗಳನ್ನು ಬರೆಯಬೇಕು, ಸಂಶೋಧನ ವಿಧಾನ ವಿಭಿನ್ನವಾಗಿರಬೇಕು, ಸಂಶೋಧನೆಯ ಮಹತ್ವ ಕುರಿತು ಕಾಳಜಿ ವಹಿಸಬೇಕು, ನೈತಿಕ ಪರಿಗಣನೆ ಗಮನದಲ್ಲಿಟ್ಟುಕೊಂಡು ಪ್ರಸ್ತಾವನೆ ಬರೆಯಬೇಕು, ಪರಿಷ್ಕರಣೆ ಮತ್ತು ಪ್ರತಿಕ್ರಿಯೆ ಸಂಶೋಧನೆಯಲ್ಲಿ ಬಹಳ ಮುಖ್ಯ ಎಂದು ತಿಳಿಸಿದರು.
ತುಮಕೂರು ವಿವಿ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಮಾತನಾಡಿ, ನವ ಆಲೋಚನೆ ರೂಪಿಸುವುದು ಮತ್ತು ಸಂಶೋಧನೆಯ ಮೇಲೆ ಕೇಂದ್ರೀಕರಿಸುವುದು ಬಹಳ ಮುಖ್ಯ, ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯು ವಿಶ್ವ ವಿದ್ಯಾಲಯಗಳ ನಿರ್ಣಾಯಕ ಅಂಶವಾಗಿದೆ, ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನ ಸಂಸ್ಕೃತಿಯ ಕೊರತೆಯನ್ನು ನಾವು ಕಾಣಬಹುದು, ಪದವಿಯ ಹಂತದಲ್ಲಿ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿದರೆ, ಸ್ನಾತಕೋತ್ತರ ಪದವಿಯ ಸಮಯದಲ್ಲಿ ಸಂಶೋಧನ ಶಿಕ್ಷಣಕ್ಕೆ ಒತ್ತು ನೀಡಬೇಕು, ಇದರಿಂದ ಪ್ರಶ್ನೆಗಳನ್ನು ವಿಷಯಗಳಾಗಿ ಪರಿವರ್ತಿಸುವ ಮನೋಭಾವ ಬೆಳೆಯುತ್ತದೆ ಎಂದರು.
ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್.ಕೆ, ಸ್ನಾತಕೋತ್ತರ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ಮತ್ತು ಸಂಶೋಧನ ವಿಭಾಗದ ಅಧ್ಯಕ್ಷ ಪ್ರೊ.ಬಿ.ಟಿ.ಸಂಪತ್ ಕುಮಾರ್, ಪ್ರಾಧ್ಯಾಪಕ ಪ್ರೊ.ಕೇಶವ, ಸಹಾಯಕ ಪ್ರಾಧ್ಯಾಪಕರಾದ ಡಾ.ರೂಪೇಶ್ ಕುಮಾರ್.ಎ, ಡಾ.ಹೇಮಾವತಿ.ಬಿ.ಎನ್, ಡಾ.ರಾಜೇಂದ್ರ ಬಾಬು.ಎಚ್. ಹಾಜರಿದ್ದರು.
Comments are closed.