ತುಮಕೂರು: ರೈತರು ಒಂದೇ ಬೆಳೆಗೆ ಸೀಮಿತವಾಗದೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.
ತುಮಕೂರು ಹಾಗೂ ಶಿರಾ ತಾಲ್ಲೂಕು ಕೃಷಿ ಇಲಾಖೆಯಿಂದ ಪಟ್ಟನಾಯಕನ ಹಳ್ಳಿಯ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಆವರಣದಲ್ಲಿ ನಡೆದ 21ನೇ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಹಾಗೂ ಸಮಗ್ರ ಕೃಷಿ ಪದ್ಧತಿ ಹಾಗೂ ಶೂನ್ಯ ಬಂಡವಾಳ ಕೃಷಿ ವಿಚಾರಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ರೈತರ ಸಮಸ್ಯೆಗಳಿಗೆ ಪರಿಪೂರ್ಣವಾಗಿ ಪರಿಹಾರ ಸಿಕ್ಕಿಲ್ಲ, ಅತ್ಯಂತ ಕಷ್ಟಕರ ಕಸುಬು ಎಂದರೆ ಅದು ಕೃಷಿ, ಈ ಬಾರಿ ಹಾಕಿದ ಶೇಕಡಾ 90 ರಷ್ಟು ಬೆಳೆ ನಷ್ಟವಾಗಿದೆ, ಇದರಿಂದಾಗಿ ರೈತರು ಇನ್ನಷ್ಟೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ರಾಜ್ಯದ 273 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ, ಕೇಂದ್ರ ಸರ್ಕಾರದಿಂದ ಬೆಳೆ ಪರಿಹಾರ ಹಣ ಇನ್ನೂ ಕೂಡ ಬಂದಿಲ್ಲ, ಕರ್ನಾಟಕದಿಂದ ಕೇಂದ್ರ ಸರ್ಕಾರಕ್ಕೆ 4 ಲಕ್ಷ ಕೋಟಿ ತೆರಿಗೆ ಕಟ್ಟುತ್ತಿದ್ದೇವೆ, ಆದರೆ ಕೇಂದ್ರ ಸರ್ಕಾರ ನಮಗೆ 50 ಸಾವಿರ ಕೋಟಿ ಮಾತ್ರ ಅನುದಾನ ನೀಡುತ್ತಿದೆ, ಕಳೆದ 5 ವರ್ಷದಿಂದ 1 ಲಕ್ಷ 78 ಸಾವಿರ ಕೋಟಿ ಬಾಕಿ ಹಣ ಬರಬೇಕಿದೆ, ಕೊಬ್ಬರಿ ಖರೀದಿ ಕೇಂದ್ರಗಳನ್ನು 12 ತಿಂಗಳು ಕೂಡ ತೆಗೆಯುವಂತೆ ಮನವಿ ಮಾಡಲಾಗಿದೆ ಎಂದರು.
ರಾಜ್ಯ ಸರ್ಕಾರದಿಂದ ರೈತರಿಗೆ ಮತ್ತು ಮಹಿಳೆಯರಿಗೆ 5 ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ, ರಾಜ್ಯ ಸರ್ಕಾರ ಜಾರಿಗೆ ತಂದಿರುವ 5 ಗ್ಯಾರಂಟಿ ಯೋಜನೆಗಳಿಗಾಗಿ 70 ಸಾವಿರ ಕೋಟಿ ಖರ್ಚು ಮಾಡಲಾಗಿದೆ, ಈ ಯೋಜನೆಗಳಿಂದ ಅನೇಕ ಬಡ ಕುಟುಂಬಗಳು ಸ್ವಾವಲಂಬನೆಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದು ತಿಳಿಸಿದರು.
ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ರೈತರು ಭಾಗವಹಿಸಬೇಕು, ಶೂನ್ಯ ಬಂಡವಾಳದಿಂದ ಹೇಗೆ ಕೃಷಿ ಮಾಡಬೇಕು ಎಂಬುದನ್ನು ತಿಳಿದುಕೊಂಡು ತಮ್ಮ ಕೃಷಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು, ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಕೃಷಿ ಚಟುವಟಿಕೆಗಳಿಗೆ ಆದ್ಯತೆ ನೀಡದೆ ಕಡೆಗಣಿಸಲಾಗಿದೆ, ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಲಾಗಿದೆ, ಶೇಕಡಾ 40 ರಷ್ಟು ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದೆ, ಕೃಷಿ ಮತ್ತು ಕೈಗಾರಿಕೆಗಳು ಸಮಾನಾಂತರದಲ್ಲಿ ಬೆಳೆದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ನವದೆಹಲಿ ವಿಶೇಷ ಪ್ರತಿನಿಧಿ, ಶಿರಾ ಶಾಸಕ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾ ತಾಲ್ಲೂಕು ಕೇಂದ್ರದಲ್ಲಿ ಒಂದು ಕೃಷಿ ಕಾಲೇಜು ಸ್ಥಾಪನೆಯಾಗಬೇಕು, ಇದರಿಂದ ಈ ಭಾಗದ ಅನೇಕ ರೈತರಿಗೂ ಮತ್ತು ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ, ಎಲ್ಲಾ ಬೆಳೆ ಬೆಳೆಯಲು ಬೇಕಾದ ಸೂಕ್ತ ವಾತಾವರಣ ಈ ಭಾಗದಲ್ಲಿದೆ, 2050 ರೊಳಗಾಗಿ ಶಿರಾ ಬೆಂಗಳೂರಿನ ಹೆಬ್ಬಾಗಿಲಾಗುತ್ತದೆ, ಅಗತ್ಯ ಹಣ್ಣು ತರಕಾರಿ ಬೆಳೆಯಲು ಬೇಕಾದ ಉತ್ಕೃಷ್ಟ ಮಣ್ಣು ಈ ಭಾಗದಲ್ಲಿದೆ, ಆದ್ದರಿಂದ ಉಗ್ರಗೌಡರ 150 ವರ್ಷದ ಕನಸನ್ನು ಕೃಷಿ ಕಾಲೇಜು ಸ್ಥಾಪನೆ ಮಾಡುವ ಮೂಲಕ ನನಸಾಗಿಸಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದ ಪೀಠಾಧಿಪತಿ ನಂಜಾವಧೂತ ಮಹಾ ಸ್ವಾಮೀಜಿ, ಶ್ರೀವಿನಾಯಕ ಗೋಲ್ಡ್ ಮಾಲೀಕ ಅಂಜನಾಮೂರ್ತಿ, ಕ್ಯಾದಿಗುಂಟೆ ಕೆ.ತಿಪ್ಪೇಸ್ವಾಮಿ, ಮಾಜಿ ತಾಪಂ ಸದಸ್ಯ ಶ್ರೀನಿವಾಸ್, ತುಮಕೂರು ಜಂಟಿ ಕೃಷಿ ನಿರ್ದೇಶಕ ಡಾ.ಎನ್.ರಮೇಶ್, ತೋಟಗಾರಿಕೆ ತಜ್ಞ ಪ್ರಶಾಂತ್ ಮತ್ತಿತರರು ಇದ್ದರು.
Comments are closed.