ತುಮಕೂರು: ಕೆಲಸದ ಒತ್ತಡಗಳ ನಡುವೆ ಸರ್ಕಾರಿ ಅಧಿಕಾರಿ- ನೌಕರರು ತಮ್ಮ ಆರೋಗ್ಯ ಕಡೆಗಣಿಸಬಾರದೆಂಬ ಉದ್ದೇಶದಿಂದ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವುದು ಉತ್ತಮ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಕ್ಯಾತ್ಸಂದ್ರದ ಕ್ರೀಡಾ ಸಂಕೀರ್ಣದಲ್ಲಿ ಸರ್ಕಾರಿ ಅಧಿಕಾರಿ, ನೌಕರರು ಹಾಗೂ ಪತ್ರಕರ್ತರಿಗಾಗಿ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ವರ್ಷಕ್ಕೊಮ್ಮೆ ಅಧಿಕಾರಿ, ಸಿಬ್ಬಂದಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವಂತೆ ಇತರೆ ಇಲಾಖೆ ಅಧಿಕಾರಿ, ನೌಕರರಿಗೂ ವರ್ಷಕ್ಕೊಮ್ಮೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಇಡೀ ರಾಜ್ಯದಲ್ಲಿ ಇದೇ ಪ್ರಪ್ರಥಮ ಬಾರಿಗೆ ಸರ್ಕಾರಿ ಅಧಿಕಾರಿ, ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸಿದ ಕೀರ್ತಿ ತುಮಕೂರು ಜಿಲ್ಲೆಗೆ ಸಲ್ಲುತ್ತದೆ, ಇಂತಹ ಉತ್ತಮ ಆಲೋಚನೆಗೆ ಕಾರಣರಾದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ. ಪ್ರಭು ಅವರಿಗೆ ಅಭಿನಂದನೆ ತಿಳಿಸಿದರು.
ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ಪ್ರಾಥಮಿಕ ಹಂತದಲ್ಲಿಯೇ ಪತ್ತೆ ಹಚ್ಚಲು ಇಂತಹ ಶಿಬಿರ ಸಹಕಾರಿಯಾಗುತ್ತದೆ, ರೋಗದ ಗಂಭೀರತೆ ಪ್ರಾರಂಭದಲ್ಲಿಯೇ ಕಂಡುಕೊಂಡರೆ ಗುಣಪಡಿಸಲು ಸಾಧ್ಯವಾಗುತ್ತದೆ ಎಂದರಲ್ಲದೆ ಆರೋಗ್ಯ ಶಿಬಿರದಲ್ಲಿ ತಪಾಸಣೆಗೊಳಗಾಗುವ ಅಧಿಕಾರಿ, ನೌಕರರ ಆರೋಗ್ಯ ಮಾಹಿತಿಯನ್ನು ಗಣಕೀಕರಣಗೊಳಿಸುವ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಜಿಲ್ಲೆಯ ಜನ ಸಮುದಾಯದ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾ ಪಂಚಾಯತಿ ವತಿಯಿಂದ ಈಗಾಗಲೇ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸಮಗ್ರ ಆರೋಗ್ಯ ತಪಾಸಣೆ ಅಭಿಯಾನದಡಿ 2.5ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಲಾಗಿದ್ದು, 17ಲಕ್ಷ ಜನರ ಆರೋಗ್ಯ ತಪಾಸಣೆ ಮಾಡಬೇಕಿದೆ ಎಂದು ತಿಳಿಸಿದರು.
ಯಶಸ್ವಿ ಮುಖ್ಯಮಂತ್ರಿಗಳ ಕಾರ್ಯಕ್ರಮ-ಅಭಿನಂದನೆ
ನಗರದಲ್ಲಿ ಜನವರಿ 29ರಂದು ಜರುಗಿದ ಮುಖ್ಯಮಂತ್ರಿಗಳ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣೀಕರ್ತರಾದ ಎಲ್ಲಾ ಅಧಿಕಾರಿ, ಸಿಬ್ಬಂದಿಗೆ ಕೃತಜ್ಞತೆ ತಿಳಿಸಿ ಮೆಚ್ಚುಗೆ ವ್ಯಕ್ತಪಡಿಸಿದರು, ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದರಿಂದ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿ ಬರಲು ಸಾಧ್ಯವಾಯಿತು, ಇದರಿಂದ ಜಿಲ್ಲೆಯ ಗೌರವ ದುಪ್ಪಟ್ಟಾಗಿದೆ ಎಂದು ಅಧಿಕಾರಿಗಳ ಶ್ರಮವನ್ನು ಕೊಂಡಾಡಿದ ಸಚಿವರು, ತುಮಕೂರು ಜಿಲ್ಲೆಯ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಬೇಕೆಂದು ಮುಖ್ಯಮಂತ್ರಿಗಳು ಇತರೆ ಜಿಲ್ಲೆಗಳ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿರುವುದು ನನ್ನ ಸಂತೋಷ ಇಮ್ಮಡಿಯಾಗಿದೆ ಎಂದು ಹರ್ಷ ವ್ಯಕ್ತ ಪಡಿಸಿದರು.
ವಿನೂತನ ಆಡಳಿತ ವ್ಯವಸ್ಥೆಗೆ ಕ್ರಮ
ಜಿಲ್ಲೆಯಲ್ಲಿ ವಿನೂತನ ಆಡಳಿತ ವ್ಯವಸ್ಥೆ ತರಲು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಉತ್ಸುಕರಾಗಿರುವುದು ಸಂತಸದ ಸಂಗತಿ, ಸಾರ್ವಜನಿಕರು ಅಹವಾಲು ಹೊತ್ತು ಸರ್ಕಾರಿ ಕಚೇರಿಗೆ ಭೇಟಿ ನೀಡಿದಾಗ ಅಧಿಕಾರಿ, ನೌಕರರು ಸಮಾಧಾನದಿಂದ ಸ್ಪಂದಿಸಿ ಅವರಲ್ಲಿ ನನ್ನ ಕೆಲಸವಾಗುತ್ತದೆ ಎಂಬ ವಿಶ್ವಾಸ ಮೂಡಿಸುವುದೇ ಉತ್ತಮ ಆಡಳಿತ ಎಂಬುದು ನನ್ನ ಅಭಿಪ್ರಾಯ, ಈ ನಿಟ್ಟಿನಲ್ಲಿ ಅಧಿಕಾರಿಗಳು ಜನರ ನಂಬಿಕೆ ಗಳಿಸುವಂತಹ ಸೇವೆ ನೀಡಬೇಕೆಂದು ಕಿವಿ ಮಾತು ಹೇಳಿದರು.
ವರ್ಗಾವಣೆ ಪದ್ಧತಿಯಲ್ಲಿ ನಂಬಿಕೆ ಕಡಿಮೆ
ಆಡಳಿತದಲ್ಲಿ ಚುರುಕು ತರಲು ಅನುಸರಿಸುವ ಸರ್ಕಾರಿ ಅಧಿಕಾರಿ, ನೌಕರರ ವರ್ಗಾವಣೆ ಪದ್ಧತಿ ಮೇಲೆ ನನಗೆ ನಂಬಿಕೆ ಕಡಿಮೆ, ಕನಿಷ್ಠ 3 ವರ್ಷವಾದರೂ ಒಂದೇ ಕಡೆ ಕೆಲಸ ಮಾಡಲು ಅವಕಾಶ ನೀಡುವುದರಿಂದ ಜನ ಸಾಮಾನ್ಯರಿಗೆ ಉತ್ತಮ ಸೇವೆ ಒದಗಿಸಲು ಸಾಧ್ಯವಾಗುತ್ತದೆ, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ವರ್ಗಾವಣೆ ಮಾಡಬೇಕು ಎಂದರಲ್ಲದೆ ಪೊಲೀಸ್ ಇಲಾಖೆಯಲ್ಲಿ ಕನಿಷ್ಠ 1 ವರ್ಷ ಪೂರೈಸಿದವರಿಗೆ ವರ್ಗಾವಣೆ ಮಾಡಲು ಅವಕಾಶವಿದೆ, ಈ ನಿಯಮ ಸಡಿಲಿಸಿ ಕನಿಷ್ಠ 2 ವರ್ಷ ಒಂದೇ ಕಡೆ ಸೇವೆ ಸಲ್ಲಿಸಲು ಅವಕಾಶ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು, ಈ ನಿಟ್ಟಿನಲ್ಲಿ ಜಿಲ್ಲೆಯ ಯಾವುದೇ ಸರ್ಕಾರಿ ಅಧಿಕಾರಿ, ನೌಕರರಿಗೆ ವರ್ಗಾವಣೆಯ ತೊಂದರೆ ಕೊಡುವುದಿಲ್ಲ, ಆದರೆ ಅಧಿಕಾರಿ, ನೌಕರರು ಯಾರಿಗೂ ಅನ್ಯಾಯವಾಗದಂತೆ ಮೇಲು ಕೀಳು ಎಂಬ ಬೇಧ ಭಾವ ಮಾಡದೆ ಸರ್ಕಾರಿ ಸೇವೆ ಒದಗಿಸುವ ಮೂಲಕ ಜಿಲ್ಲೆಯನ್ನು ಮಾದರಿಯಾಗಿಸಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ, ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿ ನೌಕರರ ಆರೋಗ್ಯ ಉತ್ತಮವಾಗಿದ್ದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ಮನಗಂಡು ಈ ಆರೋಗ್ಯ ಶಿಬಿರ ಏರ್ಪಡಿಸಲಾಗಿದೆ, ಉತ್ತಮ ಆಹಾರ ಶೈಲಿ, ಯೋಗಾಭ್ಯಸದಿಂದ ಶಾರೀರಿಕ ಹಾಗೂ ಮಾನಸಿಕ ಒತ್ತಡಗಳಿಂದ ಹೊರಬಹುದಾಗಿದೆ ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯತ್ ಸಿಇಒ ಜಿ.ಪ್ರಭು ಮಾತನಾಡಿ, ಸರ್ಕಾರಿ ಅಧಿಕಾರಿ, ನೌಕರರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೊಂದಿರಬೇಕು, ಉತ್ತಮ ಸೇವೆಯಿಂದ ಆತ್ಮತೃಪ್ತಿ ಕಾಣಬಹುದು, ಆತ್ಮತೃಪ್ತಿಯಿಂದ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಮಂಜುನಾಥ್, ತಹಶೀಲ್ದಾರ್ ಸಿದ್ದೇಶ್, ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಉಪ ವಿಭಾಗಾಧಿಕಾರಿಗಳಾದ ಹೋಟೆಲ್ ಶಿವಪ್ಪ, ಸಪ್ತಶ್ರೀ, ಗೌರವ ಕುಮಾರ್ ಶೆಟ್ಟಿ ಇತರರು ಇದ್ದರು.
Comments are closed.