ಕ್ಯಾನ್ಸರ್ ರೋಗದ ಬಗ್ಗೆ ಭಯ ಬೇಡ

40

Get real time updates directly on you device, subscribe now.


ಕುಣಿಗಲ್: ಕ್ಯಾನ್ಸರ್ ರೋಗದ ಬಗ್ಗೆ ಭಯ ಬೇಡ, ಅಗತ್ಯ ಅರಿವು ಹೊಂದಿ ಮೊದಲ ಹಂತದಲ್ಲೆ ಪತ್ತೆ ಹಚ್ಚುವ ಮೂಲಕ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಿ ಉತ್ತಮ ಆರೋಗ್ಯ ಹೊಂದಬಹುದು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಮರಿಯಪ್ಪ ಹೇಳಿದರು.

ಸೋಮವಾರ ಪಟ್ಟಣದಲ್ಲಿ ಜಿಲ್ಲಾ ಪಂಚಾಯಿತಿ ತುಮಕೂರು, ತಾಲೂಕು ಆರೋಗ್ಯ ಇಲಾಖೆ, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ವಿವಿಧ ಸಂಸ್ಥೆಗಳ ಅಶ್ರಯದಲ್ಲಿ ಹಮ್ಮಿಕೊಳ್ಳಲಾದ ವಿಶ್ವ ಕ್ಯಾನ್ಸರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಹಿಳಾ ವೈದ್ಯೆ ಡಾ.ಪಲ್ಲವಿ ಮಾತನಾಡಿ, ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತಿದ್ದು ಇದನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿದಾಗ ಔಷಧ ಮೂಲಕ ಗುಣಪಡಿಸಬಹುದು, ಮಹಿಳೆಯರ ಮಾಸಿಕ ಆರೋಗ್ಯದಲ್ಲಿ ಅಧಿಕ ಬಿಳುಪು ಸ್ರಾವವಾದಾಗ ವಿಳಂಬ ಮಾಡದೆ ವೈದ್ಯರ ಬಳಿ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರಂಭಿಕಹಂತದಲ್ಲೆ ರೋಗ ಪತ್ತೆ ಹಚ್ಚಬಹುದು ಎಂದರು.

ಸ್ತನ ಕ್ಯಾನ್ಸರ್ ಸಹ ಮನೆಯಲ್ಲಿ ಪರೀಕ್ಷಿಸಿ ಗಂಟುಗಳು ಕಂಡು ಬಂದಲ್ಲಿ ವೈದ್ಯರಿಂದ ತಪಾಸಣೆ ಮಾಡಿಸಿ ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದು ಉತ್ತಮ ಅರೋಗ್ಯ ಹೊಂದಬಹುದು ಎಂದರು.
ದಂತ ವೈದ್ಯೆ ಭಾರತಿ ಮಾತನಾಡಿ, ಬಾಯಿ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಹೆಚ್ಚಳವಾಗುತ್ತಿದ್ದು ತಂಬಾಕು ಬಳಕೆಯಿಂದಾಗಿ ಹೆಚ್ಚಾಗಿ ಬರುತ್ತಿದೆ, ಬಾಯಲ್ಲಿ ಗುಳ್ಳೆಗಳು, ಚರ್ಮದ ಬಣ್ಣದಲ್ಲಿ ವ್ಯತ್ಯಯವಾದಾಗ ವೈದ್ಯರಲ್ಲಿ ತಪಾಸಣೆ ಮಾಡಿಸಿ ಆರಂಭಿಕ ಹಂತದಲ್ಲೆ ಕ್ಯಾನ್ಸರ್ ಪತ್ತೆ ಹಚ್ಚಿ ಗುಣಪಡಿಸಬಹುದು, ಆರೋಗ್ಯ ವಿಷಯದಲ್ಲಿ ನಿರ್ಲಕ್ಷ್ಯ ಬೇಡ ಎಂದರು.

ಆಡಳಿತ ವೈದ್ಯಾಧಿಕಾರಿ ಡಾ.ಗಣೇಶ್ ಬಾಬು, ವೈದ್ಯೆ ಡಾ.ಶ್ರೀಲಕ್ಷ್ಮೀ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಶಾಲಾ ವಿದ್ಯಾರ್ಥಿಗಳಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕ್ಯಾನ್ಸರ್ ಅರಿವಿನ ಜಾಥಾ ನಡೆಸಲಾಯಿತು, ಹಿರಿಯ ಆರೋಗ್ಯ ನಿರೀಕ್ಷಕ ಯಾಲಕ್ಕಿಗೌಡ, ಸಿಬ್ಬಂದಿ ರಮೇಶ್, ಪಲ್ಲವಿ, ದಾಕ್ಷಾಯಿಣಿ, ರಾಘವೇಂದ್ರ ಇತರರು ಇದ್ದರು. ಕಾರ್ಯಕ್ರಮದಲ್ಲಿ ಬಾಯಿಕ್ಯಾನ್ಸರ್ ನಿಂದ ಬಳಲುತ್ತಿದ್ದ ರೋಗಿಯೊಬ್ಬರು ಪ್ರಾಥಮಿಕ ಹಂತದಲ್ಲೆ ಚಿಕಿತ್ಸೆ ಪಡೆದು ಗುಣಮುಖರಾಗಿದ್ದು, ತಮ್ಮ ಅನುಭವವನ್ನು ವಿವರಿಸಿ, ಪ್ರಾಥಮಿಕ ಹಂತದಲ್ಲೆ ಪತ್ತೆಹಚ್ಚಿ ಚಿಕಿತ್ಸೆಗೆ ಸಹಕರಿಸಿದ ಸಾರ್ವಜನಿಕ ಆಸ್ಪತ್ರೆ ವೈದ್ಯರಿಗೆ ಅಭಿನಂದಿಸಿದರು.

Get real time updates directly on you device, subscribe now.

Comments are closed.

error: Content is protected !!