ಮಧುಗಿರಿ: ಕೆ.ಸಿ.ರೊಪ್ಪದಲ್ಲಿ ಗ್ರಾಮದಲ್ಲಿ ಬಗರ್ ಹುಕುಂನಲ್ಲಿ ಅರ್ಜಿ ಸಲ್ಲಿಸಿರುವ 35ಕ್ಕೂ ಹೆಚ್ಚು ಮಂದಿಗೆ ಶೀಘ್ರದಲ್ಲೇ ಸಾಗುವಳಿ ಚೀಟಿ ನೀಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಕಸಬಾ ವ್ಯಾಪ್ತಿಯ ಕೆ.ಸಿ.ರೊಪ್ಪದಲ್ಲಿ ಗ್ರಾಮದಲ್ಲಿ ಸೋಮವಾರ ಕೆ ಎಸ್ ಆರ್ ಟಿ ಸಿ ಬಸ್ ಗೆ ಸ್ವಾಗತಿಸಿ ಸ್ವತಃ ಬಸ್ ಚಾಲನೆ ಮಾಡಿ ಮಾತನಾಡಿ, ಸ್ವಾತಂತ್ರ ಬಂದು 75 ವರ್ಷಗಳಾದರೂ ಈ ಭಾಗದಲ್ಲಿ ಬಸ್ ಓಡಾಡದೇ ಇರುವುದು ದುರಂತ ಸಂಗತಿಯಾಗಿತ್ತು, ಈ ಹಿನ್ನೆಲೆಯಲ್ಲಿ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಈ ಭಾಗದಲ್ಲಿ ಬಸ್ ಓಡಿಸಲಾಗುವುದು, ಪ್ರತಿನಿತ್ಯ ಎರಡು ಬಾರಿ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸಂಚರಿಸಲಿದೆ, ಇದರಿಂದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗೆ ಹೆಚ್ಚಿನ ಅನುಕೂಲವಾಗಲಿದೆ, ಅದೇ ರೀತಿ ಕೆ.ಸಿ.ರೊಪ್ಪ ಗ್ರಾಮದಲ್ಲಿ ಶಿಥಿಲಗೊಂಡಿರುವ ಶಾಲಾ ಕೊಠಡಿ ದುರಸ್ತಿಗೊಳಿಸುವ ಮತ್ತು ಸಮುದಾಯ ಭವನ ನಿರ್ಮಿಸಿ ಕೊಡುವ ಭರವಸೆ ನೀಡಿದರು.
ಈಗಾಗಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ ನೀರಿನ ಸಮಸ್ಯೆ ನೀಗಿಸಲು ಬೋರ್ ವೆಲ್ ಕೊರೆಸಲಾಗಿದ್ದು, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗಿದೆ, ಮುಂದಿನ ದಿನಗಳಲ್ಲಿ ಶಾಲಾ ಕಾಂಪೌಂಡ್ ನಿರ್ಮಿಸುವ ಭರವಸೆ ನೀಡಿದ ಅವರು ಸರ್ಕಾರದೊಂದಿಗೆ ಚರ್ಚಿಸಿ ಮೊರಾರ್ಜಿ ವಸತಿ ಶಾಲೆಯಲ್ಲಿ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿಕೊಡುವ ಭರವಸೆ ನೀಡಿದರು.
ಹಾವೇಕಟ್ಟೆ ಕಟ್ಟೆ ಬಳಿ ಮಳೆಗಾಲ ಪ್ರಾರಂಭಕ್ಕೆ ಮುಂಚೆ ತಡೆಗೋಡೆ ನಿರ್ಮಿಸಿ ಕೊಡುವುದಾಗಿ ತಿಳಿಸಿದ ಅವರು ಕೆ.ಸಿ.ರೊಪ್ಪ, ಕಮ್ಮನಕೋಟೆ ಗ್ರಾಮಗಳಲ್ಲಿ ಮೊಬೈಲ್ ಟವರ್ ಆರಂಭಿಸಲಾಗುವುದು, ಈ ಭಾಗದಲ್ಲಿ ಚಿರತೆ ಹಾವಳಿ ತಪ್ಪಿಸಲು ಬೋನ್ ಇಡುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ಎನ್.ಗಂಗಣ್ಣ, ಎಂ.ಕೆ.ನಂಜುಂಡಯ್ಯ, ಸದಸ್ಯರಾದ ಲಾಲಾ ಪೇಟೆ ಮಂಜುನಾಥ್, ಮಂಜುನಾಥ್ ಆಚಾರ್, ಜಿಪಂ ಮಾಜಿ ಸದಸ್ಯರಾದ ಚೌಡಪ್ಪ, ಎಂ.ಹೆಚ್.ನಾರಾಯಣಪ್ಪ, ಗ್ರಾಪಂ ಅಧ್ಯಕ್ಷೆ ಮಹಾಲಕ್ಷ್ಮಮ್ಮ, ಸದಸ್ಯ ನಾಗರಾಜು, ಮುಂಖಂಡರಾದ ಎಂ.ಬಿ ಮರಿಯಣ್ಣ, ತುಂಗೋಟಿ ರಾಮಣ್ಣ, ಗೇಟ್ ಶಿವಣ್ಣ, ಸಾಧಿಕ್, ಮಂಜಣ್ಣ, ಬಾಣದ ರಂಗಯ್ಯ, ತಹಶೀಲ್ದಾರ್ ಸಿಬ್ಗತ್ ವುಲ್ಲಾ, ತಾಪಂ ಇಓ ಲಕ್ಷ್ಮಣ್, ಪಿಡಿಓ ಶಿವಕುಮಾರ್ ಇತರರಿದ್ದರು.
Comments are closed.