ಚುನಾವಣೆ ಗೆಲ್ಲಿಸುವುದು ಲೀಡರ್ ಗಳಲ್ಲ, ಕಾರ್ಯಕರ್ತರು

ಜನರ ವಿಶ್ವಾಸ ಗೆದ್ದರೆ ಚುನಾವಣೆ ಗೆದ್ದಂತೆ: ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ

38

Get real time updates directly on you device, subscribe now.


ತುಮಕೂರು: ಹಿಂದಿನ ಚುನಾವಣೆಗಳ ಗಣಿತ ಲೆಕ್ಕಾಚಾರದಿಂದ ಮುಂಬರುವ ಚುನಾವಣೆ ಗೆಲ್ಲಲಾಗುವುದಿಲ್ಲ, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರಲ್ಲಿ ನಿಮ್ಮೊಡನೆ ನಾವಿದ್ದೇವೆ ಎಂಬ ಆತ್ಮವಿಶ್ವಾಸ ತುಂಬಿ, ಪಕ್ಷದ ಪರ ಪ್ರಚಾರ ಮಾಡಿದರೆ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಸೋಮವಾರ ನಗರದಲ್ಲಿ ನಡೆದ ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿ, ಹೈನುಗಾರಿಕೆ ನಂಬಿ ಬದುಕುತ್ತಿರುವ ರೈತರು ಸಂಕಷ್ಟದಲ್ಲಿದ್ದಾರೆ, ಜೂನ್ ತಿಂಗಳಿನಿಂದ ಹಾಲಿನ ಸಬ್ಸಿಡಿ ಹಣವನ್ನು ಸರ್ಕಾರ ನೀಡಿಲ್ಲ, ಬೇಸಿಗೆ, ಬರಗಾಲದಲ್ಲಿ ಜಾನುವಾರುಗಳಿಗೆ ಮೇವು, ಆಹಾರ ಹೊಂದಿಸಲು ರೈತರು ಕಷ್ಟ ಪಡುತ್ತಿದ್ದಾರೆ, ಹೈನುಗಾರಿಕೆಯನ್ನೇ ಬದುಕಿನ ಆಧಾರ ಮಾಡಿಕೊಂಡವರಿಗೆ ಸರ್ಕಾರ ಕೊಡಬೇಕಾದ ಹಣ ನಿಲ್ಲಿಸಿ ಅನ್ಯಾಯ ಮಾಡಿದೆ, ಸರ್ಕಾರಕ್ಕೆ ರೈತರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ಹಣ ಬಿಡುಗಡೆ ಮಾಡಲಿ ಎಂದು ಹೇಳಿದರು.

ವಿವಿಧ ಕಾರಣಗಳಿಂದ ಅನೇಕ ಹಾಲು ಉತ್ಪಾದಕರ ಸೊಸೈಟಿಗಳ ಆಡಳಿತ ಮಂಡಳಿಗಳನ್ನು ರದ್ದು ಮಾಡಿ ಆಡಳಿತಾಧಿಕಾರಿಗಳನ್ನು ನೇಮಕ ಮಾಡಲಾಗಿದೆ, ಸರ್ಕಾರ ಅಂತಹ ಸೊಸೈಟಿಗಳಿಗೆ ಶೀಘ್ರ ಚುನಾವಣೆ ನಡೆಸಿ ರೈತ ಪ್ರತಿನಿಧಿಗಳು ಡೇರಿಗಳ ವ್ಯವಹಾರ ನಡೆಸಲು ಅವಕಾಶ ಮಾಡಿಕೊಡಬೇಕು, ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ನಮ್ಮ ಆಕ್ಷೇಪವಿಲ್ಲ, ಆದರೆ ಬಸ್ ನಲ್ಲಿ ಓಡಾಡುವವರಿಗೆ ನೀಡುವ ಆದ್ಯತೆಯನ್ನು ದುಡಿಯುವ ರೈತರಿಗೆ ಕೊಡುತ್ತಿಲ್ಲ, ಇಂತಹ ಸಂಕಷ್ಟದಲ್ಲಿರುವ ರೈತರ ಪರ ಪಕ್ಷದ ಮುಖಂಡರು ಧ್ವನಿಮಾಡಿ ಅವರಿಗೆ ಸ್ಪಂದಿಸಿ ನೆರವಾಗಬೇಕು. ಎಂದು ಮಾಧುಸ್ವಾಮಿ ಹೇಳಿದರು.

ಚುನಾವಣೆಗಳನ್ನು ಗೆಲ್ಲಿಸುವುದು ಲೀಡರ್ ಗಳಲ್ಲ, ಕಾರ್ಯಕರ್ತರು, ಮುಖಂಡರು ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಬೇಕು, ಅವರ ಕೆಲಸ ಗುರುತಿಸಿ ಪ್ರಶಂಸಿಸಬೇಕು, ಕಾರ್ಯಕರ್ತರೂ ಪ್ರಮಾಣಿಕವಾಗಿ ಕೆಲಸ ಮಾಡಬೇಕು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು, ಜನರಲ್ಲಿ ಬಿಜೆಪಿ ಬಗ್ಗೆ ವಿಶ್ವಾಸ ತುಂಬಬೇಕು ಎಂದು ಹೇಳಿದರು.

ಮಾಜಿ ಸಚಿವ, ತುಮಕೂರು ಲೋಕಸಭಾ ಕ್ಷೇತ್ರದ ಉಸ್ತುವಾರಿ ಗೋಪಾಲಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 2019 ಲೋಕಸಭಾ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬೇಕು, ಅದಕ್ಕಾಗಿ ಪಕ್ಷದ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು, ಬಿಜೆಪಿ ಸರ್ಕಾರಗಳ ಜನಪರ ಕಾರ್ಯಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.

ಮೋದಿಯವರು ಪ್ರಧಾನಿಯಾಗಿ ಹತ್ತು ವರ್ಷದಲ್ಲಿ ಸ್ವಾತಂತ್ರ್ಯ ನಂತರ ದೇಶದಲ್ಲಿ ಆಗದೇ ಇರುವಂತಹ ಅಭಿವೃದ್ಧಿ ಕೆಲಸ ಮಾಡಿದರು, ವಿಶ್ವಮಟ್ಟದಲ್ಲಿ ದೇಶದ ಘನತೆ ಸಾರಿರುವ ಮೋದಿಯವರು ಈ ಮೂಲಕ ದೇಶದ 140 ಕೋಟಿ ಜನರ ಗೌರವ ಎತ್ತಿ ಹಿಡಿದಿದ್ದಾರೆ, ಅವರು ಮತ್ತೆ ಪ್ರಧಾನಿಯಾಗಿ ದೇಶದ ಮತ್ತಷ್ಟು ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.

ಮಾಜಿ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಪ್ರಧಾನಿ ಮೋದಿಯವರನ್ನು ಜನಸಾಮಾನ್ಯರ ಮನೆಮನೆಗೂ ಕೊಂಡೊಯ್ದು ಅವರ ಅಭಿವೃದ್ಧಿ ಕಾರ್ಯ, ಕೊಡುಗೆಯನ್ನು ಜನರಿಗೆ ತಿಳಿಸಬೇಕು, ಅವರು ಮತ್ತೊಮ್ಮೆ ಪ್ರಧಾನಿಯಾಗಲು ಬೂತ್ ಮಟ್ಟದ ತಂಡಗಳನ್ನು ಬಲಪಡಿಸಬೇಕು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಪಕ್ಷದ ಪ್ರಚಾರ ಮಾಡಬೇಕು ಎಂದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಮಾಜಿ ಶಾಸಕಿ ರೂಪಾಲಿ ನಾಯ್ಕ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್, ಮುಖಂಡರಾದ ಡಿ.ಕೃಷ್ಣಕುಮಾರ್, ವೈ.ಹೆಚ್.ಹುಚ್ಚಯ್ಯ, ಎಂ.ಬಿ.ನಂದೀಶ್, ದಿಲೀಪ್ ಕುಮಾರ್ ಹಾಗೂ ವಿವಿಧ ಸಮತಿಗಳ ಪದಾಧಿಕರಿಗಳು ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!