ಗ್ರಾಮೀಣ ಬ್ಯಾಂಕ್ ಗೆ ಮುತ್ತಿಗೆ ಹಾಕಿ ರೈತರ ಪ್ರತಿಭಟನೆ

36

Get real time updates directly on you device, subscribe now.


ಕೊರಟಗೆರೆ: ಕೃಷಿಗಾಗಿ ರೈತಾಪಿ ವರ್ಗ ಪಡೆದಿರುವ ಸಾಲ ದುಪ್ಪಟ್ಟು ಮಾಡಿ ಖಾಸಗಿ ಫೈನಾನ್ಸ್ ವ್ಯಕ್ತಿಗಳ ರೀತಿಯಲ್ಲಿ ವಸೂಲಿಗೆ ಮುಂದಾಗಿರುವ ಬ್ಯಾಂಕ್ ನ ವರ್ತನೆಯನ್ನೇ ಖಂಡಿಸಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಗೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಕೊರಟಗೆರೆ ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಮುಂದೆ ಪ್ರತಿಭಟನೆ ನಡೆಸಿದ ರೈತರು ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ರಾಜ್ಯದ 1126 ಶಾಖೆಯ 76ಸಾವಿರ ಕೋಟಿಯಲ್ಲಿ 50 ಸಾವಿರ ಕೋಟಿ ಉದ್ಯಮಿಗಳಿಗೆ ಮತ್ತು 26 ಸಾವಿರ ಕೋಟಿ ಮಾತ್ರ ರೈತರಿಗೆ ನೀಡಲಾಗಿದೆ, ಹೆಸರಿಗೆ ಮಾತ್ರ ರೈತರ ಬ್ಯಾಂಕ್ ಎಂದು ಹೇಳಿಕೊಂಡು ರೈತರ ವಿರೋಧಿಯಾಗಿ ಗ್ರಾಮೀಣ ಬ್ಯಾಂಕ್ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರು ಪಡೆದಿರುವ 6 ಲಕ್ಷ ಸಾಲಕ್ಕೆ 18 ಲಕ್ಷ ಅಸಲು- ಬಡ್ಡಿ ಹಾಕಿರುವ ಕರ್ನಾಟಕ ಬ್ಯಾಂಕ್ ಪ್ರಶ್ನಿಸಿದರೇ ಕೋರ್ಟ್ಗೆ ಹಾಕ್ತೀವಿ, ಜಮೀನು ಮುಟ್ಟುಗೋಲು ಹಾಕಿಕೊಳ್ತೀವಿ, ಟಿವಿ ಮಾಧ್ಯಮ ಅಥವಾ ಪತ್ರಿಕೆಗೆ ಮಾಹಿತಿ ನೀಡಿದರೆ ಪರಿಣಾಮ ಬೇರೆದೆ ಆಗಲಿದೆ ಎಂದು ಬ್ಯಾಂಕ್ ನ ಸಿಬ್ಬಂದಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ, ಕೇಂದ್ರ ಮತ್ತು ರಾಜ್ಯ ಸರಕಾರ ತಕ್ಷಣ ರೈತರ ನೇರವಾಗಿ ಆಗಮಿಸಬೇಕು ಎಂದು ರೈತರು ಒತ್ತಾಯ ಮಾಡಿದರು.

ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಮಾಧವ ರೆಡ್ಡಿ ಮಾತನಾಡಿ, ಕರ್ನಾಟಕ ಗ್ರಾಮೀಣ ಬ್ಯಾಂಕ್ 76 ಸಾವಿರ ಕೋಟಿಯಲ್ಲಿ 50 ಸಾವಿರ ಕೋಟಿ ಉದ್ಯಮಿಗಳಿಗೆ ಮತ್ತು ಕೇವಲ 26 ಸಾವಿರ ಕೋಟಿ ಮಾತ್ರ ರೈತರಿಗೆ ಸಾಲ ನೀಡಿದ್ದಾರೆ, ಹೆಸರಿಗೆ ಮಾತ್ರ ರೈತರ ಪರವಾಗಿ ಅಷ್ಠೆ ಹಣಕಾಸಿನ ವ್ಯವಹಾರ ಎಲ್ಲವೂ ಉದ್ಯಮಿಗಳ ಪರವಾಗಿಯೇ ಮಾಡ್ತಾರೆ, ರಾಷ್ಟ್ರೀಕೃತ ಬ್ಯಾಂಕ್ ಗಳು ರೈತರ ಸಾಲ ಮನ್ನಾ ಮಾಡಿದ ರೀತಿಯಲ್ಲಿಯೇ ಕರ್ನಾಟಕ ಗ್ರಾಮೀಣ ಬ್ಯಾಂಕು ಮಾಡಬೇಕಿದೆ, ಇಲ್ಲವಾದ್ರೇ ರಾಜ್ಯದಲ್ಲಿ ಉಗ್ರ ಹೋರಾಟ ಮಾಡುತ್ತೀವಿ ಎಂದು ಎಚ್ಚರಿಕೆ ನೀಡಿದರು.

10 ದಿನದಿಂದ ಸರ್ವರ್ ಸಮಸ್ಯೆ
ಕೊರಟಗೆರೆ ಪಟ್ಟಣ ಸೇರಿದಂತೆ ಗ್ರಾಮೀಣದ 8ಕ್ಕೂ ಅಧಿಕ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಕಳೆದ 10 ದಿನದಿಂದ ಸರ್ವರ್ ಸಮಸ್ಯೆಯಿಂದ ವ್ಯವಹಾರ ಸ್ಥಗಿತವಾಗಿ ಚೆಕ್ ಬುಕ್ ಪಾಸಾಗದೇ ನಗದಿಗೆ ಸಮಸ್ಯೆ ಎದುರಾಗಿದೆ, ಗ್ರಾಹಕರು ಬ್ಯಾಂಕ್ ನ ಸಿಬ್ಬಂದಿ ಪ್ರಶ್ನಿಸಿದರೇ ತಾಂತ್ರಿಕ ಸಮಸ್ಯೆಯ ಕಾರಣ ಹೇಳ್ತಾರೆ, ಮತ್ತೆ ಪ್ರಶ್ನಿಸಿದರೆ ನಾಳೆ ಬನ್ನಿ ಅಥವಾ ಹೊರಗಡೆ ಹೋಗಿ ಎಂಬ ಉಡಾಫೆಯ ಉತ್ತರ ನೀಡ್ತಾರೆ, ದಯವಿಟ್ಟು ಸರ್ವರ್ ಸಮಸ್ಯೆಯನ್ನು ತ್ವರಿತವಾಗಿ ಸರಿಪಡಿಸಿ ಕೋಡಬೇಕಿದೆ ಎಂದು ನೂರಾರು ಗ್ರಾಹಕರು ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಶಿವಕುಮಾರ್, ರೈತ ಮುಖಂಡರಾದ ಬಸವನರೆಡ್ಡಿ, ದಿಲೀಪ್, ಶಿವಪ್ರಕಾಶ್, ಗಿರೀಶ್, ವಿರೇಶ್, ಬಸವನಗೌಡ, ಮಲ್ಲಿಕಾರ್ಜುನ, ವೀರಭದ್ರರೆಡ್ಡಿ, ಪಂಪನಗೌಡ ಇದ್ದರು.

Get real time updates directly on you device, subscribe now.

Comments are closed.

error: Content is protected !!