ತುಮಕೂರು: ಜ್ಞಾನದಾಹ, ಪರಿಶ್ರಮ, ಶ್ರದ್ಧೆಯ ಜೊತೆಗೆ ಗೆಲ್ಲುವ ಛಲವಿದ್ದಲ್ಲಿ ಎಂತಹ ಕಠಿಣ ಪರೀಕ್ಷೆಗಳನ್ನಾದರೂ ಎದುರಿಸಬಹುದು, ಮೊದಲಿಗೆ ತೀರಾ ಕಠಿಣವೆನಿಸಿದರೂ ಅಧ್ಯಯನದಲ್ಲಿ, ಅಭ್ಯಾಸದಲ್ಲಿ ನಿರಂತರವಾಗಿ ತೊಡಗಿಸಿಕೊಂಡಲ್ಲಿ ದಾರಿ ಸುಗಮವಾಗುತ್ತಾ ಸಾಗುತ್ತದೆ, ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಮುಂದಿನ ಹಂತಕ್ಕೆ ಆಯ್ಕೆಯಾಗಿರುವವರು ಗುರಿ ತಲುಪುವ ಬಗ್ಗೆ ದೃಢ ಮನಸ್ಕರಾಗಿರಿ ಎಂದು ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ, ಅಧ್ಯಕ್ಷ ಕೆ.ಬಿ.ಜಯಣ್ಣ ಹೇಳಿದರು.
ನಗರದ ವಿದ್ಯಾನಿಧಿ ಕಾಲೇಜಿನಲ್ಲಿ ಸಿಎ ಫೌಂಡೇಷನ್ ಸಾಧಕ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಭಾರತಾದ್ಯಂತ ಸುಮಾರು 1,37,153 ಮಂದಿ ಸಿಎ ಫೌಂಡೇಷನ್ ಪರೀಕ್ಷೆ ಬರೆದಿದ್ದರು, ಈ ಪೈಕಿ 71,966 ಹುಡುಗರು ಮತ್ತು 65187 ಹುಡುಗಿಯರು, ಇವರಲ್ಲಿ 41,132 ತೇರ್ಗಡೆಯಾಗಿದ್ದು, 21,728 ಮಂದಿ ಹುಡುಗರು ಮತ್ತು 19,904 ಮಂದಿ ಹುಡುಗಿಯರು, ಇವರಲ್ಲಿ 29,997 ಮಂದಿ ಮಾತ್ರ ಮುಂದಿನ ಹಂತದ ಪರೀಕ್ಷೆ ಬರೆಯಲು ಅರ್ಹತೆ ಪಡೆದಿದ್ದಾರೆ, ಅವರಲ್ಲಿವಿ- ಟೆಕ್ನೋ ಸಿಎ ಫೌಂಡೇಷನ್ ನ (ವಿದ್ಯಾವಾಹಿನಿ ಸಮೂಹ ಶಿಕ್ಷಣ ಸಂಸ್ಥೆಗಳಿಂದ) ಒಟ್ಟು 43 ಮಂದಿ ಆಯ್ಕೆಯಾಗಿದ್ದಾರೆ.
ಸಿಎ ಫೌಂಡೇಷನ್ ಸಾಧಕರನ್ನು ಅಭಿನಂದಿಸಿದ ಸಂಸ್ಥೆಯ ಕಾರ್ಯದರ್ಶಿ ಎನ್.ಬಿ. ಪ್ರದೀಪ್ ಕುಮಾರ್ ಮಾತನಾಡಿ, ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಿಎ ಆಗುವತ್ತ ಮನಸ್ಸು ಮಾಡಬೇಕೆಂಬುದು ನಮ್ಮ ಅಪೇಕ್ಷೆ, ನಮ್ಮ ದೇಶಕ್ಕೆ ಹೆಚ್ಚಿನ ಚಾರ್ಟರ್ಡ್ ಅಕೌಂಟೆಂಟ್ ಗಳ ಅಗತ್ಯವಿದೆ, ಹೆಸರಿನೊಂದಿಗೆ ಸಿಎ ಎಂದು ಹಾಕಿಕೊಳ್ಳಬೇಕೆಂಬ ಕನಸು ವಿದ್ಯಾರ್ಥಿಗಳನ್ನು ಈ ನಿಟ್ಟಿನಲ್ಲಿ ಪ್ರೇರೇಪಿಸಲಿ ಎಂದರು.
ವಿದ್ಯಾವಾಹಿನಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಸಿ.ಎಸ್. ಪ್ರೇಮ್ ಮಾತನಾಡಿ, ವರ್ಷದಿಂದ ವರ್ಷಕ್ಕೆ ಸಿಎ ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಿರುವ ನಮ್ಮ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿರುವುದು ಸಂತೋಷದ ಸಂಗತಿ, ಮುಂದಿನ ವರ್ಷಗಳಲ್ಲಿ ಈ ವಿದ್ಯಾರ್ಥಿಗಳು ಸಿಎ ಆಗುವುದರೊಂದಿಗೆ ಹೊಸ ತಲೆಮಾರಿನ ಮಕ್ಕಳಿಗೆ ಮಾದರಿಯಾಗಲಿ ಎಂದರು.
ವಿ-ಟೆಕ್ನೋ ಸಿಎ ಫೌಂಡೇಷನ್ ಸಂಯೋಜಕ ಜೆ.ಪಿ.ಸುಧಾಕರ್ ಮಾತನಾಡಿ, ವಿದ್ಯಾವಾಹಿನಿ ಸಂಸ್ಥೆಯು ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತಿರುವುದರಿಂದ ಎಲ್ಲಾ ಸಾಧನೆಯೂ ಸಾಧ್ಯವಾಗುತ್ತಿದೆ, ವಿದ್ಯಾರ್ಥಿಗಳು ಇಲ್ಲಿಗೆ ತೃಪ್ತರಾಗದೆ ತಮ್ಮ ಗುರಿಯನ್ನು ಎತ್ತರಿಸಿಕೊಳ್ಳಬೇಕು ಎಂದರು.
ಉಪನ್ಯಾಸಕಿ ಹೇಮಲತಾ.ಎಂ.ಎಸ್, ಸೌಮ್ಯಾ.ಎನ್, ಆರತಿ ಪಟ್ರಮೆ, ಉಪನ್ಯಾಸಕಿ ಸಾಧನಾ, ವಿದ್ಯಾನಿಧಿ ಹಾಗೂ ವಿದ್ಯಾವಾಹಿನಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.
Comments are closed.