ಆರ್ಯ- ದ್ರಾವಿಡ ಆಕ್ರಮಣ ಕಟ್ಟು ಕತೆ:ಡಾ. ರಾಜ್ ವೇದಂ

20

Get real time updates directly on you device, subscribe now.


ತುಮಕೂರು: 13,000 ಸಾವಿರ ವರ್ಷ ಪೂರ್ವಜರ ಇತಿಹಾಸ ಉಳ್ಳ ಭಾರತೀಯ ಪ್ರಾಚೀನ ನಾಗರಿಕತೆ ಇತರ ನಾಗರಿಕತೆಗಳ ಮೇಲೆ ಪ್ರಭಾವ ಬೀರಿದ ಜ್ಞಾನ ವ್ಯವಸ್ಥೆಯನ್ನೊಳಗೊಂಡಿದೆ ಎಂದು ಅಮೆರಿಕ ಹಿಂದೂ ವಿಶ್ವ ವಿದ್ಯಾನಿಲಯದ ಸಂದರ್ಶಕ ಪ್ರಾಧ್ಯಾಪಕ ಡಾ.ರಾಜ್ ವೇದಂ ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯವು ದಿ ಮಿಥಿಕ್ ಸೊಸೈಟಿ ಸಹಯೋಗದಲ್ಲಿ ಆಯೋಜಿಸಿದ್ದ ಭಾರತೀಯ ಜ್ಞಾನ ಪರಂಪರೆ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿ, ಭಾರತೀಯರ ಮೇಲಿರುವ ಆರ್ಯ- ದ್ರಾವಿಡ ಆಕ್ರಮಣ, ವಲಸೆ ಸಿದ್ಧಾಂತ ಬ್ರಿಟಿಷ್ ಕಾಲದಲ್ಲಿ ಬರೆದ ಕಟ್ಟುಕತೆಯಾಗಿದೆ, ಭಾರತೀಯರುಬ್ಯಾಬಿಲೋನ್, ಗ್ರೀಸ್ ನಾಗರಿಕತೆಯಿಂದ ಜ್ಞಾನ ವ್ಯವಸ್ಥೆ ಅಳವಡಿಕೊಂಡರು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಬದಲಿಗೆ ಮಾನವೀಯ, ಪ್ರಬುದ್ಧ ತತ್ತ್ವಗಳನ್ನೊಳಗೊಂಡ ಸ್ವತಂತ್ರಅಭಿವೃದ್ಧಿ ಜ್ಞಾನ ವ್ಯವಸ್ಥೆಗಳಿಂದಾಗಿ ಭಾರತ ಅಭಿವೃದ್ಧಿಯಾಯಿತು ಎಂದು ಪುರಾತತ್ವ ಶಾಸ್ತ್ರ ಹೇಳುತ್ತದೆ ಎಂದರು.

ಅಸಂಸ್ಕೃತ, ಆಕ್ರಮಣಕಾರಿ, ಅಮಾನವೀಯ ತತ್ವ ಚಿಂತನೆಗಳನ್ನು ಭಾರತೀಯರು ಅನುಸರಿಸುತ್ತಿದ್ದರು ಎಂಬುದು ಬ್ರಿಟಿಷ್ ನಿರ್ಮಿತ ನಕಲಿ ಇತಿಹಾಸವಾಗಿದೆ, ಇತ್ತೀಚಿನ ನಾಗರಿಕತೆಯ ಒಳಹರಿವಿನೊಂದಿಗೆ ಭಾರತ ಅಭಿವೃದ್ಧಿಗೊಂಡಿತು ಎಂಬುದು ಕಪೋಲ ಕಲ್ಪಿತ ಕತೆಯಾಗಿದ್ದು, ಭಾರತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ತನ್ನದೇ ನಾಗರಿಕ ವ್ಯವಸ್ಥೆಯಲ್ಲಿ, ಪರಂಪರೆಯಲ್ಲಿ ಅಭಿವೃದ್ಧಿಯಾಯಿತು ಎಂದು ತಿಳಿಸಿದರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾನಿಲಯದ ಪ್ರಭಾರ ಕುಲಪತಿ ಡಾ.ಅನಂತ್ ಜಾಂಡೇಕರ್ ಮಾತನಾಡಿ, ಇತಿಹಾಸ ಸಂಸ್ಕೃತಿಯ ಸಂಕೇತ, ಇತಿಹಾಸದಿಂದ ನಮ್ಮ ಪರಂಪರೆ ಕಾಣಬಹುದು, ಭಾರತದ ಸಂಸ್ಕೃತಿಯ ಬೇರನ್ನು ಅರ್ಥ ಮಾಡಿಕೊಂಡರೆ ಇತಿಹಾಸ ಸೃಷ್ಟಿಸಬಹುದು ಎಂದು ಹೇಳಿದರು.

ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ರವಿ ಎಸ್. ಮಾತನಾಡಿ, ಭಾರತೀಯ ಇತಿಹಾಸದ ನೈಜತೆ ಅರಿಯಲು ಪರಂಪರೆಯ ಆಳಕ್ಕೆ ಇಳಿಯಬೇಕು, ಬ್ರಿಟಿಷ್ ಆಡಳಿತಾವಧಿಯಲ್ಲಿ ತಿರುಚಿ ಬರೆದ ಇತಿಹಾಸವನ್ನು ಸಮಾಜಕ್ಕೆ ತಿಳಿಸಿ, ವೈಜ್ಞಾನಿಕ ಪುರಾವೆಗಳೊಂದಿಗೆ ಭಾರತೀಯ ಇತಿಹಾಸದ ಅವಲೋಕನ ಮಾಡಿ, ಸಮಾಜಕ್ಕೆ ಭಾರತದ ವೈಭವ ತಿಳಿಸುವ ವಿದ್ಯಾರ್ಥಿ ರಾಯಭಾರಿಗಳಾಗಬೇಕು ಎಂದರು.
ಬೆಂಗಳೂರಿನ ದಿ ಮಿಥಿಕ್ ಸೊಸೈಟಿಯ ಎಂಸಿ ಸದಸ್ಯ ಪ್ರಸನ್ನಕುಮಾರ್.ಎಂ.ಆರ್. ಮಾತನಾಡಿ, ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದಾಗಿ ಕಲೆ, ಶಿಕ್ಷಣ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಬದಲಾವಣೆಗೆ ತೆರೆದುಕೊಳ್ಳಬೇಕಾದ ಅವಕಾಶ ಉಂಟಾಯಿತು, ರಾಷ್ಟ್ರೀಯ ಶಿಕ್ಷಣ ನೀತಿ ಭಾರತೀಯ ಜ್ಞಾನ ಪರಂಪರೆಯ ಬೇರನ್ನು ಹುಡುಕಿ, ಸಾಂಸ್ಕೃತಿಕ ವೈಭವ ಅರಿಯಲು, ಗುಲಾಮಗಿರಿಯ ಮಾನಸಿಕತ್ವವೂ ದೂರಾಗಲು ಸಹಕಾರಿಯಾಯಿತು ಎಂದರು.

ಲೇಖಕ ಡಾ.ಹರೀಶ.ಜಿ.ಬಿ. ಮಾತನಾಡಿ, ಜ್ಞಾನದೊಂದಿಗೆ ಕರುಣೆಯಿರಬೇಕು, ಆಗ ಮಾತ್ರ ಪಾಂಡಿತ್ಯಕ್ಕೆ ಬೆಲೆ ಬರುವುದು, ಜ್ಞಾನಿಯ ಪಾಂಡಿತ್ಯವೆಂದರೆ ಸಮಾಜದ ಕಷ್ಟ, ನೋವು, ದುಃಖಗಳಿಗೆ ಸ್ಪಂದಿಸುವುದು, ಜ್ಞಾನದ ಸಂಕೇತ ಅಲ್ಲಮ ಪ್ರಭುವಾದರೇ, ಕರುಣೆಯ ಸಂಕೇತ ಬುದ್ಧ, ಬಸವಣ್ಣ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷ ಪ್ರೊ.ಕೊಟ್ರೇಶ್.ಎಂ, ಸಮ್ಮೇಳನದ ಸಂಚಾಲಕ ಡಾ.ಸುರೇಶ್.ಡಿ, ಡಾ.ದೇವರಾಜಪ್ಪ. ಎಸ್. ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!