ವಿದ್ಯಾರ್ಥಿಗಳು ಶಿಕ್ಷಣದತ್ತ ಆಸಕ್ತಿ ಹೊಂದಲಿ

35

Get real time updates directly on you device, subscribe now.


ಮಧುಗಿರಿ: ತಾಲೂಕು ಬರಪೀಡಿತ ಪ್ರದೇಶವಾಗಿದ್ದು, ಶಿಕ್ಷಣದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ, ವಿದ್ಯಾರ್ಥಿಗಳು ಶಿಕ್ಷಣದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ತಿಳಿಸಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನೂತನ ಗ್ರಂಥಾಲಯ ಹಾಗೂ ಕೊಠಡಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಬಹುತೇಕ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದಿಂದ ಬಂದು ವ್ಯಾಸಂಗ ಮಾಡುತ್ತಿದ್ದು, ಪದವಿ ಮಾಡಿದರೆ ಯಾವುದಾದರೊಂದು ಕಡೆ ಉದ್ಯಾಗಾವಕಾಶ ದೊರೆಯಲಿದೆ, ಉಪನ್ಯಾಸಕರು ಹೆಣ್ಣು ಮಕ್ಕಳ ಬಗ್ಗೆ ವಿಶೇಷ ಗಮನ ಹರಿಸಬೇಕು, ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಅವರ ಬದುಕು ಹಸನಾಗಲಿದೆ, ಆದ್ದರಿಂದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ 3.5 ಕೋಟಿ ವೆಚ್ಚದಲ್ಲಿ ಗ್ರಂಥಾಲಯ ಮತ್ತು ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ, ಈಗಾಗಲೇ ಬೈಪಾಸ್ ನಲ್ಲಿ ಪಾಲಿಟೆಕ್ನಿಕ್ ಕಾಲೇಜು ನಿರ್ಮಾಣ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳ್ಳಲಿದೆ, ಗ್ರಂಥಾಲಯ ನಿರ್ಮಿಸುತ್ತಿರುವ ಕಾಲೇಜು ಆವರಣದಲ್ಲಿ ಮರಗಳ ಸಂಖ್ಯೆ ಹೆಚ್ಚಾಗಿದ್ದು, ಮರಗಳನ್ನು ಕತ್ತರಿಸದಂತೆ ಕಾಮಗಾರಿ ನಿರ್ಮಾಣಕ್ಕೆ ಆದ್ಯತೆ ನೀಡಿ ಮರಗಳನ್ನು ಕತ್ತರಿಸಲೇಬೇಕಾದ ಅನಿವಾರ್ಯತೆ ಉಂಟಾದಲ್ಲಿ ಒಂದು ಮರಕ್ಕೆ 10 ಪಟ್ಟು ಮರಗಳನ್ನು ಕಾಲೇಜಿನ ಆವರಣದಲ್ಲಿ ಬೆಳೆಸಬೇಕು ಎಂದು ಸೂಚನೆ ನೀಡಿದ ಅವರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವ ರೀತಿಯಲ್ಲಿ ಕಟ್ಟಡ ಇರಲಿ, ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿ ಎಂದು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ 650 ವಿದ್ಯಾರ್ಥಿಗಳಿಗೆ ಸಹಕಾರ ಸಚಿವ ಕೆ.ಎನ್.ರಾಜಣ್ಣನವರು ಶೀಘ್ರದಲ್ಲೇ ತಮ್ಮ ಸ್ವಂತ ಖರ್ಚಿನಲ್ಲಿ ಲ್ಯಾಪ್ ಟ್ಯಾಪ್ ಗಳನ್ನು ವಿತರಿಸಲಿದ್ದಾರೆ ಎಂದು ಎಂಎಲ್ಸಿ ರಾಜೇಂದ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಕಾಂತರಾಜು, ತುಮುಲ್ ಮಾಜಿ ಅಧ್ಯಕ್ಷ ಬಿ.ನಾಗೇಶ್ ಬಾಬು, ಪುರಸಭೆ ಮಾಜಿ ಅಧ್ಯಕ್ಷ ಎಂಕೆ. ನಂಜುಂಡಯ್ಯ, ಮುಖಂಡ ತುಂಗೋಟಿ ರಾಮಣ್ಣ, ಪ್ರಾಂಶುಪಾಲ ಪ್ರೊ.ಬಾಳಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಕೆ.ಮುರಳೀಧರ, ಉಪನ್ಯಾಸಕರಾದ ಮಂಜುನಾಥ್, ಸುರೇಶ್, ಕೆ.ಟಿ.ಸ್ವಾಮಿ, ನಾಗರಾಜು, ಜೆ.ರಾಮು, ವಿಜಯಲಕ್ಷ್ಮಿ, ರಂಜಿತಾ, ಕೆ.ರಹಮತ್ ಇತರರಿದ್ದರು.

Get real time updates directly on you device, subscribe now.

Comments are closed.

error: Content is protected !!