ತುಮಕೂರು: ಜಿಲ್ಲೆಯ ಕೊಬ್ಬರಿ ಬೆಳೆಗಾರರಿಗೆ ನ್ಯಾಯ ದೊರಕಿಸಿ ಕೊಡುವ ಸಲುವಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಫೆ.15 ರಂದು ತುಮಕೂರು ನಗರ ಬಂದ್ ಗೆ ಕರೆ ನೀಡಲಾಗಿದೆ ಎಂದು ರೈತ ಹೋರಾಟಗಾರ ಹಾಗೂ ಜೆಡಿಎಸ್ ಮುಖಂಡ ಕೆ.ಟಿ. ಶಾಂತಕುಮಾರ್ ಹೇಳಿದರು.
ಇಂದು ನಗರದ ಟೌನ್ ಹಾಲ್ ವೃತ್ತದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ರೈತರು, ರೈತ ಸಂಘಟನೆಗಳ ಪದಾಧಿಕಾರಿಗಳು ಸೇರಿದಂತೆ ವಿವಿಧ ಸಂಘಟನೆಗಳವರು ಸಮಾವೇಶಗೊಂಡು ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಮೆರವಣಿಗೆ ನಡೆಸಿ ಬೇಡಿಕೆಯ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಕಳೆದ 33 ದಿನಗಳಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಡೆಯುತ್ತಿರುವ ಅಹೋರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿ, ರಾಜ್ಯದ ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ವಿವಿಧ ಸಂಘಟನೆಗಳು ಈ ಹೋರಾಟಕ್ಕೆ ಕೈ ಜೋಡಿಸಬೇಕು, ವರ್ತಕರು ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಕೊಬ್ಬರಿ ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಹೋರಾಟದ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಕೊಬ್ಬರಿ ಬೆಳೆಗಾರರ ಬೇಡಿಕೆಗಳನ್ನು ಮುಟ್ಟಿಸುವ ಕೆಲಸ ಮಾಡೋಣ ಎಂದರು.
ನಾಫೆಡ್ ಮೂಲಕ ಆರಂಭಿಸಲಾಗಿರುವ ಕೊಬ್ಬರಿ ಖರೀದಿ ಪ್ರಕ್ರಿಯೆಯಲ್ಲಿ ಗೋಲ್ ಮಾಲ್ ನಡೆದಿದ್ದು, ಕೊಬ್ಬರಿ ಬೆಳೆಗಾರರಿಗೆ ಮೋಸವಾಗಿದೆ, ಕೂಡಲೇ ಪಾರದರ್ಶಕವಾಗಿ ಮತ್ತೆ ಕೊಬ್ಬರಿ ಖರೀದಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸಿದರು.
ತುಮಕೂರು ರಾಜ್ಯದಲ್ಲೇ ಅತಿ ಹೆಚ್ಚು ಕೊಬ್ಬರಿ ಬೆಳೆಗಾರರು ಇರುವ ಜಿಲ್ಲೆ, ಆದರೆ ನಮ್ಮ ಜಿಲ್ಲೆಯಲ್ಲೇ ಕೇವಲ 5 ದಿನ ಮಾತ್ರ ಕೊಬ್ಬರಿ ಖರೀದಿಗೆ ನೋಂದಣಿ ಮಾಡಿ 62500 ಮೆಟ್ರಿಕ್ ಟನ್ ನೋಂದಣಿ ಗುರಿ ಮುಟ್ಟಿದ್ದೇವೆ ಎಂದು ನೋಂದಣಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ, ಈ ಮೂಲಕ ಜಿಲ್ಲೆಯ ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ರೈತರ ಹೋರಾಟಕ್ಕೆ ಮಣಿದ ಕೇಂದ್ರ ಸರ್ಕಾರ ನಾಫೆಡ್ ತೆರೆದು ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭಿಸಿತು, ಆದರೆ ಕೇವಲ 5 ದಿನದಲ್ಲಿ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸುವ ಮೂಲಕ ರೈತರಿಗೆ ಮೋಸ ಮಾಡುತ್ತಿದ್ದು, ಈ ಖರೀದಿ ಪ್ರಕ್ರಿಯೆಯಲ್ಲಿ ಗೊಂದಲ, ಲೋಪ ದೋಷಗಳಾಗಿವೆ, ನಿಜವಾದ ರೈತರಿಗೆ ಯಾವುದೇ ರೀತಿಯ ಅನುಕೂಲವಾಗಿಲ್ಲ ಎಂದರು.
ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ರೈತರ ನೋಂದಣಿಯಾಗಿದೆ, ರಾತ್ರೋರಾತ್ರಿ ಮನೆಗಳಿಗೆ ಹೋಗಿ ನೋಂದಣಿ ಮಾಡಿಸುವ ಅವಶ್ಯಕತೆ ಏನಿತ್ತು, ಇದರಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿವೆ, ನಾಫೆಡ್ ಮಂಡಳಿ ಪಾರದರ್ಶಕವಾಗಿ ಕಾರ್ಯ ನಿರ್ವಹಿಸಬೇಕಾಗಿತ್ತು, ಆದರೆ ಇದಲ್ಲಿ ಗೋಲ್ ಮಾಲ್ ನಡೆದಿದೆ, ವರ್ತಕರು, ಪಟ್ಟಭದ್ರರ ಹಿಡಿತದಲ್ಲಿ ನಾಫೆಡ್ ಇದೆ ಎಂದು ದೂರಿದರು.
ಕೇಂದ್ರ ಸರ್ಕಾರ ನಿಗದಿಪಡಿಸಿರುವ 62500 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ನೋಂದಣಿ ಗುರಿ ಸಾಕಾಗುವುದಿಲ್ಲ, ಇದನ್ನು 1.50 ಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸಿ ಪಾರದರ್ಶಕವಾಗಿ ನೋಂದಣಿ ಪ್ರಕ್ರಿಯೆ ಮತ್ತೆ ಪ್ರಾರಂಭಿಸಬೇಕು, ಅಲ್ಲದೆ ಕೊಬ್ಬರಿ ಗುಣಮಟ್ಟದಲ್ಲಿ 75 ಎಂಎಂ ನಿಗದಿಪಡಿಸಲಾಗಿದೆ, ಪ್ರಸ್ತುತ ಬರಗಾಲ ಆವರಿಸಿರುವುದರಿಂದ ನೀರಿಲ್ಲದೆ, ಅನೇಕ ರೋಗಗಳಿಗೆ ತೆಂಗಿನ ಮರಗಳು ತುತ್ತಾಗಿವೆ, ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಾಫೆಡ್ ನಿಗದಿಪಡಿಸಿರುವ 75 ಎಂಎಂ ಕೊಬ್ಬರಿ ಸಿಗುವುದೇ ದುಸ್ತರ, ಇದನ್ನು 40- 50 ಎಂಎಂಗೆ ನಿಗದಿಗೊಳಿಸಿ ತಮಿಳುನಾಡು ರಾಜ್ಯದ ಮಾದರಿಯಲ್ಲಿ ಕರ್ನಾಟಕದಲ್ಲೂ ಕೊಬ್ಬರಿ ಖರೀದಿಸಬೇಕು ಎಂದು ಆಗ್ರಹಿಸಿದರು.
ಕೊಬ್ಬರಿ ಖರೀದಿ ಪ್ರಕ್ರಿಯೆಯನ್ನು ಕನಿಷ್ಠ 8 ತಿಂಗಳ ಕಾಲ ನಡೆಸಬೇಕು, ಈ ರೀತಿ ಗೋಲ್ ಮಾಲ್ ಮಾಡಿ 5 ದಿನಕ್ಕೆ ಸ್ಥಗಿತಗೊಳಿಸುವುದಲ್ಲ, ಇದನ್ನೆ ಪ್ರತಿಭಟಿಸಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲು ಸಿದ್ಧತೆ ಕೈಗೊಳ್ಳುತ್ತಿರುವುದಾಗಿ ಹೇಳಿದರು.
ಸಂಘದ ಜಿಲ್ಲಾಧ್ಯಕ್ಷ ಆರಾಧ್ಯ ಮಾತನಾಡಿ, ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಭರವಸೆ ನೀಡಿದಂತೆ 3 ಸಾವಿರ ರೂ. ಬೆಂಬಲ ಬೆಲೆ ನೀಡಬೇಕು, ನಾಫೆಡ್ ಖರೀದಿ ನೋಂದಣಿಯಲ್ಲಿ ನಿಜವಾದ ತೆಂಗು ಬೆಳೆಗಾರರಿಗೆ ಮೋಸ ಆಗಿದೆ, ಕೇವಲ 4 ದಿನದಲ್ಲಿ 62500 ಮೆಟ್ರಿಕ್ ಟನ್ ಖರೀದಿ ಪೂರ್ಣಗೊಳಿಸಲಾಗಿದೆ ಎಂದು ನಾಫೆಡ್ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ, ಇದರಲ್ಲಿ ಜಿಲ್ಲೆಯ ರೈತರಿಗೆ ಮೋಸವಾಗಿದೆ, ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಸಂಪಿಗೆ ಕೀರ್ತಿ, ತುರುವೇಕೆರೆ ನಾಗೇಂದ್ರ, ತಿಪಟೂರು ರಾಜಣ್ಣ ಮತ್ತಿತರರು ಭಾಗವಹಿಸಿದ್ದರು.
Comments are closed.