ದಿನಗೂಲಿ ಪಾವತಿಗೆ ಪೌರ ಕಾರ್ಮಿಕರ ಪ್ರತಿಭಟನೆ

34

Get real time updates directly on you device, subscribe now.


ಕುಣಿಗಲ್: ಕಳೆದ ಮೂರು ತಿಂಗಳಿನಿಂದ ಪುರಸಭೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಿದ್ದ ಪೌರ ನೌಕರರು ದಿನಗೂಲಿ ಪಾವತಿಸುವಂತೆ ಆಗ್ರಹಿಸಿ, ಸೋಮವಾರ ನೌಕರರು ಕೆಲಸದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ಪುರಸಭೆಯ ಸ್ವಚ್ಛತಾ ವಿಭಾಗಕ್ಕೆ ಕಳೆದ ನವೆಂಬರ್ ನಲ್ಲಿ 33 ಮಂದಿ ಪೌರ ನೌಕರರನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೋಜಿಸಿ ಕೊಳ್ಳಲಾಗಿತ್ತು, ಅವರಿಗೆ ಪಾವತಿಸಬೇಕಾದ ದಿನಗೂಲಿ ಪಾವತಿ ಮಾಡಿರಲಿಲ್ಲ, ಈಬಗ್ಗೆ ಕೇಳಿಕೇಳಿ ಸಾಕಾಗಿದ್ದು ಹೊರಗುತ್ತಿಗೆ ಪೌರನೌಕರರು ಸೋಮವಾರ ಬರಬೇಕಾದ ದಿನಗೂಲಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ಆರಂಭಿಸಿದರು. ಕಾರ್ಮಿಕ ಕೃಷ್ಣ ಮಾತನಾಡಿ, ಪುರಸಭೆಯ ಸ್ವಚ್ಛತಾ ಕೆಲಸಕ್ಕೆ ದಾವಣಗೆರೆ ಸೇರಿದಂತೆ ವಿವಿಧೆಡೆಯಿಂದ 33 ಕ್ಕು ಹೆಚ್ಚುಮಂದಿ ಬಂದಿದ್ದೇವೆ, ನಮಗೆ ದಿನಾಲೂ ಅಟೆಂಡೆನ್ಸ್ ಹಾಕಿದ್ದಾರೆ, ದಿನಗೂಲಿ ಆಧಾರದ ಮೇಲೆ ಸಂಬಳ ನೀಡಿಲ್ಲ, ಕೇಳಿದರೆ ಸೂಕ್ತ ಉತ್ತರ ನೀಡುತ್ತಿಲ್ಲ, ಇದರಿಂದ ನಮಗೆ ಜೀವನ ನಿರ್ವಹಣೆ ತೊಂದರೆ ಆಗಿದೆ ಎಂದು ಅಳಲು ತೋಡಿಕೊಂಡರು.

ಹೊರಗುತ್ತಿಗೆ ನೌಕರರ ಪ್ರತಿಭಟನೆ ಬೆಂಬಲಿಸಿದ ಪೌರ ನೌಕರರ ಸಂಘದ ಅಧ್ಯಕ್ಷ ಸರಸಮ್ಮ, ಕಳೆದ ಮೂರು ತಿಂಗಳಿನಿಂದ ಹಗಲಿರುಳು ನೌಕರರ ದುಡಿಸಿಕೊಂಡು ಈಗ ಅವರಿಗೆ ಸಿಗಬೇಕಾದ ದಿನಗೂಲಿ ನೀಡುತ್ತಿಲ್ಲ, ಪರಿಸರ ಅಭಿಯಂತರರನ್ನು ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ, ಸಮಸ್ಯೆ ಬಗೆಹರಿಸುವ ವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದರು.

ಪರಿಸರ ಅಭಿಯಂತರ ಚಂದ್ರಶೇಖರ್, ಹೊರಗುತ್ತಿಗೆ ನೌಕರರನ್ನು ಎರಡು ತಿಂಗಳ ಕಾಲ ಉಚಿತವಾಗಿ ಕೆಲಸ ಮಾಡುವ ಷರತ್ತು ಹಾಕಿದ್ದು ಈಪೈಕಿ ಯಾರು ಕೆಲಸ ಮಾಡುತ್ತಾರೋ ಅವರನ್ನು ಮಾತ್ರ ಗುತ್ತಿಗೆ ಆಧಾರದ ಮೇಲೆ ಸೇರಿಸಿಕೊಳ್ಳಲು ಯೋಜಿಸಲಾಗಿತ್ತು, ಈ ಬಗ್ಗೆ ಅವರಿಗೆ ತಿಳಿಸಲಾಗಿದೆ, ಮುಖ್ಯಾಧಿಕಾರಿಗಳೆ ನಿಯೋಜಿಸಿದ್ದು ಅವರೆ ಮುಂದಿನ ಕ್ರಮ ವಹಿಸಬೇಕೆಂದರು.

ನೌಕರರ ಪ್ರತಿಭಟನೆ ಬೆಂಬಲಿಸಿದ ಪುರಸಭೆ ಸದಸ್ಯ ಆನಂದ್ ಕುಮಾರ್ ಮಾತನಾಡಿ, ಪುರಸಭೆಯಲ್ಲಿ ನಿರ್ವಹಿಸಲಾಗಿದ್ದು ಹಾಜರಿ ಪುಸ್ತಕ ತಂದು ನೌಕರರಿಗೆ ಕೂಡಲೆ ದಿನಗೂಲಿ ಪಾವತಿಸುವಂತೆ ಆಗ್ರಹಿಸಿದರು.
ಸದಸ್ಯರಾದ ಶ್ರೀನಿವಾಸ್, ನಾಗೇಂದ್ರ, ರಂಗಸ್ವಾಮಿ ಬೆಂಬಲಿಸಿದ್ದು ಶಾಸಕ ಡಾ.ರಂಗನಾಥ್ ಮುಖ್ಯಾಧಿಕಾರಿಗಳಿಗೆ ಕರೆ ಮಾಡಿ ಕೂಡಲೆ ದಿನಗೂಲಿ ನೀಡಲು ಸೂಚಿಸಿದ ಮೇರೆಗೆ ಮುಖ್ಯಾಧಿಕಾರಿ ಶಿವಪ್ರಸಾದ್ ದಿನಗೂಲಿ ನೌಕರರಿಗೆ ಅಗತ್ಯವಾಗಿ ಪಾವತಿಸಬೇಕಿರುವ ಕೂಲಿ ಹಣ ನೀಡಲಾಗುವುದು, 24 ಮಂದಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ ಕೆಲಸಕ್ಕೆ ನಿಯೋಜಿಸಲು ಅವಕಾಶ ಇದ್ದು ಅಗತ್ಯ ಪ್ರಕ್ರಿಯೆ ನಡೆಸಿದ ನಂತರ ಕ್ರಮ ವಹಿಸುವ ಭರವಸೆ ನೀಡಿದ ಮೇರೆಗೆ ನೌಕರರು ಪ್ರತಿಭಟನೆ ಹಿಂಪಡೆದರು.

Get real time updates directly on you device, subscribe now.

Comments are closed.

error: Content is protected !!