ಡಾ.ಕವಿತಾಕೃಷ್ಣರ ನಿಧನ ಸಾಹಿತ್ಯ ಕ್ಷೇತ್ರಕ್ಕೆ ನಷ್ಟ

ಹಿಂದುಳಿದ ವರ್ಗಗಳ ಒಕ್ಕೂಟದಿಂದ ಹಿರಿಯ ಸಾಹಿತಿಗೆ ಗೌರವ ನಮನ

38

Get real time updates directly on you device, subscribe now.


ತುಮಕೂರು: ಹಿರಿಯ ಸಾಹಿತಿ ಡಾ.ಕವಿತಾಕೃಷ್ಣ ಅವರು 350ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ, ಕನ್ನಡ ನಾಡು, ನುಡಿ, ನೆಲ, ಜಲದ ಹೋರಾಟಗಳಲ್ಲಿ ಗಟ್ಟಿ ಧ್ವನಿಯಾಗಿ ಹೋರಾಟ ನಡೆಸಿದ್ದಾರೆ, ಡಾ.ರಾಜ್ ಕುಮಾರ್ ಅವರ ಜೊತೆಯಾಗಿ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು, ಡಾ.ಕವಿತಾಕೃಷ್ಣರ ನಿಧನದಿಂದ ಕನ್ನಡ ನಾಡಿಗೆ ಅಪಾರ ನಷ್ಟವಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಧನಿಯಾಕುಮಾರ್ ಹೇಳಿದರು.

ಸೋಮವಾರ ನಗರದ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿಧನರಾದ ಹಿರಿಯ ಸಾಹಿತಿ ಡಾ.ಕವಿತಾಕೃಷ್ಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಮುಖಂಡರು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು, ಮೌನಾಚರಣೆ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಈ ವೇಳೆ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಗೌರವ ಪಡೆದಿದ್ದ ಡಾ.ಕವಿತಾಕೃಷ್ಣ ಅವರು ತಮ್ಮ ಕೊನೆ ದಿನಗಳ ವರೆಗೂ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದರು, ಸುಮಾರು 350ಕ್ಕೂ ಹೆಚ್ಚು ಕೃತಿ ರಚಿಸಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ, ಕನ್ನಡ ಶಿಕ್ಷಕರಾಗಿ, ಅಪ್ಪಟ ಕನ್ನಡಾಭಿಮಾನಿಯಾಗಿದ್ದ ಡಾ.ಕವಿತಾಕೃಷ್ಣರು ಕನ್ನಡದ ಅಸ್ಮಿತೆಗೆ ಧಕ್ಕೆಯಾದಾಗ ಗಟ್ಟಿಧ್ವನಿಯಾಗಿ ನಿಲ್ಲುತ್ತಿದ್ದರು, ಸಾಹಿತ್ಯ ಮಾತ್ರವಲ್ಲದೆ ಜಿಲ್ಲೆಯ ಹೇಮಾವತಿ ನೀರಿನ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು, ನಾಡು, ನುಡಿ ಪರವಾಗಿ ಯುವ ಜನರನ್ನು ಸಂಘಟಿಸಿ ಅವರ ಜೊತೆ ತಾವೂ ಶಕ್ತಿಯಾಗಿ ನಿಲ್ಲುತ್ತಿದ್ದರು, ಜಿಲ್ಲಾ ಕನ್ನಡ ಸೇನೆಯ ಗೌರವಾಧ್ಯಕ್ಷರಾಗಿ ಸದಾ ಬೆಂಬಲ ನೀಡಿದ್ದರು ಎಂದು ಅವರ ಸೇವೆ ಸ್ಮರಿಸಿದರು.
ತಮ್ಮ ಸಾಹಿತ್ಯ, ಹೋರಾಟದ ಮೂಲಕ ಕೊಡುಗೆಯಾಗಿದ್ದ ಡಾ.ಕವಿತಾಕೃಷ್ಣರ ಸೇವೆ, ಕೊಡುಗೆ ಮುಂದಿನ ತಲೆಮಾರಿನವರಿಗೂ ಸ್ಫೂರ್ತಿಯಾಗಬೇಕು, ನಗರದಲ್ಲಿ ಇವರ ಪುತ್ಥಳಿ ಸ್ಥಾಪಿಸಬೇಕು, ಪ್ರಮುಖ ರಸ್ತೆ, ವೃತ್ತಕ್ಕೆ ಇವರ ಹೆಸರಿಟ್ಟು ಅವರ ಸೇವೆಯನ್ನು ಸ್ಮರಣೀಯವಾಗಿಸಬೇಕು ಎಂದು ಧನಿಯಾಕುಮಾರ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಜಿಲ್ಲಾ ಹಿಂದುಳಿದ ವರ್ಗಗಳ ಗೌರವಾಧ್ಯಕ್ಷ ಹಾಗೂ ರಾಜ್ಯ ಚೆಸ್ ಅಕಾಡೆಮಿ ಉಪಾಧ್ಯಕ್ಷ ಟಿ.ಎನ್.ಮಧುಕರ್ ಮಾತನಾಡಿ, ಸಾಮಾನ್ಯ ಹಿಂದುಳಿದ ವರ್ಗದ ಕುಟುಂಬದಲ್ಲಿ ಜನಿಸಿದ ಡಾ.ಕವಿತಾಕೃಷ್ಣ ಅವರು ವಿದ್ಯಾರ್ಥಿಗಳ ಮೆಚ್ಚಿನ ಕನ್ನಡ ಶಿಕ್ಷಕರಾಗಿ, ಉತ್ತಮ ಕೃತಿ ರಚಿಸಿ, ನಾಡು, ನುಡಿ ಪರವಾದ ಹೋರಾಟ ಸಂಘಟಿಸಿ ಹೆಸರಾಗಿದ್ದಾರೆ, ಅನೇಕ ಗಣ್ಯರ ಜೀವನ ಚರಿತ್ರೆಗಳ ಕೃತಿಗಳನ್ನು ಸಂಪಾದಿಸಿ, ಮಹನೀಯರ ಬದುಕನ್ನು ಶಾಶ್ವತವಾಗಿಸುವ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಶ್ಲಾಸಿದರು.

ಡಾ.ಕವಿತಾಕೃಷ್ಣರು ಇನ್ನಷ್ಟು ಕಾಲ ಬದುಕಿದ್ದರೆ ಮತ್ತಷ್ಟು ಶ್ರೇಷ್ಠ ಕೃತಿಗಳು ಹೊರಬರುತ್ತಿದ್ದವು, ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ, ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು.

ಹಿರಿಯ ಕ್ರೀಡಾಪಟು ಟಿ.ಕೆ.ಆನಂದ್ ಅವರು ಕವಿತಾಕೃಷ್ಣರೊಂದಿಗಿನ ತಮ್ಮ ಒಡನಾಟ ಸ್ಮರಿಸಿಕೊಂಡು ಕವಿತಾಕೃಷ್ಣರ ಸಾಹಿತ್ಯ, ಹೋರಾಟ, ಅವರ ಭಾಷಣ ವೈಖರಿಗೆ ಮನಸೋತ ಅಪಾರ ಜನ ಅವರ ಅಭಿಮಾನಿಗಳಾಗಿದ್ದಾರೆ, ಅಂತಹವರಲ್ಲಿ ನಾನೂ ಒಬ್ಬ, ಇವರ ಸಾಹಿತ್ಯ, ಸಾಮಾಜಿಕ ಕಳಕಳಿ ಯುವ ಪೀಳಿಗೆಗೆ ಮಾದರಿಯಾಗಲಿ ಎಂದರು.
ಪತ್ರಕರ್ತ ಸುದ್ದಿಬಿಂಬ ಸತೀಶ್, ನಿವೃತ್ತ ಪ್ರಾಚಾರ್ಯ ವೆಂಕಟೇಶ್ ಕವಿತಾಕೃಷ್ಣರ ಸಾಹಿತ್ಯ ಸೇವೆ ಸ್ಮರಿಸಿದರು. ಮುಖಂಡರಾದ ಹೆಬ್ಬೂರು ಶ್ರೀನಿವಾಸಮೂರ್ತಿ, ಶಾಂತಕುಮಾರ್, ಸತೀಶ್ ಕುಮಾರ್, ಗುರು ರಾಘವೇಂದ್ರ ಮೊದಲದವರು ಭಾಗವಹಿಸಿದ್ದರು.


ತುಮಕೂರಿನ ಕನ್ನಡ ಭವನದಲ್ಲಿ ಸೋಮವಾರ ಮಧ್ಯಾಹ್ನ ನಿಧನರಾದ ಸಾಹಿತಿ ವಿದ್ಯಾವಾಚಸ್ಪತಿ ಕವಿತಾ ಕೃಷ್ಣ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಕಸಾಪ ಅಧ್ಯಕ್ಷ, ಕೆ.ಎಸ್.ಸಿದ್ದಲಿಂಗಪ್ಪ ಹಾಗೂ ಪದಾಧಿಕಾರಿಗಳು, ಪತ್ರಕರ್ತ ಎಸ್.ನಾಗಣ್ಣ, ಮಾಜಿ ಎಂಎಲ್ಸಿ ಡಾ.ಎಂ.ಆರ್.ಹುಲಿನಾಯ್ಕರ್, ಡಾ.ಲಕ್ಷ್ಮಣದಾಸ್ ಸೇರಿ ಸಾಹಿತ್ಯ, ಸಾಂಸ್ಕೃತಿಕ ಲೋಕದ ಹಲವು ಗಣ್ಯರು ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

Get real time updates directly on you device, subscribe now.

Comments are closed.

error: Content is protected !!