ತುಮಕೂರು: ಜಿಲ್ಲಾಧಿಕಾರಿ ಶುಭ ಕಲ್ಯಾಣ ಅವರು ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ ಹಾಗೂ ದಿಬ್ಬೂರು ಜಂಕ್ಷನ್- ಶಿರಾಗೇಟ್ ರಿಂಗ್ ರಸ್ತೆ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ನಗರದಲ್ಲಿ ನೂತನವಾಗಿ 111.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಅಂತಿಮ ಹಂತದ ಕಾಮಗಾರಿ ಪರಿಶೀಲಿಸಲು ಮಂಗಳವಾರ ಭೇಟಿ ನೀಡಿದ ಜಿಲ್ಲಾಧಿಕಾರಿ, ಬಾಕಿ ಇರುವ ಸಣ್ಣ ಪುಟ್ಟ ಕೆಲಸ ಪೂರ್ಣಗೊಳಿಸಿ ಮಾರ್ಚ್ 15 ರೊಳಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಮಧ್ಯಭಾಗದಲ್ಲಿ 3.17 ಎಕರೆ ಪ್ರದೇಶದಲ್ಲಿ ತಲೆ ಎತ್ತಿರುವ ಬಸ್ ನಿಲ್ದಾಣದ ನೆಲ ಅಂತಸ್ತಿಗೆ ಭೇಟಿ ನೀಡಿ ಗ್ರಾನೈಟ್ ಪಾಲಿಷಿಂಗ್, ಪೇಂಟಿಂಗ್ ಕೆಲಸ ಪರಿಶೀಲಿಸಿ ಮಾಹಿತಿ ಪಡೆದರು.
ಪ್ರಯಾಣಿಕರ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಗ್ರಿಲ್ ಅಳವಡಿಸಬೇಕೆಂದು ನಿರ್ದೇಶನ ನೀಡಿದರಲ್ಲದೆ, ಪ್ರತಿದಿನ 2 ಪಾಳಿಯಲ್ಲಿ ಕೆಲಸಗಾರರನ್ನು ನಿಯೋಜಿಸಿ ತುರ್ತಾಗಿ ಅಂತಿಮ ಹಂತದ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಕೆ ಎಸ್ ಆರ್ ಟಿ ಸಿ ಅಧಿಕಾರಿಗಳಾದ ತ್ರಿವೇಣಿ, ಕೃಷ್ಣಪ್ಪ ಹಾಗೂ ಕಟ್ಟಡ ನಿರ್ಮಾಣ ಏಜೆನ್ಸಿಯ ಗುತ್ತಿಗೆದಾರ ನಟರಾಜ್ ಹಾಜರಿದ್ದರು.
ರಿಂಗ್ ರಸ್ತೆ ಬೇಗ ಮುಗಿಸಿ: ವಾಹನ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೈಗೆತ್ತಿಕೊಂಡಿರುವ ನಗರದ ದಿಬ್ಬೂರು ಜಂಕ್ಷನ್ನಿಂದ ಶಿರಾಗೇಟ್ ವರೆಗೆ 1.5 ಕಿ.ಮೀ. ದೂರದ ರಿಂಗ್ ರಸ್ತೆ ಕಾಮಗಾರಿ ಬೇಗ ಮುಗಿಸಬೇಕು, ಕಾಮಗಾರಿ ಪೂರ್ಣಗೊಳಿಸಲು ವಿಳಂಬಕ್ಕೆ ಕಾರಣ ಕೇಳಿದಾಗ ಉತ್ತರಿಸಿದ ಲೋಕೋಪಯೋಗಿ ಇಂಜಿನಿಯರ್ ಸಿದ್ದಪ್ಪ ಕಳೆದ ವರ್ಷ ಮಳೆಯಿಂದಾಗಿ ಸೇತುವೆ ನಿರ್ಮಿಸಲು ಸಾಧ್ಯವಾಗಲಿಲ್ಲ, ರಸ್ತೆ ಕಾಮಗಾರಿಗಾಗಿ 9.60 ಕೋಟಿ ರೂ. ಹಾಗೂ ಸೇತುವೆ ನಿರ್ಮಾಣಕ್ಕಾಗಿ ಹೆಚ್ಚುವರಿ 4 ಕೋಟಿ ರೂ. ಅಂದಾಜು ಮೊತ್ತದಲ್ಲಿ ಕಾಮಗಾರಿ ಕೈಗೊಂಡಿದ್ದು, ಇನ್ನೆರಡು ತಿಂಗಳಲ್ಲಿ ಪೂರ್ಣಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆ ಕಾಮಗಾರಿಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಪ್ರತಿದಿನ ಕಾಮಗಾರಿಯ ಪ್ರಗತಿ ವಿವರವನ್ನು ನನ್ನ ಗಮನಕ್ಕೆ ತರಬೇಕೆಂದು ಟೂಡಾ ಆಯುಕ್ತೆ ಬಸಂತಿ ಹಾಗೂ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಅರುಣ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
Comments are closed.