ತುಮಕೂರು: ಮೂಢನಂಬಿಕೆ ಹೆಸರಿನಲ್ಲಿ ಗರ್ಭಿಣಿ, ಬಾಣಂತಿಯರು ಹಾಗೂ ಋತುಮತಿಯಾದ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರಗೆ ಇರಿಸುವ ಮೂಲಕ ಹೆಣ್ಣು ಮಕ್ಕಳ ಮೇಲೆ ಶೋಷಣೆ ನಡೆಸಲಾಗುತ್ತಿದ್ದು, ಅವರ ಮಾನವ ಹಕ್ಕುಗಳನ್ನು ಕಸಿದುಕೊಳ್ಳಲಾಗುತ್ತಿದೆ, ಇಂತಹ ಅನಿಷ್ಠ ಪದ್ಧತಿ ಕಂಡು ಬಂದ ತಕ್ಷಣ ಪೊಲೀಸರು ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಜಸ್ಟಿಸ್ ಎಲ್.ನಾರಾಯಣ ಸ್ವಾಮಿ ಸೂಚಿಸಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ನಗರದ ಬಾಲ ಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಂವಾದ ಮತ್ತು ಕಾರ್ಯಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವ ಹಕ್ಕುಗಳ ಸಂರಕ್ಷಣೆ ಅಧಿಕಾರಿಗಳು ತಳಮಟ್ಟದಿಂದಲ್ಲೇ ಮಾಡಬೇಕು, ಮೂಢನಂಬಿಕೆಯ ಆಚರಣೆ ಪ್ರಕರಣ ಕಂಡು ಬಂದ ತಕ್ಷಣ ಗ್ರಾಮ ಪಂಚಾಯತಿಯ ಗ್ರಾಮಲೆಕ್ಕಿಗ, ಪಿಡಿಓ, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆಯರು ತಕ್ಷಣ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವ ಮಾಹಿತಿದಾರರಾಗಬೇಕು, ಪೊಲೀಸರು ತಕ್ಷಣ ಪ್ರಕರಣ ದಾಖಲಿಸಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಹೀಗಾದಲ್ಲಿ ಮಾತ್ರ ಇಂತಹ ಅನಿಷ್ಠ ಪದ್ಧತಿ ಕೊನೆಗಾಣಲಿವೆ ಎಂದರು.
ಎಲ್ಲಿಯವರೆಗೆ ಪೋಷಕರ ವಿರುದ್ಧ ಕಾನೂನು ಕ್ರಮ ಆಗುವುದಿಲ್ಲವೋ ಅಲ್ಲಿಯವರೆಗೆ ಇಂತಹ ಮೂಢನಂಬಿಕೆ ಆಚರಣೆಗೆ ಕೊನೆ ಇರುವುದಿಲ್ಲ. ಪೊಲೀಸರು ಎಫ್ ಐ ಆರ್ ದಾಖಲಿಸದಿದ್ದಲ್ಲಿ ಸಂಬಂಧಪಟ್ಟ ಪ್ರಕರಣ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಶಿಕ್ಷಣ ಇಲಾಖೆಗಳು ಮಕ್ಕಳಿಗೆ ಅನಿಷ್ಠ ಪದ್ಧತಿ ಆಚರಣೆ ಬಗ್ಗೆ ಜಾಗೃತಿ ಮೂಡಿಸಿ, ಇಂತಹ ಪ್ರಕರಣ ಕಂಡು ಬಂದಲ್ಲಿ ತಕ್ಷಣ ಶಿಕ್ಷಕರಿಗೆ ಮಾಹಿತಿ ನೀಡುವ ಬಗ್ಗೆ ತಿಳಿ ಹೇಳಬೇಕು ಎಂದರು.
ಸರ್ಕಾರಿ ನೌಕರರೆಲ್ಲರೂ ದೌರ್ಜನ್ಯಕ್ಕೊಳಗಾಗುವ ಹೆಣ್ಣು ಮಕ್ಕಳ ರಕ್ಷಣೆಗಾರರಾಗಬೇಕು, ಇಂತಹ ಪ್ರಕರಣ ಮರು ಕಳಿಸಿದಲ್ಲಿ ಕೇಂದ್ರ ನಾಗರಿಕ ಸೇವೆ ಅಧಿಕಾರಿಗಳ ವಿರುದ್ಧ ಸೆಕ್ಷನ್ 302, 304ರಡಿ ಪ್ರಕರಣ ದಾಖಲಿಸಿ, ಕೇಂದ್ರ ಸರ್ಕಾರಕ್ಕೆ ಕ್ರಮಕ್ಕೆ ಆಗ್ರಹಿಸಿ ಆಯೋಗದಿಂದ ಪತ್ರ ಬರೆಯಲಾಗುವುದು ಎಂದರು.
ಆಯೋಗದಲ್ಲಿ ದೂರು ದಾಖಲಿಸಿರುವ ದೂರುದಾರರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರತಿ ಜಿಲ್ಲೆಯಲ್ಲೂ ಈ ಕಾರ್ಯಕ್ರಮ ಮಾಡಲಾಗುತ್ತಿದೆ, ದೂರುದಾರರೊಂದಿಗೆ ನೇರವಾಗಿ ಚರ್ಚಿಸಿ ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವುಗಳನ್ನು ಪರಿಹರಿಸುವುದೇ ಆಯೋಗದ ಉದ್ದೇಶವಾಗಿದೆ, ಭಾರತ ಸಂವಿಧಾನ ಜಾರಿಯಾಗಿ ಇಷ್ಟು ವರ್ಷಗಳ ನಂತರವೂ ಅನೇಕ ಭಾಗಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಅಧಿಕಾರಿಗಳ ವಿಫಲತೆ ತೋರಿಸುತ್ತದೆ, ಅನಾಗರಿಕತೆಯ ಪರಮಾವಧಿಯೇ ಅಸ್ಪೃಶ್ಯತೆ, ಅಸ್ಪೃಶ್ಯತೆ ಪ್ರಕರಣ ಎಲ್ಲೇ ಕಂಡುಬಂದರು ಅಂತ ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಕೈಗೊಳ್ಳದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಮಾನವ ಹಕ್ಕುಗಳ ಆಯೋಗ ಸ್ವತಃ ಪ್ರಕರಣ ದಾಖಲಿಸುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ಮಾನವ ಹಕ್ಕುಗಳ ಸಂರಕ್ಷಣೆ ಮತ್ತು ಹಕ್ಕುಗಳ ಉಲ್ಲಂಘನೆ ತಡೆಯಲು ಪ್ರತಿಯೊಬ್ಬರೂ ಶ್ರಮಿಸಬೇಕು, ನೊಂದವರಿಗೆ ಅಧಿಕಾರಿಗಳೇ ಫೋಷಕರು ಎಂದು ಹೇಳಿದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಜಸ್ಟಿಸ್ ಟಿ. ಶಾಮ್ ಭಟ್ ಇದುವರೆಗೂ ಇತ್ಯರ್ಥವಾಗದೇ ಇರುವ ದೂರು ಅಧಿಕಾರಿಗಳ ಸಮ್ಮುಖದಲ್ಲಿ ಪರಿಹರಿಸುವುದು ಮತ್ತು ಕೆಲವು ಅನಿಷ್ಟ ಪದ್ಧತಿ ಹೋಗಲಾಡಿಸಲು ಜಿಲ್ಲಾಡಳಿತಕ್ಕೆ ಶಕ್ತಿ ತುಂಬುವ ಕೆಲಸವೇ ಈ ಕಾರ್ಯಕ್ರಮದ ಉದ್ದೇಶವಾಗಿದೆ, ಮುಂದಿನ ದಿನಗಳಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಈ ಕಾರ್ಯಕ್ರಮ ಮಾಡಲಾಗುತ್ತದೆ, ದೂರುದಾರರಿಗೆ ಸರಿಯಾಗಿ ಸ್ಪಂದಿಸಿ ಅವರಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದರು.
ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಜಸ್ಟಿಸ್ ಎಸ್.ಕೆ.ವಂಟಿಗೋಡಿ ಮಾತನಾಡಿ, ಭೂ ದಾಖಲಾತಿಗಳಿಗಾಗಿ ಸಾರ್ವಜನಿಕರನ್ನು ವಿನಾ ಕಾರಣ ಸರ್ಕಾರಿ ಕಚೇರಿಗಳಿಗೆ ಅಲೆದಾಡಿಸುವುದೂ ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ, ಸರ್ಕಾರಿ ಅಧಿಕಾರಿ, ನೌಕರರು ಕಚೇರಿಗೆ ಬರುವಂತಹ ಸಾರ್ವಜನಿಕರನ್ನು ಸಹಾನುಭೂತಿಯಿಂದ ಮಾತನಾಡಿಸಬೇಕು ಎಂದರು.
ಪೊಲೀಸ್ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳು ಹೆಚ್ಚಾಗಿ ಬರುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿ ವರದಿ ಸಲ್ಲಿಸಬೇಕು, ಸಾಧ್ಯವಾದಷ್ಟು ಪ್ರಕರಣಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಬೇಕು, ತಡ ಮಾಡಿದಷ್ಟು ಹೆಚ್ಚು ಮಾನವ ಹಕ್ಕುಗಳನ್ನು ಕಸಿದುಕೊಂಡ ಹಾಗೆ ಎಂದರು.
ಆಯೋಗದ ಉಪ ಕಾರ್ಯದರ್ಶಿ ದಿನೇಶ್ ಸಂಪತ್ ರಾಜ್ ಮಾತನಾಡಿ, ಶೋಷಣೆರಹಿತ ಸಮಾಜ, ನಾಗರಿಕರಿಗೆ ಮುಕ್ತ ಅವಕಾಶ, ಗೌರವ ಸಿಗಬೇಕೆನ್ನುವುದು ಪ್ರಜಾಪ್ರಭುತ್ವದ ಆಶಯವಾಗಿದೆ, ಹಕ್ಕುಗಳು ಮತ್ತು ಕರ್ತವ್ಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ನಾಗರಿಕ ಸೇವೆ ಸಲ್ಲಿಸುವ ಅಧಿಕಾರಿಗಳು ಯಾವುದೇ ಲೋಪದೋಷವಿಲ್ಲದೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಅಪರ ಜಿಲ್ಲಾಧಿಕಾರಿ ಶಿವಾನಂದ್ ಕರಾಳೆ, ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ ಹಾಜರಿದ್ದರು.
Comments are closed.