ಕಪ್ಪು ನೀರಿನ ವೀರ ನಾಟಕದ ಪ್ರದರ್ಶನ ಇಂದು

38

Get real time updates directly on you device, subscribe now.


ತುಮಕೂರು: ಜನ ಕಲ್ಯಾಣ ಟ್ರಸ್ಟ್ ವತಿಯಿಂದ ರಂಗಭೂಮಿ ಟ್ರಸ್ಟ್ ಕೊಡಗು ಅವರ ಸಹಯೋಗದಲ್ಲಿ ಮೈಸೂರು ರಂಗಾಯಣದ ಮಾಜಿ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ವೀರಸಾರ್ವಕರ್ ಅವರ ಜೀವನ ಕುರಿತ ಕಪ್ಪು ನೀರಿನ ವೀರ ನಾಟಕದ ಪ್ರದರ್ಶನ ಫೆಬ್ರವರಿ 15 ರ ಸಂಜೆ 6 ಗಂಟೆಗೆ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದವರು ಅನೇಕರು, ಅವರಲ್ಲಿ ವೀರ ಸಾರ್ವಕರ್ ಕೂಡ ಒಬ್ಬರು, ಆದರೆ ಅವರ ಬಗ್ಗೆ ರಾಜಕೀಯ ಕಾರಣಕ್ಕಾಗಿ ಕೆಲವರು ಕೆಸರು ಎರಚುವ ಕೆಲಸ ಮಾಡುತ್ತಿದ್ದಾರೆ, ಸಾಹಿತಿಗಳು, ಕವಿಗಳು, ನಾಟಕಕಾರರು ಆಗಿರುವ ವೀರ ಸಾರ್ವಕರ್ ಅವರ ಜೀವನ ಚರಿತ್ರೆ ಅವಲೋಕನ ಮಾಡಿ ನಾಟಕ ರಚಿಸಿ, ನಿರ್ದೇಶಿಸಿದ್ದು ನಾಟಕಕ್ಕೆ ಪ್ರದರ್ಶನಕ್ಕೆ 100 ರೂ. ಟಿಕೆಟ್ ಇಡಲಾಗಿದೆ ಎಂದರು.

ವೀರ ಸಾರ್ವಕರ್ ಅವರ ಬಗ್ಗೆ ಕೆಲವರು ಅದರಲ್ಲಿಯೂ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಬಹಳ ಹಗುರವಾಗಿ ಮಾತನಾಡಿದ್ದಾರೆ, ಅಲ್ಲದೆ ಅವರ ಪಠ್ಯ ಕಿತ್ತೆಸೆಯುವುದಾಗಿ ಹೇಳಿದ್ದಾರೆ, ಆದರೆ ಅವರು ಪಠ್ಯದಿಂದ ಕಿತ್ತೆಸೆದರೆ ನಾವು ನಮ್ಮ ಮಾಧ್ಯಮವಾದ ನಾಟಕದ ಮೂಲಕ ಜನಮಾನಸದಲ್ಲಿ ತುಂಬುವ ಕೆಲಸ ಮಾಡುತ್ತಿದ್ದೇವೆ, ಇಡೀ ರಾಜ್ಯದಾದ್ಯಂತ ಕಪ್ಪು ನೀರಿನ ವೀರ ನಾಟಕ ಪ್ರದರ್ಶನಕ್ಕೆ ಯೋಚಿಸಿದ್ದು, ಇದುವರೆಗೂ 29 ಪ್ರದರ್ಶನ ನಡೆದಿದ್ದು, 30ನೇ ಪ್ರದರ್ಶನ ತುಮಕೂರಿನಲ್ಲಿ ಆಯೋಜಿಸಲಾಗಿದೆ, ನಾಟಕ ಪ್ರಿಯರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ನಾಟಕ ನೋಡಿ ಪ್ರೋತ್ಸಾಹಿಸುವಂತೆ ಅಡ್ಡಂಡ ಕಾರ್ಯಪ್ಪ ಮನವಿ ಮಾಡಿದರು.

ಇತಿಹಾಸದಲ್ಲಿ ವೀರ ಸಾರ್ವಕರ್ ಅವರ ಬಗ್ಗೆ ಹಲವಾರು ತಪ್ಪು ಮಾಹಿತಿ ಉಲ್ಲೇಖಗೊಂಡಿವೆ, ಅವರು ಬ್ರಿಟಿಷರಿಗೆ ಕ್ಷಮಾಪಣಾ ಪತ್ರ ಬರೆದಿದ್ದರು, ಪಿಂಚಿಣಿ ಪಡೆದಿದ್ದರು ಎಂಬಂತಿದೆ, ಆದರೆ ಮಹಾತ್ಮಗಾಂಧಿ, ನೆಹರು ಅವರು ಕೂಡ ಕ್ಷಮಾಪಣಾ ಪತ್ರ ಬರೆದಿದ್ದರು, ಮಾಸಾಶನ ಪಡೆದಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ, ಆದರೆ ಇದುವರೆಗೂ ಅದು ಬೆಳಕಿಗೆ ಬಂದಿಲ್ಲ, ನಾಟಕದಲ್ಲಿ ಈ ಎಲ್ಲಾ ಅಂಶ ಅಳವಡಿಸಲಾಗಿದೆ, ವೀರ ಸಾರ್ವಕರ್ ಅವರ ಆತ್ಮಕಥನ ಹಾಗೂ ಅವರ ಬಗ್ಗೆ ಅನೇಕ ಲೇಖಕರು ಬರೆದಿರುವ ಪುಸ್ತಕಗಳನ್ನು ಆಧರಿಸಿ ಈ ನಾಟಕ ರಚಿಸಲಾಗಿದೆ, ಇದು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತಕ್ಕಾಗಿ ಮಾಡುತ್ತಿಲ್ಲ, ಜನರಿಗೆ ಸತ್ಯ ತಿಳಿಸುವ ಉದ್ದೇಶದಿಂದ ಈ ನಾಟಕ ಆಯೋಜಿಸಿದ್ದು, ಆಸಕ್ತರು ಆಗಮಿಸಿ ವೀಕ್ಷಿಸುವಂತೆ ಕೋರಿದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್ ಮಾತನಾಡಿ, ರಂಗಭೂಮಿಯಲ್ಲಿ ಸುಮಾರು 40 ವರ್ಷಗಳಿಂದ ಕೆಲಸ ಮಾಡಿದ ಅಡ್ಡಂಡ ಕಾರ್ಯಪ್ಪ ಅವರ ನಿರ್ದೇಶನದಲ್ಲಿ ದಾಮೋದರ್ ವೀರ ಸಾರ್ವಕರ್ ಅವರ ಜೀವನ ಆಧಾರಿತ ಕಪ್ಪು ನೀರಿನ ವೀರ ನಾಟಕ ಆಯೋಜಿಸಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವೀಕ್ಷಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಜನಕಲ್ಯಾಣ ಟ್ರಸ್ಟ್ನ ಗೋವಿಂದರಾವ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪಗೌಡ, ಅನಿತಾ ಕಾರ್ಯಪ್ಪ ಇದ್ದರು.

Get real time updates directly on you device, subscribe now.

Comments are closed.

error: Content is protected !!