ಗೃಹ ಬಂಧನದಲ್ಲಿದ್ದ ವೃದ್ಧೆ ರಕ್ಷಣೆ

41

Get real time updates directly on you device, subscribe now.


ತುಮಕೂರು: ಕಳೆದ ಒಂದು ವರ್ಷದಿಂದ ಗೃಹ ಬಂಧನಕ್ಕೆ ಒಳಗಾಗಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಅನುಭವಿಸುತ್ತಿದ್ದ ವಯೋವೃದ್ಧೆಯನ್ನು ರಕ್ಷಿಸಿ ಆಕೆಯ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿರುವ ಘಟನೆ ನಗರದಲ್ಲಿ ನಡೆದಿದೆ.

ತುಮಕೂರು ನಗರ ಶಿರಾಗೇಟ್ ಬಳಿಯ ಬಡಾವಣೆಯೊಂದರಲ್ಲಿ ಸುಮಾರು 80 ವರ್ಷದ ವೃದ್ಧೆಯನ್ನು ಕಳೆದ ಒಂದು ವರ್ಷದಿಂದ ಮನೆಯಿಂದ ಹೊರಗೆ ಬಾರದಂತೆ ಮನೆಯ ಒಳಗೆ ಕೂಡಿ ಹಾಕಿ ಹಿಂಸೆ ನೀಡಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದ್ದವು, ಸೊಸೆಯಿಂದ ಕಿರುಕುಳ ಉಂಟಾಗುತ್ತಿರುವ ಬಗ್ಗೆ ಸೊಸೆಯ ಮಾತು ಕೇಳಿಕೊಂಡು ಮಗನೇ ಕುಡಿದು ಬಂದು ಗಲಾಟೆ ಮಾಡುತ್ತಿರುವ ಬಗ್ಗೆ ವೃದ್ಧೆ ಕೆಲವರ ಬಳಿ ಅಳಲು ತೋಡಿಕೊಂಡಿದ್ದರು, ಪೊಲೀಸ್ ಇಲಾಖೆಗೆ ಬಡಾವಣೆಯ ಕೆಲವರು ದೂರು ಸಲ್ಲಿಸಿದ್ದರು.

ಈ ಮಾಹಿತಿ ಮಹಿಳಾ ಇಲಾಖೆ, ತುಮಕೂರು ನಗರ ಸಾಂತ್ವನ ಕೇಂದ್ರ, ಸಖಿ ಒನ್ ಸ್ಟಾಪ್ ಸೆಂಟರ್, ಹಿರಿಯ ನಾಗರಿಕರ ಸಹಾಯವಾಣಿಗೆ ಕಳೆದ ಐದು ದಿನಗಳ ಹಿಂದೆ ತಲುಪಿದ ನಂತರ ಕಾರ್ಯಪ್ರವೃತ್ತ ಸಿಬ್ಬಂದಿ ವಿಳಾಸ ಪತ್ತೆ ಮಾಡಿ ವೃದ್ಧೆಗೆ ಮಾನಸಿಕ ಕಿರುಕುಳ ಉಂಟಾಗುತ್ತಿರುವ ಬಗ್ಗೆ ಖಚಿತಪಡಿಸಿಕೊಂಡರು, ಇದಾದ ನಂತರ ಸದರಿ ನಿವಾಸಕ್ಕೆ ಭೇಟಿ ನೀಡಿದ ತಂಡ ವೃದ್ಧೆಯನ್ನು ರಕ್ಷಿಸಿ ಕರೆತರಲು ಪ್ರಯತ್ನಿಸಿತು, ಆದರೆ ಕುಟುಂಬದಲ್ಲಿ ಸೊಸೆಯಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿತ್ತು, ಈ ಸಂದರ್ಭದಲ್ಲಿ ನನ್ನನ್ನು ರಕ್ಷಿಸಿ ಕಾಪಾಡಿ ಎಂದು ವೃದ್ಧೆ ಅಂಗಲಾಚಿದ್ದರಿಂದ ಮನೆಯಿಂದ ಹೊರಗೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು, ಎರಡು ದಿನಗಳ ಕಾಲ ಸಖಿ ಸೆಂಟರ್- ಜಿಲ್ಲಾಸ್ಪತ್ರೆಯಲ್ಲಿ ಆರೈಕೆ ಮಾಡಲಾಗಿತ್ತು.

ಕುಟುಂಬದಲ್ಲಿ ಕಿರುಕುಳ ಇರುವ ಕಾರಣ ವೃದ್ಧೆಯನ್ನು ಅಧಿಕೃತ ಆಶ್ರಯ ತಾಣಕ್ಕೆ ಸೇರಿಸುವ ಪ್ರಯತ್ನ ನಡೆದಿದ್ದವು, ಆದರೆ ಸದರಿ ವೃದ್ಧೆಯು ತನ್ನ ಮನೆಗೆ ಹೋಗಿ ಅಲ್ಲಿಯೇ ಇರುವುದಾಗಿಯೂ, ತನಗೆ ರಕ್ಷಣೆ ಕೊಡಿಸಬೇಕೆಂದು ಕೋರಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಂಪರ್ಕಿಸಿ ಮಾಹಿತಿ ನೀಡಲಾಯಿತು, ಕೂಡಲೇ ಕಾರ್ಯಾಚರಣೆಗಿಳಿದ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ನ್ಯಾಯಾಧೀಶರೂ ಆದ ನೂರುನ್ನಿಸಾ ಅವರು ಪೊಲೀಸರೊಂದಿಗೆ ವೃದ್ಧೆ ವಾಸವಿದ್ದ ಮನೆಗೆ ತೆರಳಿ ಅಲ್ಲಿದ್ದ ಕುಟುಂಬಸ್ಥರಿಗೆ ಎಚ್ಚರಿಕೆ ನೀಡಿ ಸದರಿ ವೃದ್ಧೆಯನ್ನು ಮನೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ವೃದ್ಧೆಗೆ ಯಾವುದೇ ರೀತಿಯ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿದಲ್ಲಿ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವೃದ್ಧೆಯನ್ನು ಮನೆಯಿಂದ ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುವಲ್ಲಿ ಹಾಗೂ ಸಮಾಲೋಚನೆ ನಡೆಸಿ ಮತ್ತೆ ಕುಟುಂಬಕ್ಕೆ ಸೇರಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ, ತುಮಕೂರು ನಗರ ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ಪಾರ್ವತಮ್ಮ ರಾಜಕುಮಾರ, ಯುವರಾಣಿ, ಸಖಿ ಕೇಂದ್ರದ ಸಮಾಲೋಚಕಿ ರಾಧಾಮಣಿ, ಶ್ವೇತ, ಹಿರಿಯ ನಾಗರಿಕ ಸಹಾವಾಣಿ ಕೇಂದ್ರದ ಲಕ್ಷ್ಮೀ ನಾರಾಯಣ ಶೆಟ್ಟಿ, ಮಹಿಳಾ ಇಲಾಖೆಯ ಸಂರಕ್ಷಣಾಧಿಕಾರಿ ಕಲ್ಪನಾ, ಕಾನೂನು ಸೇವಾ ಪ್ರಾಧಿಕಾರದ ಆಡಳಿತಾಧಿಕಾರಿ ನರಸಿಂಹಪ್ಪ, ಸಿದ್ದಾರ್ಥ ಸಮಾಜಕಾರ್ಯ ವಿಭಾಗದ ಅಭಿಲಾಶ್ ಮೊದಲಾದವರ ತಂಡ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Get real time updates directly on you device, subscribe now.

Comments are closed.

error: Content is protected !!