ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಮುಂದಾಗಿ

ತಹಶೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಡೀಸಿ ಸೂಚನೆ

28

Get real time updates directly on you device, subscribe now.


ತುಮಕೂರು: ತಾಲ್ಲೂಕು ಕೇಂದ್ರಗಳ ವ್ಯಾಪ್ತಿಯಲ್ಲಿ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಕಂಡು ಬರಬಹುದಾದ ಗ್ರಾಮ, ವಾರ್ಡ್ಗಳ ಪಟ್ಟಿ ಮಾಡಿ, ಸದರಿ ಗ್ರಾಮ, ವಾರ್ಡ್ಗಳಿಗೆ ಹತ್ತಿರದಲ್ಲಿರುವ ಹೆಚ್ಚು ನೀರಿನ ಇಳುವರಿ ಹಾಗೂ ಗುಣಮಟ್ಟದ ನೀರಿರುವ ಕೊಳವೆ ಬಾವಿಗಳನ್ನು ಗುರುತಿಸಿ ನೀರು ಪೂರೈಕೆ ಸಂಬಂಧ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಹಶೀಲ್ದಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರಿಂದು ಜಿಲ್ಲಾಧಿಕಾರಿ ಕಚೇರಿಯ ವೀಡಿಯೋ ಕಾನ್ಫರೆನ್ಸ್ ಸಭಾಂಗಣದಲ್ಲಿ ಎಲ್ಲಾ ತಾಲ್ಲೂಕುಗಳ ಅಧಿಕಾರಿಗಳೊಂದಿಗೆ ಬರ ನಿರ್ವಹಣೆ ಮತ್ತು ಕುಡಿಯುವ ನೀರು, ಮೇವು ಪೂರೈಕೆಗೆ ಸಂಬಂಧಿಸಿದಂತೆ ಕರೆಯಲಾಗಿದ್ದ ವೀಡಿಯೋ ಕಾನ್ಫರೆನ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲ್ಲೂಕು ಟಾಸ್ಕ್ಪೋರ್ಸ್ ಸಮಿತಿಯ ತೀರ್ಮಾನದಂತೆ ನಿಯಮಾನುಸಾರ ಅವಶ್ಯಕತೆಗೆ ಅನುಗುಣವಾಗಿ ಕೊಳವೆ ಬಾವಿ ಹೊಂದಿರುವ ರೈತರೊಂದಿಗೆ ನೀರಿನ ಬಳಕೆಗೆ ಕರಾರು ಒಪ್ಪಂದ ಮಾಡಿಕೊಳ್ಳುವಂತೆ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಅಥವಾ ಅಂತರ್ಜಲ ಮೂಲವಿಲ್ಲದ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಕುಡಿಯುವ ನೀರನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲು ಕೆಟಿಟಿಪಿ ಕಾಯ್ದೆಯಡಿ ಟೆಂಡರ್ ಪ್ರಕ್ರಿಯೆ ಕೈಗೊಳ್ಳುವಂತೆ ಸೂಚಿಸಿದರು.

ಜಾನುವಾರುಗಳ ಸಂಖ್ಯೆ ಆಧರಿಸಿ ಬೇಡಿಕೆ ಹಾಗೂ ಪೂರೈಕೆಯನ್ವಯ ಮೇವು ಅಭಾವವಿರುವ ಹಾಗೂ ಮುಂದಿನ ದಿನಗಳಲ್ಲಿ ಅಭಾವ ಉಂಟಾಗಬಹುದಾದ ಗ್ರಾಮಗಳನ್ನು ಗುರುತಿಸಿ ತಕ್ಷಣವೇ ಮೇವು ಪೂರೈಕೆಗೆ ಸಂಬಂಧಿಸಿದಂತೆ ಕ್ರಮ ವಹಿಸುವಂತೆ ಪಶು ಸಂಗೋಪನಾ ಉಪ ನಿರ್ದೇಶಕರಿಗೆ ಸೂಚಿಸಿದರು.

ಕುಡಿಯುವ ನೀರು ಪೂರೈಕೆ ಕುರಿತು ತಾಲ್ಲೂಕು ಮಟ್ಟದ ಟಾಸ್ಕ್ಪೋರ್ಸ್ ಸಮಿತಿಯು ಕಾಲ ಕಾಲಕ್ಕೆ ಸಭೆ ನಡೆಸಿ ಕುಡಿಯುವ ನೀರಿನ ಪೂರೈಕೆಯ ಸ್ಥಿತಿಗತಿ ಪರಿಶೀಲನೆ ಮಾಡುವಂತೆ ಸೂಚಿಸಿದರು.
ಗ್ರಾಮ ಲೆಕ್ಕಿಗರು ತಮ್ಮ ವ್ಯಾಪ್ತಿಯ ಗ್ರಾಮಗಳಲ್ಲಿನ ಕೊಳವೆ ಬಾವಿಗಳ ಲಭ್ಯತೆ ಬಗ್ಗೆ ಮಾಹಿತಿ ನೀಡಬೇಕು, ಇದಕ್ಕೂ ಮುಂಚೆ ಸಮಸ್ಯಾತ್ಮಕ ಗ್ರಾಮಗಳಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರು ಪೂರೈಸಬೇಕು, ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ಪಡೆದು ನೀರು ಪೂರೈಸಬೇಕು, ಈ ಯಾವುದು ಪ್ರಯತ್ನ ಕೈಗೂಡದಿದ್ದಲ್ಲಿ ಮಾತ್ರ ಹೊಸ ಕೊಳವೆ ಬಾವಿಗೆ ಶಾಸಕರ ನೇತೃತ್ವದ ಟಾಸ್ಕ್ ಪೋರ್ಸ್ ಸಮಿತಿಗೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದು ಹೊಸ ಕೊಳವೆ ಬಾವಿಗಳ ಕೊರೆಸುವಿಕೆಗೆ ಮುಂದಾಗಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಬರಪರಿಶೀಲನೆ ಮತ್ತು ಕುಡಿಯುವ ನೀರಿನ ಪೂರೈಕೆಗಾಗಿ ನೇಮಿಸಲಾಗಿರುವ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ವಾಸ್ತವಾಂಶ ಪರಿಶೀಲಿಸಬೇಕು ಮತ್ತು ರೈತರೊಂದಿಗೆ ಮಾತನಾಡಬೇಕು, ಖಾಸಗಿ ಬೋರ್ವೆಲ್ ಹೊಂದಿರುವ ರೈತರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಬೇಕು, ಇಲ್ಲದಿದ್ದಲ್ಲಿ ಅಂತಹವರಿಗೆ ಶೋಕಾಸ್ ನೋಟೀಸ್ ನೀಡಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಶಾಸಕರ ನೇತೃತ್ವದ ಟಾಸ್ಕ್ಪೋರ್ಸ್ ಸಭೆಯನ್ನು ವಾರದಲ್ಲಿ 3 ದಿನ ಏರ್ಪಡಿಸಿ ಬರ ನಿರ್ವಹಣೆ ಸಂಬಂಧ ವಿಷಯಗಳನ್ನು ಮಂಡಿಸಿ ಅನುಮೋದನೆ ಪಡೆದು ಕಾರ್ಯಕ್ರಮ ಅನುಷ್ಠಾನ ಸಂಬಂಧ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ ಹಾಗೂ ಜಿಲ್ಲಾ ಮಟ್ಟದ ಬರ ನಿರ್ವಹಣೆ ನೋಡಲ್ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!