ಕುಣಿಗಲ್: ರಾಜ್ಯದ ಏಳುಕೋಟಿ ಕನ್ನಡಿಗರಿಗೆ ಆಗಿರುವ ತೆರಿಗೆ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದೇನೆ, ಗುಂಡು ಹೊಡೆಯಲಿ ಅಥವಾ ಇನ್ನೇನಾದರೂ ಮಾಡಲಿ ಅದಕ್ಕೆಲ್ಲ ಹೆದರುವ ಪ್ರಶ್ನೆಯೆ ಇಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಶನಿವಾರ ಪಟ್ಟಣದ ಜಿಕೆಬಿಎಂಎಸ್ ಶಾಲಾ ಮೈದಾನದಲ್ಲಿ ಅಕ್ಷರ ಫೌಂಡೇಶನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಡಿಕೆಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾದ ಬೃಹತ್ ಉದ್ಯೋಗ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕರ್ನಾಟಕ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ನಾಲ್ಕುವರೆ ಲಕ್ಷ ಕೋಟಿ ತೆರಿಗೆ ಪಾವತಿಸಲಾಗುತ್ತಿದ್ದು, ಈ ಪೈಕಿ ಕೇವಲ ನಲವತ್ತು ಸಾವಿರ ಕೋಟಿ ಕೇಂದ್ರ ನೀಡುತ್ತಿದ್ದು, ಇದು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯದ ಕನ್ನಡಿಗರಿಗೆ ಮಾಡುತ್ತಿರುವ ಅನ್ಯಾಯವಾಗಿದೆ, ರಾಜ್ಯದ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತಿದ್ದಕ್ಕೆ ನನ್ನನ್ನು ದೇಶದ್ರೋಹಿ ನನಗೆ ಗುಂಡಿಕ್ಕಿಕೊಲ್ಲಬೇಕು ಎಂದು ವಿರೋಧ ಪಕ್ಷದವರು ಜರಿದರು, ಇದಕ್ಕೆಲ್ಲಾ ಹೆದರುವ ಪ್ರಶ್ನೆ ಇಲ್ಲ, ರಾಜ್ಯದ ಪಾಲಿನ ಸಮಗ್ರ ತೆರಿಗೆ ಹಣ ಕೇಂದ್ರ ಸರ್ಕಾರ ನೀಡುವವರೆಗೂ ಹೋರಾಟ ನಿರಂತರವಾಗಿರುತ್ತದೆ, ನಮ್ಮ ಪಾಲಿನ ಸಮಗ್ರ ತೆರಿಗೆ ಹಣ ನಮಗೆ ಬಂದಲ್ಲಿ ರಾಜ್ಯದಲ್ಲಿ ಬಾಕಿಇರುವ ನೀರಾವರಿ ಕಾಮಗಾರಿ, ಉದ್ಯೋಗ ಸೃಷ್ಟಿ ನಿಟ್ಟಿನಲ್ಲಿ ಪೂರಕ ಯೋಜನೆ ಸೇರಿದಂತೆ ಇಡೀ ರಾಜ್ಯ ಅಭಿವೃದ್ಧಿ ಪಥದತ್ತ ಮುನ್ನಡೆದು ಗುಜರಾತ್ ಗೂ ಮೀರಿದ ಸಾಧನೆ ಮಾಡಬಹುದಾಗಿದೆ ಎಂದರು.
ಕರ್ನಾಟಕ ರಾಜ್ಯ ಪ್ರಗತಿಪರ ರಾಜ್ಯವಾಗಿದೆ, ಇಲ್ಲಿ ಬಿಹಾರ, ಗುಜರಾತ್, ಉತ್ತರಪ್ರದೇಶ, ರಾಜಸ್ಥಾನದಿಂದ ಕೆಲಸಕ್ಕೆ ಬರುತ್ತಿದ್ದು ಇಲ್ಲಿನವರು ನಿರುದ್ಯೋಗ ಸಮಸ್ಯೆಯಿಂದ ಬಳಲುವಂತಾಗಿದೆ, ಉತ್ತರ ಭಾರತ ರಾಜ್ಯಗಳು ಪ್ರಗತಿ ಸಾಧಿಸುವ ಎಂದು ಹೇಳಿಕೊಳ್ಳುತ್ತಾರೆ, ಆದರೆ ಅಲ್ಲಿಯವರು ಇಲ್ಲಿ ಕೆಲಸ ಅರಸಿ ಬಂದು ಕನ್ನಡಿಗರ ಉದ್ಯೋಗವಕಾಶ ಕಸಿದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ, ಒಬ್ಬ ಉತ್ತರ ಭಾರತದವನು ಇಲ್ಲಿ ಬಂದು ವ್ಯಾಪಾರ, ಉದ್ಯೋಗ ಮಾಡಿದಲ್ಲಿ ಕೆಲವೆ ತಿಂಗಳಲ್ಲಿ ಮತ್ತೆ ಊರಿಗೆ ಹೋಗಿ ಮತ್ತಷ್ಟು ಮಂದಿಯನ್ನು ಕರೆತಂದು ಇಲ್ಲಿ ಅವರಿಂದ ವಹಿವಾಟು ನಡೆಸುತ್ತಾರೆ, ಆದರೆ ಕನ್ನಡಿಗರಲ್ಲಿ ಇಂತಹ ಮನೋಭಾವದ ಕೊರತೆಯಿಂದಾಗಿ ಕನ್ನಡ ನಾಡಿನಲ್ಲಿ ಕನ್ನಡಿಗರು ಉದ್ಯೋಗ, ವ್ಯವಹಾರಿಕವಾಗಿ ವಂಚನೆಯಾಗಿ ಹಿಂದೆ ಉಳಿಯುವ ಆತಂಕ ಕಾಡುತ್ತಿದೆ, ಕನ್ನಡ ನೆಲದ ಯುವ ವಿದ್ಯಾವಂತ ನಿರುದ್ಯೋಗಿಗಳು ಕೇವಲ ವಿರ್ದ್ಯಾಹತೆ ಗಳಿಸಿದರೆ ಸಾಲದು, ಯಾವುದೇ ಉದ್ಯೋಗ ನೀಡಿದರೂ ಅದನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕೌಶಲ್ಯವನ್ನು ಪ್ರಮುಖವಾಗಿ ಹೊಂದಬೇಕಿದೆ ಎಂದರು.
ರಾಜ್ಯದ ಯುವಜನತೆ ವಿದ್ಯಾರ್ಹತೆ ಗಳಿಸಿ, ಮೊಬೈಲ್ ನಲ್ಲಿ ರೀಲ್ಸ್, ವಾಟ್ಸಪ್ ಚಾಟ್ ಮಾಡಿ ಕಾಲ ಕಳೆಯುವ ಬದಲು ಅಂಗೈಯಲ್ಲಿ ಇರುವ ತಂತ್ರಜ್ಞಾನವನ್ನು ತಮ್ಮ ವಿದ್ಯಾರ್ಹತೆಗೆ ತಕ್ಕಂತ ಉದ್ಯೋಗ ಪಡೆಯಲು ಬೇಕಾದ ಕೌಶಲ್ಯ ವೃದ್ಧಿಸಲು ಬಳಸುವ ಮೂಲಕ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಳ್ಳಬೇಕು, ಇತ್ತೀಚಿನ ದಿನಗಳಲ್ಲಿ ಯುವ ಜನತೆ ಜೊತೆಯಲ್ಲಿ ವಯಸ್ಕರೂ ಸಹ ಹೆಚ್ಚಾಗಿ ಮೊಬೈಲ್ ಚಾಳಿಗೆ ಬಲಿಯಾಗುತ್ತಿರುವುದು ಆತಂಕಕಾರಿಯಾಗಿದ್ದು ಇದು ಹೀಗೆ ಮುಂದುವರೆದಲ್ಲಿ ಮೊಬೈಲ್ ಗೀಳಿನಿಂದ ಮಾನಸಿಕ ಅಸ್ವಸ್ಥತೆ ಹೆಚ್ಚಾಗಿ ಅನಾರೋಗ್ಯಕ್ಕೆ ಈಡಾಗುವ ಸಾಧ್ಯತೆ ಹೆಚ್ಚಿದೆ, ಆದ್ದರಿಂದ ಮೊಬೈಲ್ ನ್ನು ಅಗತ್ಯಕ್ಕೆ ತಕ್ಕಂತೆ ಬಳಸಬೇಕು, ವಿದ್ಯಾವಂತ ನಿರುದ್ಯೋಗಿ ಯುವಕರಿಗೆ ರಾಜ್ಯ ಸರ್ಕಾರ ಯುವನಿಧಿ ಜಾರಿಗೊಳಿಸಿದ್ದು ಈ ಗ್ಯಾರಂಟಿಯು ತಮ್ಮ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು ತಮ್ಮ ಒತ್ತಾಯದಿಂದ ಸರ್ಕಾರ ಜಾರಿಗೊಳಿಸಿದೆ, ಈಗಾಗಲೆ 1.75 ಲಕ್ಷ ಅರ್ಹರು ಸದುಪಯೋಗ ಪಡೆಯುತ್ತಿದ್ದು 223- 24ರಲ್ಲಿ ಪದವಿ ಹೊಂದಿದವರು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ ಎರಡು ವರ್ಷದ ಕಾಲ ಮಾಸಿಕ ಹಣ ಪಡೆಯಬಹುದು, ರಾಜ್ಯಸರ್ಕಾರಕ್ಕೆ ಯಾವುದೇ ಅಸ್ಥಿರತೆ ಇಲ್ಲ ಚುನಾವಣೆ ನಂತರವೂ ಸರ್ಕಾರಕ್ಕೆ ಯಾವುದೇ ಆತಂಕ ಇಲ್ಲ ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದರು.
ಶಾಸಕ ಡಾ.ರಂಗನಾಥ್ ಮಾತನಾಡಿ, ಉದ್ಯೋಗ ಮೇಳಗಳು ಎಂದರೆ ವಿದ್ಯಾವಂತ ನಿರುದ್ಯೋಗಿಗಳ ಪಾಲಿಗೆ ಭರವಸೆ ಮೂಡಿಸುವ ತಾಣಗಳು, ವಿದ್ಯಾರ್ಹತೆಗೆ ತಕ್ಕಂತೆ ಕೆಲಸದ ನಿರೀಕ್ಷೆ ಬಹಳ ಕಷ್ಟಕರ ಆದರೂ ಸಿಗುವ ಕೆಲಸವನ್ನು ಪರಿಣಾಮಕಾರಿ ಯಾಗಿ ಬಳಸಿಕೊಂಡು ಮುಂದೆ ಬರುವ ಕೌಶಲ್ಯ ರೂಢಿಸಿಕೊಳ್ಳಬೇಕು ಎಂದರು.
ಮೇಳದಲ್ಲಿ ವಿವಿಧ ಜಿಲ್ಲೆಯ 82ಕ್ಕೂ ಹೆಚ್ಚು ಕಂಪನಿಗಳು ಪಾಲ್ಗೊಂಡಿದ್ದು, ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನಿಂದಲೂ ಸಾವಿರಾರು ನಿರುದ್ಯೋಗಿಗಳು ಪಾಲ್ಗೊಂಡರು, ಒಟ್ಟಾರೆ 1865 ಮಂದಿ ನೋಂದಾಯಿಸಿಕೊಂಡಿದ್ದು ಇದರಲ್ಲಿ 605 ಮಂದಿಗೆ ಸ್ಥಳದಲ್ಲೆ ನೇಮಕಾತಿ ಪತ್ರ ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ, ಪುರಸಭೆ ಸದಸ್ಯರಾದ ಅರುಣಕುಮಾರ್, ನಾಗೇಂದ್ರ, ರಂಗಸ್ವಾಮಿ, ಮಂಜುಳಾ, ಅಸ್ಮ ಜಯಲಕ್ಷ್ಮೀ, ಪ್ರಚಾರ ಸಮಿತಿ ಅಧ್ಯಕ್ಷ ಶಂಕರ್, ಪ್ರಮುಖರಾದ ಏಜಾಸ್, ನಂಜೇಗೌಡ, ವಿಶ್ವನಾಥ, ಪಾಪಣ್ಣ, ರಾಮಣ್ಣ ಇತರರು ಇದ್ದರು.
Comments are closed.