ತುಮಕೂರು: ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಅಂಗವಾಗಿ ಸಾರಿಗೆ ಇಲಾಖೆ, ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಶನಿವಾರ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಜಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರದ ಆರ್ ಟಿ ಓ ಕಚೇರಿ ಬಳಿ ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ಹಸಿರು ನಿಶಾನೆ ತೋರಿಸಿ ಜಾಗೃತಿ ಜಾಥಾಗೆ ಚಾಲನೆ ನೀಡಿದರು, ಈ ವೇಳೆ ನಗರದ ವಿವಿಧ ಡ್ರೈವಿಂಗ್ ಸ್ಕೂಲ್ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ತಮ್ಮ ವಾಹನಗಳೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿ ಗಮನ ಸೆಳೆದರು, ಡ್ರೈವಿಂಗ್ ಸ್ಕೂಲ್ ಗಳ 80ಕ್ಕೂ ಹೆಚ್ಚು ವಾಹನಗಳನ್ನು ಜಾಥಾಕ್ಕೆ ತರಲಾಗಿತ್ತು, ಆರ್ ಟಿ ಓ ಕಚೇರಿಯಿಂದ ಸ್ವಾಮೀಜಿ ವೃತ್ತ, ಬಿಜಿಎಸ್ ವೃತ್ತ, ಬಸ್ ನಿಲ್ದಾಣ, ಸ್ವಾತಂತ್ರ ಚೌಕ, ಕೋಡಿ ಸರ್ಕಲ್, ಜಿಲ್ಲಾಧಿಕಾರಿ ಕಚೇರಿ ವೃತ್ತ, ಕೋತಿ ತೋಪು ಮೂಲಕ ಆರ್ ಟಿ ಓ ಕಚೇರಿವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.
ನಂತರ ಆರ್ ಟಿ ಓ ಕಚೇರಿ ಆವರಣದಲ್ಲಿ ನಡೆದ ಸಮಾರಂಭ ಉದ್ಘಾಟಿಸಿದ ಜಂಟಿ ಸಾರಿಗೆ ಆಯುಕ್ತೆ ಎನ್.ಜಿ.ಗಾಯತ್ರಿ ಮಾತನಾಡಿ, ಸಂಚಾರಿ ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡುವುದರಿಂದ ಅಪಘಾತ ತಡೆಯಬಹುದು, ರಸ್ತೆ ಸುರಕ್ಷತೆ ಬಗ್ಗೆ ಇಲಾಖೆಯಿಂದ ಪ್ರತಿ ವರ್ಷ ಅರಿವು ಮೂಡಿಸಲಾಗುತ್ತದೆ, ಆದರೂ ನಿಯಮ ಉಲ್ಲಂಘನೆ ಪ್ರಕರಣ, ಅಪಘಾತ ಹೆಚ್ಚುತ್ತಲೇ ಇವೆ, ಸಂಚಾರಿ ನಿಯಮ ಪ್ರತಿಯೊಬ್ಬರಿಗೂ ಅರಿವಾಗಬೇಕು, ಪೋಷಕರೂ ತಮ್ಮ ಮಕ್ಕಳಿಗೆ ಈ ಬಗ್ಗೆ ತಿಳುವಳಿಕೆ ನೀಡಬೇಕು, ನಿಯಮ ಉಲ್ಲಂಸಿದರೆ ದಂಡ, ಇತರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರಸ್ತೆಗಳ ಗುಣಮಟ್ಟ ಮೇಲ್ದರ್ಜೆಗೇರಿದೆ. ಉತ್ತಮ ರಸ್ತೆಗಳನ್ನು ಕಾಣಬಹುದು ಆದರೆ ಆಪಘಾತಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಅಜಾಗ್ರತೆ, ನಿಯಮ ಉಲ್ಲಂಘನೆ ಅವಘಡಗಳಿಗೆ ಕಾರಣ. ಮುಂದಿನ ದಿನಗಳಲ್ಲಿ ಪ್ರತಿ ವಾಹನ ಚಾಲಕರು ಸುರಕ್ಷಿತ ಚಾಲನೆಗೆ ಒತ್ತು ನೀಡಿ ಅಪಘಾತ ತಡೆಯಬೇಕು ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಎಸ್.ರಾಜು ಮಾತನಾಡಿ, ವಾಹನ ಚಾಲಕರ ನಿರ್ಲಕ್ಷತೆ, ಅವಸರವೇ ಅಪಘಾತಗಳಿಗೆ ಪ್ರಮುಖ ಕಾರಣ, ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡಬಾರದು, ಹೆಲ್ಮೆಟ್ ಧರಿಸಬೇಕು, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಬಾರದು, ಮುಂದೆ ಹೋಗುತ್ತಿರುವ ವಾಹನದ ನಡುವೆ ಅಂತರ ಕಾಪಾಡಿಕೊಳ್ಳಬೇಕು, ಸೂಚನಾ ಫಲಕಗಳ ಸೂಚನೆ ಅನುಸರಿಸಿ ವಾಹನ ಚಲಾಯಿಸಬೇಕು ಎಂದು ಹೇಳಿದರು.
ಶಾಲಾ ಬಸ್ ಗಳಲ್ಲಿ ಶಾಲೆಗೆ ಹೋಗುವ ಮಕ್ಕಳ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು, ಬಸ್ ಗಳಲ್ಲಿ ಸಹಾಯಕರು ಕಡ್ಡಾಯವಾಗಿ ಇರುವಂತೆ ನೋಡಿಕೊಳ್ಳಬೇಕು, ಮಕ್ಕಳು ಬಸ್ ಹತ್ತುವಾಗ, ಇಳಿಯುವಾಗ, ಬಸ್ಸಿನಲ್ಲಿರುವಾಗ ಅವರ ಸುರಕ್ಷತೆ ಬಗ್ಗೆ ಗಮನಹರಿಸಬೇಕು, ಅಪಘಾತಗಳು ನಡೆದ ಸಂದರ್ಭದಲ್ಲಿ ಗಾಯಾಳುಗಳನ್ನು ತುರ್ತಾಗಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರೆ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದರು.
ಸಂಚಾರಿ ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಗುರುನಾಥ್ ಮಾತನಾಡಿ, ಅಪಘಾತದಿಂದ ಉಂಟಾಗುವ ಒಂದು ಸಾವು ಒಂದು ಕುಟುಂಬವನ್ನು ಜೀವನ ಪರ್ಯಾಂತ ನರಳಿಸುತ್ತದೆ, ಅಪಘಾತ ಆಕಸ್ಮಿಕವಾದರೂ ಅದನ್ನು ತಡೆಯಲು ನಮ್ಮಿಂದ ಸಾಧ್ಯವಾಗುತ್ತದೆ, ಎಚ್ಚರಿಕೆಯಿಂದ, ನಿಯಮಾನುಸಾರ ವಾಹನ ಚಲಾಯಿಸಬೇಕು ಎಂದರು.
ಅಪ್ರಾಪ್ತರಿಗೆ ವಾಹನ ನೀಡುವುದು ಅಪರಾಧ, ಅಂತಹ ಪೋಷಕರಿಗೆ ದಂಡ ವಿಧಿಸಲಾಗುತ್ತದೆ, ಚಾಲನಾ ಪರವಾನಗಿ ಪಡೆದು, ರಸ್ತೆ ನಿಯಮಗಳನ್ನು ತಿಳಿಯದೆ ಮಕ್ಕಳಿಗೆ ಪೋಷಕರು ವಾಹನ ಕೊಡಬಾರದು ಎಂದು ಹೇಳಿದರು.
ವಾಹನ ತರಬೇತಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್, ಜಿಲ್ಲಾಧ್ಯಕ್ಷ ಟಿ.ಆರ್.ಸದಾಶಿವಯ್ಯ ಮಾತನಾಡಿ, ಡ್ರೈವಿಂಗ್ ಸ್ಕೂಲ್ ಗಳಲ್ಲಿ ಅಭ್ಯರ್ಥಿಗಳಿಗೆ ಸಮರ್ಪಕವಾಗಿ ಚಾಲನಾ ತರಬೇತಿ ನೀಡಿ ಅವರಿಗೆ ಸಂಚಾರಿ ನಿಯಮಗಳ ಬಗ್ಗೆ ಪೂರ್ಣ ತಿಳುವಳಿಕೆ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ಸಾರಿಗೆ ನಿರೀಕ್ಷಕ ಸದ್ರುಲ್ಲಾ ಷರೀಫ್, ಸಾರಿಗೆ ನಿರೀಕ್ಷಕಿ ವಿದ್ಯಾ ಹಾಗೂ ವಿವಿಧ ಡ್ರೈವಿಂಗ್ ಸ್ಕೂಲ್ ಗಳ ಪ್ರಾಂಶುಪಾಲರು, ಸಿಬ್ಬಂದಿ ಭಾಗವಹಿಸಿದ್ದರು.
Comments are closed.