ಜನರಿಗೆ ಸಂವಿಧಾನದ ಆಶಯ ತಿಳಿಸಬೇಕಿದೆ: ಸಿದ್ದೇಶ್

ಸಂವಿಧಾನ ಜಾಗೃತಿ ಜಾಥಾ- ಪತ್ರಕರ್ತರಿಗಾಗಿ ಕ್ರೀಡಾಕೂಟ

42

Get real time updates directly on you device, subscribe now.


ತುಮಕೂರು: ಭಾರತ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಮತ್ತು ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತಾಶ್ರಯದಲ್ಲಿ ಪತ್ರಕರ್ತರು ಹಾಗೂ ಸರ್ಕಾರಿ ನೌಕರರಿಗಾಗಿ ಸೋಮವಾರ ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಸಂವಿಧಾನ ಕಪ್ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿತ್ತು.

ಕ್ರೀಡಾಕೂಟ ಉದ್ಘಾಟಿಸಿದ ತಹಶೀಲ್ದಾರ್ ಸಿದ್ದೇಶ್ ಮಾತನಾಡಿ, ಜನಸಾಮಾನ್ಯರಲ್ಲಿ ಸಂವಿಧಾನದ ಆಶಯಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜನವರಿ 26 ರಿಂದ ಜಿಲ್ಲಾದ್ಯಂತ ಹಮ್ಮಿಕೊಂಡಿರುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಡಿ ಶಾಲಾ ವಿದ್ಯಾರ್ಥಿಗಳು, ಸರ್ಕಾರಿ ನೌಕರರು ಹಾಗೂ ಮಾಧ್ಯಮ ಪ್ರತಿನಿಧಿಗಳಿಗಾಗಿ ಹಮ್ಮಿಕೊಂಡಿರುವ ಹಲವಾರು ವಿಶೇಷ ಕಾರ್ಯಕ್ರಮಗಳ ಪೈಕಿ ಈ ಕ್ರೀಡಾಕೂಟವೂ ಒಳಗೊಂಡಿದೆ, ಎಲ್ಲಾ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ, ಈಗಾಗಲೇ ತಾಲೂಕು ಮಟ್ಟದಲ್ಲಿ ಶಾಲಾ ವಿದ್ಯಾರ್ಥಿಗಳಿಗಾಗಿ ಆಶು ಭಾಷಣ, ಚರ್ಚಾ, ಪತ್ರ ಚಳುವಳಿ ಸೇರಿದಂತೆ ವಿವಿಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಗಿದೆ, ಜಿಲ್ಲಾ ಮಟ್ಟದ ವಿಜೇತರನ್ನು ಫೆಬ್ರವರಿ 24 ರಂದು ಜಿಲ್ಲಾ ಉಸ್ತುವಾರಿ ಸಚಿವರು ಸನ್ಮಾನಿಸಿ ಗೌರವಸಲಿದ್ದಾರೆ ಎಂದು ತಿಳಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಕೃಷ್ಣಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲೆಯಲ್ಲಿ ಫೆಬ್ರವರಿ 23 ವರೆಗೆ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಲಿದ್ದು, ಪಂಚಾಯತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಂಚರಿಸುತ್ತಿರುವ ಜಾಥಾ ಕಾರ್ಯಕ್ರಮಕ್ಕೆ ಅಭೂತ ಪೂರ್ವ ಯಶಸ್ಸು ದೊರೆತಿದೆ, ವಿನೂತನ ಹಾಗೂ ವಿಭಿನ್ನ ರೀತಿಯಲ್ಲಿ ಜಾಥಾ ಕಾರ್ಯಕ್ರಮ ಆಯೋಜಿಸುವಲ್ಲಿ ಜಿಲ್ಲೆಯು 1,30,000 ಅಂಕ ಪಡೆದು ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ, ಈ ಯಶಸ್ಸಿಗೆ ಕಾರಣರಾದ ಎಲ್ಲಾ ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿದ್ಯಾರ್ಥಿಗಳು, ಅಧಿಕಾರಿಗಳು ಕಲಾವಿದರು, ಜನಪ್ರತಿನಿಧಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಶಾಲೆಗಳಲ್ಲಿ ಅರಿವು ಕಾರ್ಯಕ್ರಮ ಆಯೋಜಿಸಿ ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವ, ಸಮಾನತೆ, ಸಾಮಾಜಿಕ ನ್ಯಾಯದ ಮೌಲ್ಯಗಳ ಬಗ್ಗೆ ಅರಿವು ನೀಡಲಾಗಿದೆ, ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ 1,25,000ಕ್ಕಿಂತ ಹೆಚ್ಚು ಮಕ್ಕಳು ಭಾಗವಹಿಸಿದ್ದಾರೆ ಎಂದು ತಿಳಿಸಿದರಲ್ಲದೆ ಪ್ರತಿ ಪಂಚಾಯತಿಯಲ್ಲಿ ಸಂಚರಿಸುವ ಜಾಗೃತಿ ಜಾಥಾ ಕಾರ್ಯಕ್ರಮದಡಿ ಅಂಬೇಡ್ಕರ್ ಭಾವಚಿತ್ರ ಹೊತ್ತ ಸ್ತಬ್ಧ ಚಿತ್ರ ವಾಹನಕ್ಕೆ ಪೂರ್ಣಕುಂಭದ ಭವ್ಯ ಸ್ವಾಗತ ದೊರೆಯುತ್ತಿದೆ, ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ರೀತಿಯಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಆರ್.ರೋಹಿತ್ ಗಂಗಾಧರ್ ಮಾತನಾಡಿ, ಪತ್ರಕರ್ತರಿಗೆ ಏರ್ಪಡಿಸಿರುವ ಜಿಲ್ಲಾ ಮಟ್ಟದ ಸಂವಿಧಾನ ಕಪ್ ಕ್ರೀಡಾಕೂಟ ಸ್ತುತ್ಯಾರ್ಹವಾಗಿದೆ ಎಂದರಲ್ಲದೆ ಕ್ರೀಡಾಂಗಣ ಬಳಸಿಕೊಳ್ಳಲು ಪೇ ಅಂಡ್ ಪ್ಲೇ ಯೋಜನೆಯಡಿ ನಿಗದಿತ ಶುಲ್ಕ ವಿಧಿಸಲು ಸರ್ಕಾರ ತೀರ್ಮಾನಿಸಿದ್ದು, ಕ್ರೀಡಾಂಗಣ ಬಳಸಿಕೊಳ್ಳಲು ಇಚ್ಛಿಸುವವರು ನಿಗದಿಪಡಿಸಿದ ಶುಲ್ಕ ಪಾವತಿಸಿ ಉಪಯೋಗಕ್ಕೆ ಪಡೆಯಬಹುದಾಗಿದೆ, ಸಂಗ್ರಹಿಸಲಾದ ಶುಲ್ಕವನ್ನು ಕ್ರೀಡಾಂಗಣ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್ ಮಾತನಾಡಿ ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ಪತ್ರಕರ್ತರಿಗಾಗಿ ಕ್ರೀಡಾಕೂಟ ಏರ್ಪಡಿಸಿರುವುದು ಸ್ವಾಗತಾರ್ಹ, ಪತ್ರಕರ್ತ ಕ್ರೀಡಾಪಟುಗಳು ಕ್ರೀಡೆಗಳಲ್ಲಿ ಭಾಗವಹಿಸಲು ಉತ್ಸುಕರಿದ್ದು, ಪ್ರತೀ ವರ್ಷ ಇಂತಹ ಕ್ರೀಡಾಕೂಟ ಏರ್ಪಡಿಸಬೇಕೆಂದು ಮನವಿ ಮಾಡಿದರು, ಕ್ರಿಕೆಟ್ ಪಂದ್ಯದಲ್ಲಿ ರಾಜ್ಯ ಮಟ್ಟದ ಪ್ರಶಸ್ತಿ ಗಳಿಸಿರುವ ಉತ್ತಮ ಪತ್ರಕರ್ತ ತಂಡ ಜಿಲ್ಲೆಯಲ್ಲಿದೆ ಎಂದು ತಿಳಿಸಿದರಲ್ಲದೆ ಕ್ರೀಡಾಕೂಟದಲ್ಲಿ ಭಾಗವಹಿಸುವ ಪತ್ರಿಕಾ ಪ್ರತಿನಿಧಿಗಳಿಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆಯ ಆರ್.ರೂಪಕಲಾ, ಕ್ರೀಡಾಕೂಟದ ಕೋಚ್ ಇಸ್ಮಾಯಿಲ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ರಘುರಾಮ್, ತಿಪಟೂರು ತಾಲೂಕು ಶಿಕ್ಷಣ ಇಲಾಖೆ ಶಶಿಕಲಾ ಇತರರು ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!