ಮತದಾರರ ಪಟ್ಟಿ- ಆಕ್ಷೇಪಣೆ ಅರ್ಜಿ ವಿಲೇವಾರಿ ಮಾಡಿ

25

Get real time updates directly on you device, subscribe now.


ತುಮಕೂರು: ಲೋಕಸಭೆ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಸ್ವೀಕೃತ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳನ್ನು ನಿಗದಿತ ಕಾಲಾವಧಿಯೊಳಗೆ ವಿಲೇವಾರಿ ಮಾಡಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದ ಜಿಲ್ಲಾಧಿಕಾರಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ಸಭೆಯ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಮತದಾರರ ಪಟ್ಟಿಗೆ ಸಂಬಂಧಿಸಿದ ಸ್ವೀಕೃತ ಹಕ್ಕು ಮತ್ತು ಆಕ್ಷೇಪಣೆ ಅರ್ಜಿಗಳ ವಿಲೇವಾರಿ ಪೂರ್ಣಗೊಳ್ಳುವ ವರೆಗೂ ಸಂಬಂಧಿಸಿದ ಅಧಿಕಾರಿಗಳು ಸಾರ್ವತ್ರಿಕ ರಜೆ ಬಳಸಿಕೊಳ್ಳುವಂತಿಲ್ಲ, ಚುನಾವಣಾ ಕರ್ತವ್ಯವನ್ನು ಆದ್ಯತೆ ಮೇಲೆ ನಿರ್ವಹಿಸಬೇಕು, ಮತದಾರರ ಪಟ್ಟಿಗೆ ಯಾವುದೇ ಹೆಸರು ಸೇರ್ಪಡೆ, ಪಟ್ಟಿಯಿಂದ ತೆಗೆದು ಹಾಕುವ ಪ್ರಕ್ರಿಯೆಯಲ್ಲಿ ಲೋಪದೋಷವಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಚುನಾವಣೆ ಕರ್ತವ್ಯದಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳು ಯಾವುದೇ ನೆಪ ಹೇಳಿದರೆ ನಿರ್ದಾಕ್ಷಿಣ್ಯ ಕ್ರಮ ತೆಗೆದು ಕೊಳ್ಳಲಾಗುವುದು, ಕಚೇರಿ ದಿನಚರಿಯೊಂದಿಗೆ ಸೂಚಿಸಿದ ಚುನಾವಣಾ ಕೆಲಸಗಳನ್ನೂ ಸಮರ್ಪಕವಾಗಿ ನಿರ್ವಹಿಸಬೇಕು, ಚುನಾವಣೆ ನಿಮಿತ್ತ ವರ್ಗಾವಣೆಯಾದ ಅಧೀನ ಅಧಿಕಾರಿ, ನೌಕರರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಎಲ್ಲಾ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಲೋಕ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆಗಳಿರುವ ಕಟ್ಟಡಗಳು ಸುಸ್ಥಿತಿಯಲ್ಲಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು, ವಿಕಲಚೇತರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ರ್ಯಾಂಪ್ ವ್ಯವಸ್ಥೆ, ಮತಗಟ್ಟೆಯೊಳಗೆ ಸೂಕ್ತ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಪರಿಶೀಲಿಸಿ ವರದಿ ನೀಡಬೇಕೆಂದು ಸೂಚಿಸಿದರು.

ಚುನಾವಣೆಗೆ ಸಂಬಂಧಿಸಿದಂತೆ ಸಾರ್ವಜನಿಕ ದೂರು, ವಿಚಾರಣೆ, ಮತ್ತಿತರ ಮಾಹಿತಿಗಾಗಿ ಸಂಪರ್ಕಿಸಲು ಕಾರ್ಯ ನಿರ್ವಹಿಸುತ್ತಿರುವ ಸಹಾಯವಾಣಿ ಸಂಖ್ಯೆ 1950ಗೆ ಸ್ವೀಕೃತ ದೂರು, ಸಮಸ್ಯೆ ಬಗೆಹರಿಸಿದ ಬಗ್ಗೆ ಮಾಹಿತಿ ಪಡೆದರು.
ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು, ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Get real time updates directly on you device, subscribe now.

Comments are closed.

error: Content is protected !!