ಗುಬ್ಬಿ: ಕಲಾವಿದನೊಬ್ಬನ ಬದುಕು ಅವನು ಬಣ್ಣ ಹಚ್ಚುವವರೆಗೆ ಮಾತ್ರ, ನಂತರ ಅವನಿಗೆ ಯಾವ ರೀತಿಯ ಸೌಕರ್ಯ ಸೌಲಭ್ಯ ಸಿಗದು ಎನ್ನುವ ಮಾತಿತ್ತು, ಆದರೆ ವೃತ್ತಿ ರಂಗಭೂಮಿಯ ಕಂಪನಿಯನ್ನು 100 ವರ್ಷ ಕಾಲ ನಡೆಸಿ ಈ ನಾಡಿಗೆ ಅಸಂಖ್ಯಾತ ಕಲಾವಿದರನ್ನು ಪರಿಚಯಿಸಿದ ಕೀರ್ತಿ ಡಾ.ಗುಬ್ಬಿ ವೀರಣ್ಣನವರಿಗೆ ಸಲ್ಲುತ್ತದೆ ಎಂದು ಜೀವಿತಾ ನಾಟಕೋತ್ಸವದ ಸಂಚಾಲಕ ಹಾಗೂ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಹಿರಿಯ ರಂಗಕರ್ಮಿ ನಟ ನಿರ್ದೇಶಕ ಹೆಚ್.ಎಂ.ರಂಗಯ್ಯ ತಿಳಿಸಿದರು.
ಪಟ್ಟಣದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ, ಗುಬ್ಬಿ ವೀರಣ್ಣ ನವರ ರಂಗ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸರ್ಕಾರ ಪ್ರಾಂರಂಭಿಸಿದ ಡಾ.ಗುಬ್ಬಿ ವೀರಣ್ಣ ಟ್ರಸ್ಟ್ಗೆ ದಶಮಾನದ ಸಂಭ್ರಮ, ಈ ಸಂದರ್ಭದಲ್ಲಿ ನಡೆಯುತ್ತಿರುವ ನಾಟಕೋತ್ಸವಕ್ಕೆ ಕಲಾ ಪ್ರೋತ್ಸಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕೋರಿದರು
ಕಲಾಶ್ರೀ ಡಾ.ಲಕ್ಷ್ಮಣ್ ದಾಸ್ ಮಾತನಾಡಿ, ಫೆ.22 ರ ಸಂಜೆ 6.30 ಕ್ಕೆ ನಾಟಕೋತ್ಸವವನ್ನು ಖ್ಯಾತ ನಾಟಕಕಾರ ಡಾ.ರಾಜಪ್ಪ ದಳವಾಯಿ ಉದ್ಘಾಟಿಸಲಿದ್ದು, ಅಂದು ಈ ವರ್ಷ ಗುಬ್ಬಿ ವೀರಣ್ಣ ಪ್ರಶಸ್ತಿಗೆ ಭಾಜನರಾಗಿರುವ ಗುಬ್ಬಿ ತಾಲ್ಲೂಕು ಮತ್ತಿಘಟ್ಟ ಗ್ರಾಮದ ಚನ್ನಬಸವಯ್ಯ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಿದ್ದು, ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬ್ಯಾಂಕ್ ಮ್ಯಾನೇಜರ್ ಎಸ್.ವಿ.ಚಕ್ರಪಾಣಿ, ವಕೀಲರ ಸಂಘದ ಅಧ್ಯಕ್ಷ ಬಿ.ಎಸ್.ಚಿದಾನಂದ ಮೂರ್ತಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಉದ್ಘಾಟನೆ ನಂತರ ತುಮಕೂರಿನ ರಂಗ ರಂಗ ತಂಡದಿಂದ ರಂಗ ಗೀತೆಗಳು ಮತ್ತೆ ವೈಭವದತ್ತ ರಂಗ ಗೀತೆಗಳು ಹೆಸರಿನಲ್ಲಿ ಅಂದಿನ ರಂಗ ಗೀತೆಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸಲಿದ್ದಾರೆ, ಫೆ.23 ರ ಸಂಜೆ 6.30 ಕ್ಕೆ ಸಿರಿಗೇರಿ ಧಾತ್ರಿ ರಂಗ ಸಂಸ್ಥೆಯಿಂದ ಅಕ್ಕ ನಾಗಲಾಂಬಿಕೆ ನಾಟಕ ಬಸವಣ್ಣನವರ ಹೋರಾಟದ ಹಾದಿ ತಿಳಿಸಲಿದೆ, 24 ರ ಸಂಜೆ ಬೆಂಗಳೂರಿನ ಜಂಗಮ ಕಲೆಕ್ಟಿವ್ಸ್ ತಂಡ ಪಂಚಮ ಪದ ಎಂಬ ದಲಿತ ಹೋರಾಟದ ಹಾಡುಗಳ ಸಂಕಲನ ವ್ಯಕ್ತವಾಗಲಿದೆ ಎಂದರು.
ಫೆ.25 ರ ಸಂಜೆ ಬೆಂಗಳೂರಿನ ನಗ್ನ ಥಿಯೇಟರ್ ತಂಡ ಡೈರೆಕ್ಟ್ ಆಕ್ಷ್ಯನ್ ಎಂಬ ರೈತ ನಾಯಕ ಪ್ರೊ.ನಂಜುಂಡ ಸ್ವಾಮಿ ಅವರ ಜೀವನ ಚರಿತ್ರೆ ವೇದಿಕೆಯಲ್ಲಿ ಬರಲಿದೆ, ಫೆ.26 ರ ಸಂಜೆ ತುಮಕೂರು ನಾಗಾರ್ಜುನ ಕಲಾಸಂಘದಿಂದ ಪ್ರಚಂಡ ರಾವಣ ಎಂಬ ಪೌರಾಣಿಕ ನಾಟಕ ಪ್ರದರ್ಶಿಸಲಾಗುವುದು, ಫೆ.27 ರ ಸಂಜೆ ತುಮಕೂರು ಶ್ರೀಸೀಬಿ ನರಸಿಂಹ ಸ್ವಾಮಿ ಕಲಾ ಸಂಘದಿಂದ ಶ್ರೀಕೃಷ್ಣ ಸಂಧಾನ ನಾಟಕ ಪ್ರದರ್ಶನ ನಡೆದು ನಾಟಕೋತ್ಸವ ಅಂತಿಮಗೊಳ್ಳಲಿದೆ ಎಂದರು.
ಟ್ರಸ್ಟಿ ಡಾ.ರಾಜೇಶ್ ಗುಬ್ಬಿ ಮಾತನಾಡಿ, ಕೋವಿಡ್ ನಂತರದಲ್ಲಿ ಟ್ರಸ್ಟ್ ನಾಟಕೋತ್ಸವ ಆಯೋಜಿಸುತ್ತಿದ್ದು ಹತ್ತು ವರ್ಷಗಳ ಕಾಲ ಒಂದು ಸಾಂಸ್ಕೃತಿಕ ನೆಲೆಗಟ್ಟಿನ ರಂಗ ಸಜ್ಜಿಕೆ ಕ್ರಿಯಾಶೀಲಗೊಳಿಸಿದ ಜೀವಿತ ಸಂಸ್ಥೆ ಟ್ರಸ್ಟ್ ಅಡಿಯಲ್ಲಿ ಈಗಾಗಲೇ ದೇಶ ವಿದೇಶದ ಖ್ಯಾತ ನಾಟಕಾರರು, ಸಂಗೀತಕಾರರು, ಸಾಹಿತಿಗಳು, ಕಲಾವಿದರು ನಟಿಸಿ ಈ ರಂಗ ಮಂದಿರಕ್ಕೆ ಮೆರುಗು ಕೊಟ್ಟಿರುವುದು ಗುಬ್ಬಿ ವೀರಣ್ಣ ಎಂಬ ಹೆಸರು, ಈ ಹಿನ್ನಲೆ ಅವರ ಮೊಮ್ಮಗಳು ಬಿ.ಜಯಶ್ರೀ ಅವರ ಶ್ರಮದ ಫಲ ಅತ್ಯಾಧುನಿಕ ರಂಗ ಮಂದಿರ ನಿರ್ಮಾಣವಾಗಿದೆ, ಅದನ್ನು ನಡೆಸಿಕೊಂಡು ಹೋಗುವ ಕೆಲಸ ಟ್ರಸ್ಟ್ ಮಾಡುತ್ತಿದೆ ಎಂದರು.
ಟ್ರಸ್ಟಿ ಕಾಡಶೆಟ್ಟಿ ಸತೀಶ್ ಮಾತನಾಡಿ, ನಾತಕರತ್ನ ಗುಬ್ಬಿ ವೀರಣ್ಣ ಅವರು ಅಂದಿನ ಕಾಲದಲ್ಲಿಯೇ ವಿನೂತನ ರಂಗ ಪ್ರಯೋಗ ಮಾಡಿದ್ದರು, ಅವರ ಹೆಸರು ವಿಶ್ವ ವ್ಯಾಪಿ ಪಸರಿಸಿದೆ, ಆದರೆ ಅವರ ಹುಟ್ಟೂರು ಗುಬ್ಬಿಯಲ್ಲಿ ರಂಗ ಚಟುವಟಿಕೆ ನಡೆದಿಲ್ಲ ಎಂಬ ದೂರು ಬಂದಾಗ ತಕ್ಷಣ ಕಾರ್ಯ ಪ್ರವೃತ್ತರಾದ ಅಂದಿನ ರಾಜ್ಯಸಭಾ ಸದಸ್ಯರಾಗಿದ್ದ ಬಿ.ಜಯಶ್ರೀ ಅವರ ಶ್ರಮದ ಫಲ ಸುಸಜ್ಜಿತ ರಂಗ ಮಂದಿರ ಸಿದ್ಧವಾಯಿತು, ಅದರ ಜೊತೆಗೆ ನಿರಂತರ ನಾಟಕೋತ್ಸವ, ಬೇಸಿಗೆ ಶಿಬಿರ, ಸಂಗೀತೋತ್ಸವ, ಜಾನಪದ ಕಲೋತ್ಸವ ಹೀಗೆ ಅನೇಕ ಚಟುವಟಿಕೆ ಸಹ ನಡೆಸಿದ್ದರು, ಕೋವಿಡ್ ನಂತರದಲ್ಲಿ ನಿಂತಿದ್ದ ಬೇಸಿಗೆ ಶಿಬಿರ ಏಪ್ರಿಲ್ 10 ರಿಂದ ನಡೆಸಲಾಗುವುದು ಎಂದು ತಿಳಿಸಿದರು.
ನಾಟಕಗಳು ಪ್ರತಿ ದಿನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು ಟಿಕೆಟ್ ದರ 30 ರೂ. ನಿಗದಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ಟ್ರಸ್ಟ್ ಸದಸ್ಯ ಕುಮಾರ್ ಗುಬ್ಬಿ ವೀರಣ್ಣ ಇದ್ದರು.
Comments are closed.