ತುಮಕೂರು: ಕಲ್ಪತರು ಸಾಂಸ್ಕೃತಿಕ ವೇದಿಕೆ, ತುಮಕೂರು ವತಿಯಿಂದ ಫೆ.24ರ ಶನಿವಾರ ಮತ್ತು ಫೆ.25ರ ಭಾನುವಾರ ಎರಡು ದಿನ ಸಾಂಸ್ಕೃತಿಕ ಹಬ್ಬವನ್ನು ನಗರ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಕರುನಾಡ ವಿಜಯಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾಂಸ್ಕೃತಿಕ ಹಬ್ಬದ ಅಂಗವಾಗಿ ಖ್ಯಾತ ಗಾಯಕರು, ಕಲಾವಿದರಿಂದ ನೃತ್ಯ, ಗಾಯನ, ಸಂಗೀತ ಪರಿಕರಗಳ ವಾದನದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಕಲ್ಪತರುಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಫೆಬ್ರವರಿ 24ರ ಶನಿವಾರ ಸಂಜೆ 5.30ಕ್ಕೆ ಸಾಂಸ್ಕೃತಿಕ ಹಬ್ಬದ ಮೊದಲ ದಿನದ ಕಾರ್ಯಕ್ರಮ ಆರಂಭವಾಗಲಿದ್ದು, ಸರಿಗಮಪ ಖ್ಯಾತಿಯ ಸ್ಥಳೀಯ ಪ್ರತಿಭೆ ಕಂಬದ ರಂಗಯ್ಯ ಮತ್ತು ತಂಡದವರಿಂದ ಗಾಯನ, ನೃತ್ಯ ಕಾರ್ಯಕ್ರಮ ಜರುಗಿದರೆ, ರ್ಯಾಫ್ ಗಾಯಕ ಅಲೋಕ್ ಅವರಿಂದ ಗಾಯನ ಹಾಗೂ ಗಿಚ್ಚಿಗಿಲಿಗಿಲಿ ತಂಡದ ಸದಸ್ಯರಿಂದ ಹಾಸ್ಯ ಕಾರ್ಯಕ್ರಮ ರಾತ್ರಿ 11 ಗಂಟೆವರೆಗೆ ಜರುಗಲಿವೆ.
ಫೆ.25ರ ಭಾನುವಾರ ಸಂಜೆ ಐದು ಮೂವತ್ತಕ್ಕೆ ಖ್ಯಾತ ಚಲನಚಿತ್ರ ಹಿನ್ನೆಲೆ ಗಾಯಕರಾದ ವಿಜಯಪ್ರಕಾಶ್, ಅನುರಾಧ ಭಟ್, ಅನುಪಮ ಭಟ್ ಹಾಗೂ ತಂಡದವರಿಂದ ಗಾಯನ ನಡೆಯಲಿದೆ, ಇವರೊಂದಿಗೆ ಇಂದು ನಾಗರಾಜ್, ಶಿವಾನಿ, ಅಂಕಿತ ಕುಂಡು ಸೇರಿದಂತೆ ಹಲವಾರು ಉದಯೋನ್ಮುಖ ಗಾಯಕರು ಕಾರ್ಯಕ್ರಮದಲ್ಲಿ ತಮ್ಮ ಗಾನ ಸುಧೆ ಹರಿಸಲಿದ್ದಾರೆ, ಕಲ್ಪತರು ಸಾಂಸ್ಕೃತಿಕ ಹಬ್ಬ ಸಂಪೂರ್ಣವಾಗಿ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮವಾಗಿದ್ದು, ಇವೆಂಟ್ ಕಂಪನಿಯೊಂದು ನಡೆಸುತ್ತಿದ್ದು, ಕರುನಾಡ ವಿಜಯಸೇನೆ ತನ್ನ ಕೈಲಾದ ಸಹಾಯ ಮಾಡುತ್ತಿದೆ, ವಿಶೇಷವಾಗಿ ಜನಪದ ವಾದ್ಯಗಳಾದ ಡೊಳ್ಳು, ತಮಟೆ, ದೇವಿನೃತ್ಯ ಸೇರಿದಂತೆ ನಾಲ್ಕು ಕಲಾಪ್ರಕಾರಗಳಿಗೆ ವೇದಿಕೆ ಒದಗಿಸಲಾಗಿದೆ ಎಂದರು.
ಕಲ್ಪತರು ಸಾಂಸ್ಕೃತಿಕ ವೇದಿಕೆಯಿಂದ ನಡೆಯುವ ಎರಡು ದಿನಗಳ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮಕ್ಕೆ ತುಮಕೂರು ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಕಾರ್ಯಕ್ರಮ ವೀಕ್ಷಿಸಿ ಯಶಸ್ವಿಗೊಳಿಸುವಂತೆ ಕರುನಾಡ ವಿಜಯ ಸೇನೆಯ ರಾಜ್ಯಾಧ್ಯಕ್ಷ ಹೆಚ್.ಎನ್.ದೀಪಕ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕರುನಾಡ ವಿಜಯಸೇನೆಯ ಸಲಹೆಗಾರರಾದ ಡಾ.ಸುದೀಪ್ ಕುಮಾರ್, ಕನ್ನಡ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ್.ಎಸ್, ತನೂಜ್ ಕುಮಾರ್, ಕರುನಾಡ ವಿಜಯಸೇನೆಯ ರಾಜ್ಯ ಉಪಾಧ್ಯಕ್ಷರಾದ ರಂಜನ್, ಸೋಮಶೇಖರ್ ಇತರರು ಇದ್ದರು.
Comments are closed.