ಕುಣಿಗಲ್: ಪೋಲಿಯೋ ಲಸಿಕಾಕರಣ ಕಾರ್ಯಕ್ರಮ ರಾಷ್ಟ್ರೀಯ ಕಾರ್ಯಕ್ರಮ ಆಗಿರುವುದರಿಂದ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಹಾಗೂ ಲಸಿಕೆ ಸಮರ್ಪಕ ನಿರ್ವಹಣೆಗೆ ಕೋಲ್ಡ್ ಸ್ಟೋರೇಜ್ ನಿರ್ವಹಣೆಗೆ ಆದ್ಯತೆ ನೀಡುವಂತೆ ತಹಶೀಲ್ದಾರ್ ವಿಶ್ವನಾಥ್ ಸೂಚನೆ ನೀಡಿದರು.
ಮಂಗಳವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ನಡೆದ ಮಾರ್ಚ್ 3ರಿಂದ ಆರಂಭವಾಗಲಿರುವ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮದ ವ್ಯಾಪಕ ಪ್ರಚಾರಕ್ಕೆ ಪಟ್ಟಣದಲ್ಲಿ ಪುರಸಭೆ, ಗ್ರಾಮಾಂತರ ಪ್ರದೇಶದಲ್ಲಿ ಗ್ರಾಮ ಪಂಚಾಯಿತಿ ಸಹಕಾರ ಪಡೆದು ಅರಿವು ಮೂಡಿಸುವಂತೆ ಸಾಧ್ಯವಾದಷ್ಟು ಪೋಲಿಯೋ ಬೂತ್ಗಳಲ್ಲೆ ಪೋಲಿಯೋ ಲಸಿಕೆ ಹಾಕಿಸಲು ಜನರಲ್ಲಿ ಅರಿವು ಮೂಡಿಸಬೇಕೆಂದರು.
ಸಭೆಯಲ್ಲಿ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ ತಾಲೂಕು ಆರೋಗ್ಯಾಧಿಕಾರಿ ಮರಿಯಪ್ಪ, ಗ್ರಾಮೀಣ ಪ್ರದೇಶದಲ್ಲಿ ಮಾ.03 ರಿಂದ ಮಾ.5 ರ ವರೆಗೂ ಪಟ್ಟಣ ಪ್ರದೇಶದಲ್ಲಿ ಮಾ.3 ರಿಂದ ಮಾ.6ನೇ ತಾರೀಕಿನ ವರೆಗೂ ಹಮ್ಮಿಕೊಳ್ಳಲಾಗುವುದು, ಐದು ವರ್ಷ ವಯೋಮಾನ ದೊಳಗಿರುವ ಒಟ್ಟು 18958 ಮಕ್ಕಳಿಗೆ (ನಗರ- 3695, ಗ್ರಾಮಾಂತರ- 14993) ಮಕ್ಕಳಿಗೆ ಲಸಿಕೆ ಹಾಕಬೇಕಿದ್ದು, ಇದಕ್ಕಾಗಿ 110 ಲಸಿಕಾ ಕೇಂದ್ರಗಳನ್ನು (14 ನಗರ, 96 ಗ್ರಾಮಾಂತರ) ದ ಜೊತೆ ಹೆಚ್ಚುವರಿಯಾಗಿ 9 ಕೇಂದ್ರ ಸ್ಥಾಪಿಸಲಾಗುವುದು, 20 ವೈದ್ಯಾಧಿಕಾರಿಗಳು, 440 ಮಂದಿ ಲಸಿಕಾ ಸಿಬ್ಬಂದಿ, 21 ಮೇಲ್ವಿಚಾರಕ ಸಿಬ್ಬಂದಿ ಲಸಿಕೆ ಕಾರ್ಯಕ್ರಮದ ಯಶಸ್ಸಿಗೆ ಪಾಲ್ಗೊಳ್ಳಲಿದ್ದಾರೆ, ಒಟ್ಟಾರೆಯಾಗಿ 57991 ಮನೆಗಳಿಗೆ ಭೇಟಿ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು, ಲಸಿಕೆ ದಿನ ವಾಹನ ವ್ಯವಸ್ಥೆ, ಇತರೆ ವ್ಯವಸ್ಥೆಗೆ ಬಗ್ಗೆ ಚರ್ಚಿಸಿ ಅಗತ್ಯ ಕ್ರಮಕ್ಕೆ ತಹಶೀಲ್ದಾರ್ ಸೂಚಿಸಿದರು.
ತಾಪಂ ವ್ಯವಸ್ಥಾಪಕ ಮಂಜುನಾಥ, ಮಹಿಳಾ ಸಂರಕ್ಷಣಾಧಿಕಾರಿ ಶಿವಲೀಲಾ, ಹಿರಿಯ ಆರೋಗ್ಯ ನಿರೀಕ್ಷಕರಾದ ವರಲಕ್ಷ್ಮೀ, ಯಾಲಕ್ಕಿಗೌಡ ಇತರರು ಇದ್ದರು.
Comments are closed.