ದೇವರಾಜ ಅರಸು ಪ್ರಜಾ ಪ್ರಭುತ್ವದ ಧ್ವನಿ

26

Get real time updates directly on you device, subscribe now.


ತುಮಕೂರು: ಸಮಾನತೆಯ ಸಮಾಜ ರೂಪಿಸುವ ನಿಟ್ಟಿನಲ್ಲಿ ಶೋಷಿತ ವರ್ಗದವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಸಿಕೊಟ್ಟು ಪ್ರಜಾ ಪ್ರಭುತ್ವದ ಧ್ವನಿಯಾದವರು ದೇವರಾಜ ಅರಸು ಎಂದು ಕುವೆಂಪು ವಿವಿಯ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ.ಜೆ.ಎಸ್.ಸದಾನಂದ ತಿಳಿಸಿದರು.
ತುಮಕೂರು ವಿಶ್ವ ವಿದ್ಯಾಲಯದ ಡಿ.ದೇವರಾಜ ಅರಸು ಅಧ್ಯಯನ ಪೀಠವು ಆಯೋಜಿಸಿದ್ದ ಸಾಮಾಜಿಕ ಮತ್ತು ಆರ್ಥಿಕ ಒಳಿತಿಗಾಗಿ ರಾಜಕೀಯ, ದೇವರಾಜ ಅರಸು ಅವರ ಒಂದು ಪ್ರಯೋಗ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಪಡೆಯಲು ಮೇಲು- ಕೀಳು ಪದ್ಧತಿ ನಿಷೇಧಿಸಿ, ಬಡವರಿಗಾಗಿ ಮೀಸಲಾತಿ ಜಾರಿಗೊಳಿಸಿದರು, ಮಲ ಹೊರುವ ಹಾಗೂ ಜೀತದಾಳು ಪದ್ಧತಿ ಸಂಪೂರ್ಣವಾಗಿ ನಿಷೇಧಿಸಿದರು, ರೈತರ ಮಕ್ಕಳು ಭೂಮಿತಾಯಿಯ ಮಕ್ಕಳೆಂದು ಘೋಷಿಸಿ ಕನಿಷ್ಠ ಕೂಲಿ ಜಾರಿಗೊಳಿಸಿದರು ಎಂದು ತಿಳಿಸಿದರು.

ಸಾಮಾನ್ಯ ವರ್ಗದವರಿಗೆ ನ್ಯಾಯಬೆಲೆ ಅಂಗಡಿಗಳು, ವಿದ್ಯಾರ್ಥಿಗಳಿಗೆ ಬಸ್ ಪಾಸ್ ವ್ಯವಸ್ಥೆ, ಹಳ್ಳಿಗಳಿಗೆ ಕುಡಿಯುವ ನೀರಿನ ಸೌಲಭ್ಯ, ಕಾರ್ಮಿಕ ವರ್ಗಕ್ಕೆ ಆರ್ಥಿಕ ಭದ್ರತೆ ತಂದ ಅರಸು ಅವರ ಅಭಿವೃದ್ಧಿ ಪಥವನ್ನುಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಅಸಹಾಯಕ ಸಮುದಾಯಗಳಿಗೆ ಶಿಕ್ಷಣ ಪರಿಚಯಿಸಿ, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ದೇಶದ ಏಳ್ಗೆಗಾಗಿ ದುಡಿಯುವ ಸಮುದಾಯ ಕಟ್ಟುವ ಕಾರ್ಯ ಮಾಡಿ ಕೆಳ ಸಮುದಾಯದ ಉಸಿರಾಗಿ ಬದುಕಿದರು, ಪರಿಸರ ಕಾಳಜಿಯಿದ್ದ ಅರಸು ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿ ಅರಣ್ಯಇಲಾಖೆಯ ಉನ್ನತೀಕರಣ ಮಾಡಿದರು, 1974ರಲ್ಲಿ ಉಳುವವನೆ ಭೂಮಿಯ ಒಡೆಯನೆಂದು ಘೋಷಿಸಿ ರೈತರ ಪಾಲಿಗೆ ಬೆನ್ನೆಲುಬಾಗಿ ಊಟಕ್ಕೆ ದಾರಿ ಮಾಡಿಕೊಟ್ಟರು ಅರಸು ಎಂದು ತಿಳಿಸಿದರು.

ಸೂರಿಲ್ಲದ ಹಿಂದುಳಿದ ವರ್ಗದ ಜನರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಜಾರಿಗೆ ತಂದ ಮೊದಲ ಮುಖ್ಯಮಂತ್ರಿ ಅರಸು, ಪ್ರತಿ ಮನೆಗೂ ವಿದ್ಯುತ್ ಸರಬರಾಜಾಗಬೇಕು, ಬಿದಿ ದೀಪಗಳ ಅಳವಡಿಕೆ ಪ್ರತಿ ಗಲ್ಲಿಯಲ್ಲೂ ಆಗಬೇಕು, ಇದರಿಂದ ಮಕ್ಕಳ ವಿದ್ಯಾಭ್ಯಾಸ ಸರಾಗವಾಗಲಿದೆ, ಕತ್ತಲ ಸಮಯದಲ್ಲಿ ಆಗುವ ಅವಘಡಗಳಿಂದ ಜನತೆ ಪಾರಾಗಬಹುದು ಎಂಬ ಕಾಳಜಿ ಹೊಂದಿದ್ದವರು ಅರಸು ಎಂದು ತಿಳಿಸಿದರು.
ಜನಮಾನಸದಲ್ಲಿ ಉಳಿದು ಎರಡು ಬಾರಿ ಮುಖ್ಯಮಂತ್ರಿಯಾದ ಧೀಮಂತ ನಾಯಕ ಅರಸು ಅವರು ಅಂದಿನ ರಾಜಕೀಯ ಪರಿಸ್ಥಿತಿಯನ್ನು ಸಕಾರಾತ್ಮಕ ದಿಕ್ಕಿನೆಡೆಗೆ ಕೊಂಡೊಯ್ದು, ರಾಜ್ಯವನ್ನು ಸುಭೀಕ್ಷವಾಗಿ ನಡೆಸಿ ಅಭಿವೃದ್ಧಿ ಪಥದ ಒಡೆಯರಾದರು, ಅಂದಿನ ಮೈಸೂರು ರಾಜ್ಯವನ್ನು ಕರ್ನಾಟಕ ಮಾಡುವ ಅಪೇಕ್ಷೆ ಇದ್ದವರು ಅರಸು, ಇಂದಿರಾಗಾಂಧಿ ಜಾರಿಗೊಳಿಸಿದ್ದ ಅಭಿವೃದ್ಧಿಯ 20 ಅಂಶಗಳನ್ನು ರಾಜ್ಯದಲ್ಲಿ ಮೊದಲು ಅಳವಡಿಸಿಕೊಂಡದ್ದು ಅರಸು ಎಂದು ತಿಳಿಸಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ದೇವರಾಜ ಅರಸು ಸಂವಿಧಾನದ, ಪ್ರಜಾ ಪ್ರಭುತ್ವದ ಶಕ್ತಿಯಿಂದ ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು, ಅನುಭವಿ ಪ್ರಾಧ್ಯಾಪಕರನ್ನೊಳಗೊಂಡ ವಿಶ್ವ ವಿದ್ಯಾಲಯಗಳು ಸೌಕರ್ಯಗಳಿಲ್ಲದಿದ್ದರೂ ಸೊನ್ನೆಯಿಂದ ಮೇಲಕ್ಕೇರುತ್ತವೆ, ವಿವಿಗಳಲ್ಲಿರುವ ಅಧ್ಯಯನ ಪೀಠಗಳು ವಿದ್ಯಾರ್ಥಿಗಳನ್ನು ಮಹನೀಯರ ಸಾಧನೆಗಳ ಮೂಲಕ, ಅಧ್ಯಯನ ಸಂಶೋಧನೆಗಳಿಂದ ಉನ್ನತ ಶ್ರೇಣಿಗೇರಿಸುವ ಪ್ರಯತ್ನ ಮಾಡಬೇಕು ಎಂದರು.

ವಿವಿ ಕುಲಸಚಿವೆ ನಾಹಿದಾ ಜಮ್ ಜಮ್ ಮಾತನಾಡಿ, ದೇವರಾಜು ಅರಸು ಅವರ ರಾಜಕೀಯ ಯುಗವನ್ನು ಸುವರ್ಣ ಯುಗವೆಂದು ಹೇಳಬಹುದು, ರಾಜಕೀಯ ಮಾರಾಟಕ್ಕಿಲ್ಲ ಎಂಬುದನ್ನು ಅರಿತು ಸಂವಿಧಾನ- ಪ್ರಜಾ ಪ್ರಭುತ್ವದ ಅಡಿಯಲ್ಲಿ ಯಾವ ವರ್ಗದವರು ಕೂಡ ನಾಯಕರಾಗಬಹುದು ಎಂದು ಹೇಳಿದರು.
ತುಮಕೂರು ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನ ಕುಮಾರ್.ಕೆ, ಡಿ.ದೇವರಾಜ ಅರಸು ಅಧ್ಯಯನ ಪೀಠದ ಸಂಯೋಜಕ ಡಾ.ಗುಂಡೇಗೌಡ ಇದ್ದರು.

Get real time updates directly on you device, subscribe now.

Comments are closed.

error: Content is protected !!