ತುಮಕೂರು: ಶ್ರೇಷ್ಠ ಬದುಕು ಕಟ್ಟಿಕೊಳ್ಳಲು, ಮಾದರಿ ಸಮಾಜ ನಿರ್ಮಾಣ ಮಾಡಲು ಸರ್ವಜ್ಞ ಕವಿಯ ವಚನಗಳು ದಾರಿ ದೀಪವಾಗಿವೆ, ಸಮಾಜದ ಅಂಕುಡೊಂಕು ತಿದ್ದಿ, ಉತ್ತಮ ಮಾರ್ಗದರ್ಶನ ತೋರುವ ಸರ್ವಜ್ಞನ ವಚನಗಳು ಎಲ್ಲಾ ಕಾಲಕ್ಕೂ ಮಾದರಿಯಾಗಿ ನಿಲ್ಲುತ್ತವೆ ಎಂದು ತಹಶೀಲ್ದಾರ್ ಸಿದ್ದೇಶ್ ಹೇಳಿದರು.
ಮಂಗಳವಾರ ನಗರದ ಡಾ.ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಕುಂಬಾರರ ಸಂಘದ ಆಶ್ರಯದಲ್ಲಿ ನಡೆದ ಸಂತ ಕವಿ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಸರ್ವಜ್ಞನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ, ಸರ್ವಜ್ಞ ಹೇಳದ ಮಾತಿಲ್ಲ, ವ್ಯಕ್ತಿತ್ವ ವಿಕಸನದಿಂದ ಆದರ್ಶ ಕುಟುಂಬದ ಪರಿಕಲ್ಪನೆ, ಜಾತ್ಯತೀತ ಸಮಾಜ ನಿರ್ಮಾಣದ ವರೆಗೂ ಮಾನವ ಉತ್ತಮ ಬಾಳು ಬಾಳಲು ಬೇಕಾದ ಎಲ್ಲವನ್ನೂ ತಮ್ಮ ವಚನಗಳಲ್ಲಿ ಸಾರಿ ಹೇಳಿರುವ ಸರ್ವಜ್ಞ, ಮನುಕುಲದ ಮಹಾನ್ ದಾರ್ಶನಿಕ ಎಂದು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ, ಸರ್ವಜ್ಞ ಮನುಕುಲದ ಆಸ್ತಿ, ಜನಸಾಮಾನ್ಯರ ನಡುವೆ ಬೆರೆತು ಅವರ ದುಃಖ ದುಗುಡಗಳಿಗೆ ತಮ್ಮ ವಚನಗಳ ಮೂಲಕ ಪರಿಹಾರ ಹೇಳಿದ್ದಾರೆ, ಜನಸಾಮಾನ್ಯರ ಒಳಿತಿಗಾಗಿ, ನಮ್ಮ ಸದಾಚಾರ, ಸುಸಂಸ್ಕೃತಿ ಸಾರುವ ಮೂಲಕ ಮನುಷ್ಯರೆಲ್ಲರೂ ಒಂದೇ, ಮೇಲು ಕೀಳೆಂಬುದು ಇಲ್ಲ, ಎಲ್ಲರೂ ಸರಿಸಮಾನರು ಎಂಬ ಭಾವೈಕ್ಯ ಸಂದೇಶ ಸಾರಿದವರು ಕವಿಶೇಷ್ಠ ಸರ್ವಜ್ಞ ಎಂದರು.
ಜಿಲ್ಲಾ ಕುಂಬಾರರ ಸಂಘದ ಅಧ್ಯಕ್ಷ ಎನ್.ಶ್ರೀನಿವಾಸ್ ಮಾತನಾಡಿ, ಕುಂಬಾರ ಸಮಾಜ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದೆ, ನಮ್ಮ ಸಮಾಜ ಮುಖ್ಯವಾಹಿನಿಗೆ ಬರಲು ಸರ್ಕಾರ ಹೆಚ್ಚಿನ ಸಹಕಾರ ನೀಡಬೇಕು, ಸರ್ಕಾರದ ಸವಲತ್ತು ಪಡೆದು ಬೆಳವಣಿಗೆಯಾಗಲು ಸಮಾಜದ ಎಲ್ಲರೂ ಸಂಘಟಿತರಾಗಿ ಶಕ್ತಿಯುತ ಧ್ವನಿಯಾಗಬೇಕು ಎಂದು ಆಶಿಸಿದರು.
ಉಪನ್ಯಾಸಕರಾಗಿ ಮಾತನಾಡಿದ ಸಾಹಿತಿ ಕೃಷ್ಣ ತಿಪ್ಪೂರು, ಸರ್ವಜ್ಞ ಶುದ್ಧ ಕನ್ನಡ ಕವಿ, ಸಮಾಜದ ಒಳಿತಿಗಾಗಿ ಒಂದೆಡೆ ನಿಲ್ಲದೆ ಸಂಚಾರಿಯಾಗಿದ್ದ ಸರ್ವಜ್ಞ ತಮ್ಮ ವಚನಗಳ ಮೂಲಕ ಸಮಾಜದ ಲೋಪಗಳನ್ನು ತಿದ್ದುವ ಪ್ರಯತ್ನ ಮಾಡಿದ ಸಮಾಜ ಸುಧಾರಕ, ಜನರ ಜೊತೆ ವಿಚಾರ ಹಂಚಿಕೊಳ್ಳುತ್ತಾ ಅವರ ದುಃಖ ನಿವಾರಣೆಗೆ ಮಾರ್ಗದರ್ಶನ ನೀಡಿದ್ದ ಸರ್ವಜ್ಞ ಸರ್ವಶೇಷ್ಠ ಕವಿಯಾಗಿದ್ದಾರೆ ಎಂದರು.
ಸರ್ವಜ್ಞ ಅದೆಷ್ಟು ವಚನಗಳನ್ನು ರಚಿಸಿದ್ದಾನೆ ಎಂಬುದರ ದಾಖಲೆ ಸಿಕ್ಕಿಲ್ಲ, ಸರ್ವಜ್ಞನ ಬದುಕು, ವಚನಗಳ ಬಗ್ಗೆ ಸಂಶೋಧನೆ ನಡೆಯಬೇಕು, ಸರ್ಕಾರ ಸರ್ವಜ್ಞ ಕವಿಯ ಬದುಕಿನ ಸಮಗ್ರ ಅಧ್ಯಯನ, ಸಂಶೋಧನೆಗೆ ಅವಕಾಶ ಮಾಡಿ ಆತನ ಬಗ್ಗೆ ಮತ್ತಷ್ಟು ಮಾಹಿತಿ ಸಂಗ್ರಹಿಸಲು ನೆರವಾಗಬೇಕು ಎಂದು ಹೇಳಿದರು.
ಈ ವೇಳೆ ಹಿರಿಯ ಸಾಹಿತಿ ಪ್ರೊ.ಎಸ್.ಆರ್.ದೇವಪ್ರಕಾಶ್, ಶಾಲಿನಿ ದೇವಪ್ರಕಾಶ್ ಹಾಗೂ ಸಮಾಜದ ಮುಖಂಡರಾದ ಅಶ್ವತ್ಥಪ್ಪ, ಸುಬ್ಬರಾಯಪ್ಪ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ಕುಂಬೇಶ್ವರ ಹಿಂದುಳಿದ ವರ್ಗಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ರಘುರಾಮಯ್ಯ, ಕುಂಬೇಶ್ವರಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ರಾಧಾ ಅಶ್ವತ್ಥಪ್ಪ, ಕುಂಬಾರ ಸಂಘದ ನಿರ್ದೇಶಕ ಬಿ.ಆರ್.ಶಿವಕುಮಾರ್ ಬಂಡಿಹಳ್ಳಿ, ಮುಖಂಡರಾದ ಚಿಕ್ಕಣ್ಣ, ಸುಬ್ಬರಾಯಪ್ಪ, ರೇವಣ್ಣಸಿದ್ದಯ್ಯ, ಎಸ್.ಶಿವಕುಮಾರ್ ಮೊದಲಾದವರು ಭಾಗವಹಿಸಿದ್ದರು.
Comments are closed.