ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಆಕ್ರೋಶ

45

Get real time updates directly on you device, subscribe now.


ತುಮಕೂರು: ರಾಜ್ಯದಲ್ಲಿ ಬಿಜೆಪಿ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ರೈತರಿಗಾಗಿ ಜಾರಿಗೆ ತಂದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್, ರೈತರ ಮಕ್ಕಳಿಗಾಗಿ ಜಾರಿಗೆ ತಂದ ವಿದ್ಯಾಸಿರಿ ಸ್ಕಾಲರ್ಶಿಪ್ ಯೋಜನೆ ಕಡಿತ ಮಾಡುವ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎ.ಎಸ್.ನಡಹಳ್ಳಿ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2008ರಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಹಸಿರು ಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದಲ್ಲದೆ ಪ್ರತ್ಯೇಕ ರೈತ ಬಜೆಟ್ ಮಂಡಿಸಿದ್ದರು, ಆ ನಂತರ ಕೇಂದ್ರ ಸರಕಾರದ ಪಿಎಂ ಕಿಸಾನ್ ಸನ್ಮಾನ್ ಯೋಜನೆಯ 6 ಸಾವಿರದ ಜೊತೆಗೆ ರಾಜ್ಯ ಸರಕಾರವೂ 4 ಸಾವಿರ ಸೇರಿಸಿ ವಾರ್ಷಿಕ 10 ಸಾವಿರ ರೂ. ರೈತರ ಖಾತೆಗೆ ನೇರ ವರ್ಗಾವಣೆ ಯಾಗುವಂತೆ ಮಾಡಿದ್ದರು, ಅತಿವೃಷ್ಟಿ, ಆನಾವೃಷ್ಟಿಯಂತಹ ಕಾಲದಲ್ಲಿ ಕೇಂದ್ರದ ಅನುದಾನಕ್ಕೆ ಕಾಯದೆ ರಾಜ್ಯ ಸರಕಾರವೇ ಎಕರೆಗೆ 10 ಸಾವಿರ ರೂ. ಪರಿಹಾರ ನೀಡಿತ್ತು, ಆದರೆ ಈಗ ರಾಜ್ಯ ಸರಕಾರದ ಬಳಿ ಎಕರೆಗೆ 2000 ರೂ. ಪರಿಹಾರ ನೀಡಲು ಹಣವಿಲ್ಲ, ರಾಜ್ಯದ ಖಜಾನೆ ಇವರ ವಿವೇಚನಾ ರಹಿತ ಗ್ಯಾರಂಟಿಗಳಿಂದ ಖಾಲಿಯಾಗಿದೆ ಎಂದು ದೂರಿದರು.

ರಾಜ್ಯದಲ್ಲಿ ಕೃಷಿಗೆ ಪೂರಕವಾದ ಹೈನುಗಾರಿಕೆಯಿಂದ ಜನರು ಬದುಕು ಕಟ್ಟಿಕೊಳ್ಳುವಂತೆ ಮಾಡುವ ಉದ್ದೇಶದಿಂದ ಪ್ರತಿ ಲೀಟರ್ ಹಾಲಿಗೆ 2 ರೂ. ಪ್ರೋತ್ಸಾಹ ಧನವನ್ನು ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು, 2018ರಲ್ಲಿ ಅಧಿಕಾರಕ್ಕೆ ಬಂದಾಗ ಅದನ್ನು 5 ರೂ. ಗಳಿಗೆ ಹೆಚ್ಚಿಸಿದ್ದರು, ಆದರೆ ಇಂದಿನ ಸಿದ್ದರಾಮಯ್ಯ ಸರಕಾರ ಕಳೆದ ಮೇ ತಿಂಗಳಿನಿಂದಲೂ ರೈತರಿಗೆ ಹಾಲಿನ ಪ್ರೋತ್ಸಾಹ ಧನ ನೀಡಿಲ್ಲ, ಸುಮಾರು 715 ಕೋಟಿ ರೂ. ಹೈನುಗಾರಿರಿಗೆ ನೀಡಬೇಕಾಗಿರುವ ಬಾಕಿ ಇದೆ, ವಿರೋಧ ಪಕ್ಷವಾದ ಬಿಜೆಪಿ ಹೋರಾಟ ಮಾಡಿದ ನಂತರ ಒಂದು ತಿಂಗಳ ಹಣವನ್ನು ಈಗ ಬಿಡುಗಡೆ ಮಾಡಿದ್ದಾರೆ, ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯೂ ತೀವ್ರವಾಗಿ ತಲೆದೋರಿದೆ, ಕನಿಷ್ಠ ದಿನಕ್ಕೆ 3 ಗಂಟೆಯಾದರೂ ತ್ರೀಪೇಸ್ ವಿದ್ಯುತ್ ನೀಡಲು ಸರಕಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ, ಇದರಿಂದ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು, ರೈತರು ಪರಿತಪಿಸುತಿದ್ದಾರೆ, ಸಾಲ ಮಾಡಿ ಬಜೆಟ್ ಮಂಡಿಸುವಂತಹ ದುಸ್ಥಿತಿಗೆ ರಾಜ್ಯ ಸರಕಾರ ಬಂದಿದೆ, 2013- 24ರಲ್ಲಿ 85 ಸಾವಿರ ಕೋಟಿ ಹಾಗೂ 2024- 25ರಲ್ಲಿ 1.05 ಕೋಟಿ ಸಾಲ ಮಾಡಿ ಸರಕಾರ ಯೋಜನೆಗಳಿಗೆ ಖರ್ಚು ಮಾಡಲಾಗುತ್ತಿದೆ, ಮುಖ್ಯಮಂತ್ರಿಗಳು ಸಿದ್ದರಾಮಯ್ಯ ಅಲ್ಲ, ಸಾಲದ ರಾಮಯ್ಯ ಎಂದು ಎ.ಎಸ್.ನಡಹಳ್ಳಿ ಟೀಕಿಸಿದರು.

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರ ಆದೇಶದಂತೆ ಎಲ್ಲಾ ರಾಜ್ಯಗಳ ರೈತಮೋರ್ಚಾ ಪ್ರತಿನಿಧಿಗಳು ಪ್ರತಿ ಹಳ್ಳಿಗೂ ಭೇಟಿ ನೀಡಿ, ಕೇಂದ್ರ ಸರಕಾರ ರೈತರಿಗಾಗಿ ಜಾರಿಗೆ ತಂದಿರುವ ಯೋಜನೆಗಳ ಮನವರಿಕೆ ಮಾಡಿಕೊಡುವುದರ ಜೊತೆಗೆ ರಾಜ್ಯ ಸರಕಾರದ ರೈತ ವಿರೋಧಿ ನೀತಿಗಳನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದೆ, ಇದರ ಅಂಗವಾಗಿ ಫೆಬ್ರವರಿ 12 ರಿಂದ ಗ್ರಾಮ ಪರಿಕ್ರಮ ಅಭಿಯಾನ ಆರಂಭಿಸಲಾಗಿದೆ ಎಂದರು.

ಸುದ್ದಿಗೋಷ್ಠಿಗೂ ಮುನ್ನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಹಿರಿಯ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿ, ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು, ನಂತರ ತುಮಕೂರು ತಾಲೂಕು ಮಷಾಣಪುರ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ರೈತರೊಂದಿಗೆ ಸಂವಾದ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ರೈತ ಮೋರ್ಚಾ ಪದಾಧಿಕಾರಿಗಳಾದ ಸತ್ಯಮಂಗಲ ಜಗದೀಶ್, ಮಾಧ್ಯಮ ಪ್ರಮುಖ ಟಿ.ಆರ್.ಸದಾಶಿವಯ್ಯ, ಸಹ ಪ್ರಮುಖ್ ಜೆ.ಜಗದೀಶ್ ಇದ್ದರು.

Get real time updates directly on you device, subscribe now.

Comments are closed.

error: Content is protected !!