ಮೋದಿ ಸರ್ಕಾರ ದೇಶದ ಅಭಿವೃದ್ಧಿಗೆ ಆದ್ಯತೆ ನೀಡಿದೆ

62

Get real time updates directly on you device, subscribe now.


ತುಮಕೂರು: ನಗರದ ಭದ್ರಮ್ಮ ವೃತ್ತದ ಬಳಿ ಜಿಲ್ಲಾ ಬಿಜೆಪಿಯ ನೂತನ ಕಾರ್ಯಾಲಯ ಆರಂಭವಾಯಿತು, ಎರಡು ದಿನಕಾಲ ನಡೆದ ವಿವಿಧ ಹೋಮ, ಪೂಜೆ ನಂತರ ಗುರುವಾರ ಕಾರ್ಯಾಲಯ ಉದ್ಘಾಟನೆ ಮಾಡಿದ ಪಕ್ಷದ ನಾಯಕರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲುವಿಗೆ ಸಂಘಟಿತರಾಗಿ ಶ್ರಮಿಸಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಎಲ್ಲರೂ ಶ್ರಮಿಸುವ ಸಂಕಲ್ಪ ಮಾಡುಬೇಕು ಎಂದು ಮನವಿ ಮಾಡಿದರು.

ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಉಸ್ತುವಾರಿ, ಶಾಸಕ ಗೋಪಾಲಯ್ಯ ಮಾತನಾಡಿ, ಪ್ರಧಾನಿ ಸ್ಥಾನದಲ್ಲಿ ನರೇಂದ್ರ ಮೋದಿಯವರಿಗೆ ಸರಿಸಾಟಿಯಾಗಬಲ್ಲ, ಮೋದಿಯವರಿಗೆ ಹೋಲಿಕೆ ಮಾಡಬಹುದಾದ ಸಮರ್ಥ ನಾಯಕರು ಬೇರೆ ಪಕ್ಷಗಳಲ್ಲಿ ಇಲ್ಲ ಎಂಬುದು ಜನಸಾಮಾನ್ಯರಿಗೂ ತಿಳಿದಿದೆ, ಚುನಾವಣೆ ಗೆಲುವಿಗೆ ಮೋದಿ ಅಂಶವೂ ಪ್ರಮುಖ ಕಾರಣವಾಗುತ್ತದೆ, ಇದರ ಜೊತೆಗೆ ಮುಖಂಡರು ಕಾರ್ಯಕರ್ತರು, ಮೋದಿ ಸರ್ಕಾರದ ಜನಪರ ಯೋಜನೆ, ಅಭಿವೃದ್ಧಿ ಕಾರ್ಯಕ್ರಮ ಜನರಿಗೆ ತಲುಪಿಸಬೇಕು ಎಂದು ಮನವಿ ಮಾಡಿದರು.

ಪ್ರಧಾನಿ ಮೋದಿಯವರ ಸರ್ಕಾರ ದೇಶದ ಅಭಿವೃದ್ಧಿಗೆ, ಜನರ ಸಂಕಷ್ಟ ನಿವಾರಣೆಗೆ ಹಲವಾರು ಉತ್ಕೃಷ್ಟ ಕಾರ್ಯಕ್ರಮ ಜಾರಿಗೆ ತಂದಿದೆ, ಈ ಕಾರ್ಯಕ್ರಮ ಗುರಿ ತಲುಪಿಸಲು ಮೊತ್ತೊಮ್ಮೆ ಮೋದಿಯವರು ಪ್ರಧಾನಿ ಆಗಬೇಕಾದ ಅಗತ್ಯವಿದೆ, ರಾಜ್ಯದಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಎಲ್ಲರ ಶ್ರಮ ಅಗತ್ಯ ಎಂದರು.

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಚುನಾವಣೆ ಸಂದರ್ಭದಲ್ಲಿ ಸಹಜವಾಗಿ ಪಕ್ಷದ ಸಂಘಟನೆ, ಬೆಳವಣಿಗೆಗೆ ಒತ್ತು ಸಿಗುತ್ತದೆ, ನಾವೀಗ ಅಂತಹ ಸಮಯದಲ್ಲಿದ್ದೇವೆ, ಈ ಕಾರ್ಯಾಲಯ ಆರಂಭ ಆಗುವುದರೊಂದಿಗೆ ಪಕ್ಷದ ವಿಜಯದ ಬಾಗಿಲು ತೆರೆಯುವಂತಾಗಲಿ, ಪಕ್ಷದ ಪ್ರತಿಯೊಬ್ಬರೂ ಮನಸಿಟ್ಟು ಕೆಲಸ ಮಾಡಿದರೆ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಾಧ್ಯವಿದೆ, ಚುನಾವಣೆ ಹಡಗಿನಲ್ಲಿ ಸಾಗುತ್ತಿರುವ ನಾವು ಹಡಗಿನ ತೂತು ಕೊರೆಯದೆ, ತೂತುಗಳಿಗೆ ತೇಪೆ ಹಾಕಿಕೊಂಡು ಗೆಲುವಿನ ದಡ ಸೇರಿಸಲು ಸಂಕಲ್ಪ ಮಾಡಬೇಕು ಎಂದರು.

ದಾಸರಹಳ್ಳಿ ಕ್ಷೇತ್ರ ಶಾಸಕ, ಲೋಕಸಭಾ ಕ್ಲಸ್ಟರ್ ವಿಭಾಗದ ಉಸ್ತುವಾರಿ ಮುನಿರಾಜು ಮಾತನಾಡಿ, ಪಕ್ಷದ ಕಾರ್ಯಕರ್ತರು ತಲೆ ಎತ್ತಿ ಜನರ ಬಳಿಗೆ ಹೋಗುವಂತಹ ಹೆಮ್ಮೆಯ ಕೆಲಸಗಳನ್ನು ಪ್ರಧಾನಿ ಮೋದಿಯವರು ಮಾಡಿದ್ದಾರೆ, ಆ ಕೆಲಸಗಳನ್ನು ಬೂತ್ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಜನರಿಗೆ ಪರಿಚಯಿಸಬೇಕು, ಕೇಂದ್ರದಲ್ಲಿ ಬಿಜೆಪಿಗೆ 370 ಸ್ಥಾನ ಗಳಿಸಬೇಕು ಎಂಬ ಗುರಿ ಇದೆ, ಹಾಗೇ ಪ್ರತಿ ಬೂತ್ ಮಟ್ಟದಲ್ಲಿ ಹಿಂದಿನ ಚುನಾವಣೆಗಿಂಥಾ 370 ಹೆಚ್ಚುವರಿ ಮತ ಪಡೆಯುವ ಗುರಿ ಹೊಂದಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ನಾಯಕರು ಹಾಗೂ ಕಾರ್ಯಕರ್ತರು ಉತ್ತಮ ನಡೆ ನುಡಿ, ಜನರನ್ನು ವಿಶ್ವಾಸದಿಂದ ಬೆರೆಯುವ ಮನೋಭಾವ ಬೆಳೆಸಿಕೊಂಡು ಕಾರ್ಯೋನ್ಮುಖರಾದರೆ ಚುನಾವಣೆಯ ಗೆಲುವು ಸುಲಭವಾಗುತ್ತದೆ ಎಂದರು.
ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಪಕ್ಷದ ಹಿರಿಯರು ಗೊಂದಲ ಸೃಷಿಯಾಗುವಂತಹ ಹೇಳಿಕೆ ನೀಡಬೇಡಿ, ಅಂತಹ ಹೇಳಿಕೆಗಳು ಕಾರ್ಯಕರ್ತರಲ್ಲೂ ಗೊಂದಲ ಉಂಟು ಮಾಡಿ ಚುನಾವಣೆ ಮೇಲೂ ಪರಿಣಾಮ ಬೀರಬಹುದು, ಪ್ರತಿ ಬೂತ್ ನಲ್ಲೂ ಈ ಬಾರಿ ಶೇಕಡ 10 ರಷ್ಟು ಹೆಚ್ಚು ಮತಗಳು ಬಿಜೆಪಿಗೆ ದೊರೆಯುವಂತೆ ನೋಡಿಕೊಳ್ಳಬೇಕು ಎಂದು ಮೋದಿಯವರು ಹೇಳಿದ್ದಾರೆ, ಅದರಂತೆ ಎಲ್ಲರೂ ಕಾಳಜಿಯಿಂದ ಕೆಲಸ ಮಾಡಬೇಕು ಎಂದರು.

ರಾಜ್ಯ ಸಂಘಟನಾ ಕಾರ್ಯದರ್ಶಿ ರಾಜೇಶ್ ಮಾತನಾಡಿ, ಹೊಸ ಮತದಾರರನ್ನು ಭೇಟಿ ಮಾಡಿ ಅವರಿಗೆ ಮೋದಿ ಸರ್ಕಾರದ ಸಾಧನೆ, ಹಿಂದಿನ ಯುಪಿಎ ಸರ್ಕಾರದ ವೈಫಲ್ಯ ಮನವರಿಕೆ ಮಾಡಿಕೊಡಿ, ಬಿಜೆಪಿ ಸರ್ಕಾರದ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿ ಅವರಿಗೆ ಬಿಜೆಪಿ ಬಗ್ಗೆ ವಿಶ್ವಾಸ ತುಂಬಿರಿ ಎಂದು ಕರೆ ನೀಡಿದರು.
ತುಮಕೂರು ಜಿಲ್ಲೆ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್, ಮಧುಗಿರಿ ಜಿಲ್ಲಾಧ್ಯಕ್ಷ ಹನುಮಂತೇಗೌಡ, ಶಾಸಕ ಜಿ.ಬಿ.ಜ್ಯೋತಿಗಣೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ, ಅಂಬಿಕಾ ಹುಲಿನಾಯ್ಕರ್, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ಎಂ.ಬಿ.ನಂದೀಶ್, ಎಸ್.ಶಿವಪ್ರಸಾದ್, ಎಸ್.ಪಿ.ಚಿದಾನಂದ್, ವೈ.ಹೆಚ್.ಹುಚ್ಚಯ್ಯ, ಭೈರಣ್ಣ, ದಿಲೀಪ್ಕುಮಾರ್, ಅನಿಲ್ಕುಮಾರ್, ಎಲ್.ಸಿ.ನಾಗರಾಜು ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!