ತುಮಕೂರು: ತುಮಕೂರು ಮಹಾ ನಗರ ಪಾಲಿಕೆ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.
ನಗರದ ಟೌನ್ ಹಾಲ್ ವೃತ್ತದಲ್ಲಿರುವ ಮಹಾ ನಗರ ಪಾಲಿಕೆ ಕಚೇರಿಗೆ ಎಂದಿನಂತೆ ಕಚೇರಿ ಸಮಯಕ್ಕೆ ಬಂದ ಸಿಬ್ಬಂದಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ.
ಲೋಕಾಯುಕ್ತ ಎಸ್ಪಿ ವಲಿಬಾಷ ನೇತೃತ್ವದಲ್ಲಿ ಬೆಂಗಳೂರು ಮತ್ತು ತುಮಕೂರಿನ ಸುಮಾರು 25ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ಇಡೀ ಕಚೇರಿಯನ್ನು ತಮ್ಮ ಹಿಡಿತಕ್ಕೆ ಪಡೆದು ವಿವಿಧ ಶಾಖೆಗಳಲ್ಲಿ ಅಗತ್ಯ ದಾಖಲಾತಿಗಳ ಪರಿಶೀಲನೆ ನಡೆಸಿದರು.
6 ವಾಹನಗಳಲ್ಲಿ ಬಂದಿದ್ದ ಲೋಕಾಯುಕ್ತ ಅಧಿಕಾರಿಗಳು ಮಹಾ ನಗರ ಪಾಲಿಕೆಯ ಕಂದಾಯ ಶಾಖೆ, ಇಂಜಿನಿಯರ್ ಶಾಖೆ, ಆರೋಗ್ಯ ಶಾಖೆ, ಯುಜಿಡಿ ಸೇರಿದಂತೆ ವಿವಿಧ ಶಾಖೆಗಳಿಗೆ ತೆರಳಿ ಅಗತ್ಯ ಕಡತ, ದಾಖಲಾತಿಗಳ ತಪಾಸಣೆ ನಡೆಸಿದರು.
ಮಹಾ ನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ಕೇಳಿ ಬಂದಿದ್ದ ಆರೋಪಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪಾಲಿಕೆಯ ವಿವಿಧ ಶಾಖೆಗಳನ್ನು ಜಾಲಾಡಿದರು.
ಮಹಾ ನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿದಾಗ ಕಚೇರಿಯ ಆವರಣದಲ್ಲಿ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ಅವರ ಕೆಲಸ ಕಾರ್ಯಗಳ ಬಗ್ಗೆ ವಿಚಾರಣೆ ನಡೆಸಿದರು.
ಮಹಾ ನಗರ ಪಾಲಿಕೆಯ ಹೊಸ ಆಡಳಿತ ಕಚೇರಿ ಸೇರಿದಂತೆ ಇಡೀ ಮಹಾನಗರ ಪಾಲಿಕೆಯ ಕಚೇರಿ ಆವರಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದು ಸಂಪೂರ್ಣ ಬಂದ್ ಮಾಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ತಮ್ಮ ಕೆಲ ಕಾರ್ಯಗಳಿಗಾಗಿ ಪಾಲಿಕೆ ಕಚೇರಿಗೆ ಬಂದಿದ್ದ ಸಾರ್ವಜನಿಕರು ಸಹ ಹೊರ ಬರಲಾಗದೆ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಹಾ ನಗರ ಪಾಲಿಕೆಯ ಎಲ್ಲಾ ಶಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯಿಂದ ಅಗತ್ಯ ಮಾಹಿತಿ ಕಲೆ ಹಾಕಿದ್ದಾರೆ.
ದಾಳಿಯಲ್ಲಿ ಲೋಕಾಯುಕ್ತ ಎಸ್ಪಿ ವಲಿಭಾಷ, ಡಿವೈಎಸ್ಪಿ ಉಮಾಶಂಕರ್, ಇನ್ಸ್ಪೆಕ್ಟರ್ ರಾಮಕೃಷ್ಣ ಸೇರಿದಂತೆ ಲೋಕಾಯುಕ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.
Comments are closed.