ಸಿದ್ದಗಂಗಾ ಮಠದಲ್ಲಿ ಕೃಷಿ, ಕೈಗಾರಿಕಾ ವಸ್ತುಪ್ರದರ್ಶನ

ಅಯೋಧ್ಯೆಯ ರಾಮ ಮಂದಿರ ಮಾದರಿ ವಸ್ತು ಪ್ರದರ್ಶನ ಈ ಬಾರಿಯ ವಿಶೇಷ

276

Get real time updates directly on you device, subscribe now.


ತುಮಕೂರು: ಇತಿಹಾಸ ಪ್ರಸಿದ್ದ ಶ್ರೀಸಿದ್ದಗಂಗಾ ಮಠದ ಆರಾಧ್ಯ ದೈವ ಶ್ರೀಸಿದ್ದಲಿಂಗೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಅಂಗವಾಗಿ ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ- 2024ನ್ನು ಫೆ.26 ರಿಂದ ಮಾ.12 ರ ವರೆಗೆ 16 ದಿನ ಶ್ರೀಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಈ ಬಾರಿಯ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಸರ್ಕಾರಿ ಇಲಾಖೆಗಳು ಹಾಗೂ ಖಾಸಗಿ ಸಂಸ್ಥೆಗಳು ಸೇರಿದಂತೆ ಒಟ್ಟು 170ಕ್ಕೂ ಅಧಿಕ ಮಳಿಗೆ ತೆರೆಯಲಾಗುತ್ತಿದೆ ಎಂದು ಸಿದ್ದಗಂಗಾ ವಸ್ತು ಪ್ರದರ್ಶನ ಟ್ರಸ್ಟ್ನ ಕಾರ್ಯದರ್ಶಿ ಗಂಗಾಧರಯ್ಯ, ಜಂಟಿ ಕಾರ್ಯದರ್ಶಿ ಎಸ್.ಶಿವಕುಮಾರ್ ಹಾಗೂ ಕೆಂ.ಬ.ರೇಣುಕಯ್ಯ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಯೋಧ್ಯೆಯ ರಾಮ ಮಂದಿರ ಮಾದರಿ ಸಹ ಈ ಬಾರಿಯ ವಸ್ತು ಪ್ರದರ್ಶನದಲ್ಲಿ ಪ್ರದರ್ಶನಗೊಳ್ಳತ್ತಿರುವುದು ವಿಶೇಷವಾಗಿದೆ, ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆ ಪೂರ್ಣಗೊಂಡಿವೆ ಎಂದರು.

ಈ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಸಿದ್ದಗಂಗಾ ತಾಂತ್ರಿಕ ಮಹಾ ವಿದ್ಯಾಲಯ, ಕೃಷಿ ಜೀವಂತ ಪ್ರಾತ್ಯಕ್ಷಿಕೆ ಹಾಗೂ ತಾಂತ್ರಿಕತೆ ಬಳಕೆಯ ಪ್ರದರ್ಶನ, ಅರಣ್ಯ ಸ್ವಾಭಾವಿಕ ಅರಣ್ಯದ ದೃಶ್ಯ, ಶಿಕ್ಷಣ ಇಲಾಖೆ, ಪಶು ಸಂಗೋಪನಾ ಇಲಾಖೆ, ಕೃಷಿ ಇಲಾಖೆ, ರೇಷ್ಮೆ ಇಲಾಖೆ ಹಾಗೂ ಬೆಂಗಳೂರಿನ ವಾರ್ತಾ ಇಲಾಖೆ ಸೇರಿದಂತೆ 20ಕ್ಕೂ ಅಧಿಕ ಸರ್ಕಾರಿ ಇಲಾಖೆಗಳು ಹಾಗೂ 150ಕ್ಕೂ ಹೆಚ್ಚು ಖಾಸಗಿ ವಾಣಿಜ್ಯ ಮಳಿಗೆಗಳು ಸೇರಿ ಒಟ್ಟು 170ಕ್ಕೂ ಅಧಿಕ ಮಳಿಗೆಗಳನ್ನು ತೆರೆದು ಸಾರ್ವಜನಿಕರಿಗೆ ಅಗತ್ಯ ಮಾಹಿತಿಯನ್ನು ನೀಡಲಾಗುವುದು ಎಂದು ಹೇಳಿದರು.
ಈ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಕಳೆದ 59 ವರ್ಷಗಳಿಂದಲೂ ನಡೆಯುತ್ತಾ ಬಂದಿದ್ದು, ವಸ್ತು ಪ್ರದರ್ಶನವು 60ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ ಎಂದರು.

ಈ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆಯುವವರಿಗೆ ಪ್ರತಿನಿತ್ಯ ಊಟದ ವ್ಯವಸ್ಥೆ ಇರುತ್ತದೆ ಹಾಗೂ ಪ್ರತಿನಿತ್ಯ 16 ದಿನ ಸಂಜೆ ಪೌರಾಣಿಕ ನಾಟಕ ಪ್ರದರ್ಶನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.
ವಸ್ತು ಪ್ರದರ್ಶನಕ್ಕೆ ಚಾಲನೆ
ಫೆ.26 ರಂದು ಸಂಜೆ 7 ಗಂಟೆಗೆ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಯವರ ದಿವ್ಯಾಶೀರ್ವಾದದೊಂದಿಗೆ ಹಾಗೂ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನದ ಉದ್ಘಾಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅಧ್ಯಕ್ಷತೆ ವಹಿಸುವರು, ವಸ್ತು ಪ್ರದರ್ಶನವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಲಿದ್ದಾರೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆಯನ್ನು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನೆರವೇರಿಸುವರು, ಮುಖ್ಯ ಅತಿಥಿಗಳಾಗಿ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್, ಸಹಕಾರ ಸಚಿವ ಕೆ.ಎನ್.ರಾಜಣ್ಣ, ಸಂಸದ ಜಿ.ಎಸ್.ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭಕಲ್ಯಾಣ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್.ಕೆ.ವಿ, ಮಹಾನಗರ ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

16 ದಿನಗಳ ಕಾಲ ನಡೆಯಲಿರುವ ಈ ಕೃಷಿ ಮತ್ತು ವಸ್ತು ಪ್ರದರ್ಶನದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

Get real time updates directly on you device, subscribe now.

Comments are closed.

error: Content is protected !!