ಪಾವಗಡ: ವೈದ್ಯರ ನಿರ್ಲಕ್ಷ್ಯದಿಂದಾಗಿ ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿ ಮತ್ತು ತಪ್ಪಿತಸ್ಥ ವೈದ್ಯರನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿ ಕುಟುಂಬಸ್ಥರು ಸೋಮವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ತಾಲೂಕಿನ ರಾಜವಂತಿ ಗ್ರಾಮದ ಅಂಜಲಿ (20), ಬ್ಯಾಡನೂರು ಗ್ರಾಮದ ನರಸಮ್ಮ (40) ಮತ್ತು ವೀರ್ಲಿಗೊಂದಿ ಗ್ರಾಮದ ಅನಿತ (30) ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಪಟ್ಟು ಮೃತಪಟ್ಟ ಬಾಣಂತಿಯರಾಗಿದ್ದಾರೆ, ಫೆ.22 ರಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಟ್ಟು ಏಳು ಮಹಿಳೆಯರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಆ ಪೈಕಿ ಒಬ್ಬರು ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ, ಮತ್ತಿಬ್ಬರು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಾಣಿ ವಿಲಾಸ್ ಆಸ್ಪತ್ರೆಗೆ ತೆರಳಿದ್ದಾಗ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಶಸ್ತ್ರಚಿಕಿತ್ಸೆ ವೇಳೆ ಡಾ.ಪೂಜಾ ಕರ್ತಯ್ಯ ನಿರ್ವಹಿಸುತ್ತಿದ್ದರು, ಚಿಕಿತ್ಸೆಯ ನಂತರ ಹೊಟ್ಟೆ ಉರಿ, ನೋವಿನಿಂದ ರೋಗಿಗಳು ನರಳುತ್ತಿದ್ದರು, ವೈದ್ಯರಿಗೆ ತಿಳಿಸುವಂತೆ ಶುಶ್ರೂಶಕಿಯರಿಗೆ ತಿಳಿಸಿದರೂ ಅವರು ತಿಳಿಸಲಿಲ್ಲ, ನಂತರ ನಾವೇ ಹೋಗಿ ವೈದ್ಯರಿಗೆ ತಿಳಿಸಿದಾಗ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ತೆರಳಲು ಸೂಚಿಸಿದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬಾಣಂತಿಯರ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು, ಆಸ್ಪತ್ರೆ ಮುಂಭಾಗದಲ್ಲಿ ಸಾವಿರಾರು ಜನರು ಜಮಾಯಿಸಿ ಮೃತ ಬಾಣಂತಿಯರ ಸಾವಿಗೆ ನ್ಯಾಯ ಕಲ್ಪಿಸುವಂತೆ ಹಾಗೂ ನಿರ್ಲಕ್ಷ್ಯ ತೋರಿರುವ ವೈದ್ಯರನ್ನು ಕೂಡಲೆ ಅಮಾನತು ಮಾಡುವಂತೆ ಘೋಷಣೆ ಕೂಗುತ್ತಾ ಸಾರ್ವಜನಿಕರು ಪ್ರತಿಭಟಿಸಿದರು.
ಪರಿಸ್ಥಿತಿಯ ಅರಿವಿದ್ದ ಪೊಲೀಸರು ಪಾವಗಡ, ಅರಸೀಕರೆ ಮತ್ತು ವೈ.ಎನ್.ಹೊಸಕೋಟೆ ಠಾಣೆಗಳ ಪೊಲೀಸ್ ಸಿಬ್ಬಂದಿ ಬಳಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಂದೋಬಸ್ತ್ ನಿರ್ವಹಿಸಿದರು.
ಸ್ಥಳಕ್ಕೆ ವೈದ್ಯಾಧಿಕಾರಿಗಳು ಬರಲೇಬೇಕು ಎಂದು ಪ್ರತಿಭಟನಾಕಾರರು ಹಠ ಹಿಡಿದ ಕಾರಣ ಟಿಹೆಚ್ಒ ಡಾ.ತಿರುಪತಯ್ಯ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ.ಕಿರಣ್ ಸ್ಥಳಕ್ಕೆ ಆಗಮಿಸಿ ಘಟನೆ ಕುರಿತು ಬೇಸರ ವ್ಯಕ್ತಪಡಿಸಿದರು, ಶಸ್ತ್ರ ಚಿಕಿತ್ಸೆ ವೇಳೆ ಯಾವುದರಿಂದ ಸಾವು ಸಂಭವಿಸಿದೆ ಎಂಬುದನ್ನು ತಿಳಿಯಲು ಮರಣೋತ್ತ ಪರೀಕ್ಷೆ ಹಾಗೂ ಲ್ಯಾಬ್ ನ ಫಲಿತಾಂಶ ಬಂದ ನಂತರ ತಿಳಿದು ಬರಲಿದೆ ಎಂದರು.
ಸಮಾಜ ಸೇವಕಿ ಅನ್ನಪೂರ್ಣಮ್ಮ ಮಾತನಾಡಿ, ತಾಲೂಕಿನಲ್ಲಿ ವೈದ್ಯರ ನಿರ್ಲಕ್ಷದಿಂಗಾಗಿ ಇಂತಹ ಘಟನೆಗಳು ಪದೇ ಪದೇ ಮರು ಕಳಿಸುತ್ತಿವೆ, ಆಸ್ಪತ್ರೆಯಲ್ಲಿ ಬ್ಯಾಂಡೇಜ್ ಬಟ್ಟೆಯಿಂದ ಹಿಡಿದು ಎಕ್ಸ್ರೇ ಫಿಲ್ ವರೆಗೂ ಜನರು ಖಾಸಗಿಯಾಗಿ ಕೊಂಡುಕೊಳ್ಳಲು ವೈದ್ಯರು ಬರೆಯುತ್ತಾರೆ, ಬಡವರು ಬಂದರೆ ನಿರ್ಲಕ್ಷ ತೋರುವ ನೀವು ಬೇಕಾದವರು ಬಂದಾಗ ಎಲ್ಲಾ ವ್ಯವಸ್ಥೆ ಮಾಡುತ್ತೀರ ಎಂದು ವೈದ್ಯರಿಗೆ ಛೀಮಾರಿ ಹಾಕಿದರು.
ಈ ವೇಳೆ ಉಪ ತಹಶೀಲ್ದಾರ್ ಎನ್.ಮೂರ್ತಿ, ಪೊಲೀಸ್ ಸಿಬ್ಬಂದಿ ಹಾಗೂ ವೈದ್ಯಕಿಯ ಸಿಬ್ಬಂದಿ ಇದ್ದರು.
Comments are closed.