ತುಮಕೂರು: ಎತ್ತಿನ ಹೊಳೆ ಯೋಜನೆಗೆ ಸಂಬಂಧಿಸಿದಂತೆ ಸ್ವಾಧೀನ ಪಡಿಸಿಕೊಂಡ ಭೂ ಮಾಲೀಕರಿಗೆ ಶೀಘ್ರ ಪರಿಹಾರ ಮೊತ್ತ ವಿತರಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿ, ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರದಿಂದ ಬಿಡುಗಡೆಯಾಗಿರುವ ಪರಿಹಾರ ಹಣವನ್ನು ಭೂ ಮಾಲೀಕರಿಗೆ ಕೂಡಲೇ ವಿತರಿಸಬೇಕು, ಖಾತೆಯಲ್ಲಿ 113.36 ಕೋಟಿ ರೂ. ಪರಿಹಾರ ಹಣವಿದ್ದರೂ ವಿತರಣೆಗೆ ವಿಳಂಬವೇಕೆ? ಸಂಬಂಧಿಸಿದ ಭೂಸ್ವಾಧೀನಾಧಿಕಾರಿಗಳು ಬುಧವಾರ ತಿಪಟೂರು ತಾಲೂಕಿನ ಹಳೆಪಾಳ್ಯ ಹಾಗೂ ಈಡೇನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಸಂಬಂಧಿಸಿದ ಭೂ ಮಾಲೀಕರಿಂದ ಅಗತ್ಯ ದಾಖಲೆ ಪಡೆದು ಪರಿಹಾರ ವಿತರಿಸಲು ಕ್ರಮ ವಹಿಸುವಂತೆ ಸೂಚಿಸಿದರು.
ವಸಂತನರಸಾಪುರ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ 3126 ಎಕರೆ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆಗೆ ವಾರದೊಳಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕೆಂದು ಸೂಚಿಸಿದರು.
ಎತ್ತಿನಹೊಳೆ ಯೋಜನೆಗೆ ವಿಶೇಷ ಭೂಸ್ವಾಧೀನಾಧಿಕಾರಿ ಜಿ.ಎನ್. ಮಂಜುನಾಥ ಮಾತನಾಡಿ, ಸ್ವಾಧೀನ ಪಡಿಸಿಕೊಂಡ ಭೂ ಮಾಲೀಕರಿಗೆ ಪರಿಹಾರ ನೀಡುವ ಸಂಬಂಧ ಈಗಾಗಲೇ ನೋಟೀಸ್ ನೀಡಲಾಗಿದ್ದು, ಭೂ ಮಾಲೀಕರು ಅಗತ್ಯ ದಾಖಲೆಗಳನ್ನು ಸಲ್ಲಿಸದೇ ಇರುವ ಕಾರಣ ಪರಿಹಾರ ಹಣ ವಿತರಣೆಯಲ್ಲಿ ವಿಳಂಬವಾಗಿದೆ, ಅಗತ್ಯ ದಾಖಲೆಗಳು ಸಲ್ಲಿಕೆಯಾದ ನಂತರ ಪರಿಹಾರ ಹಣವನ್ನು ಭೂಮಾಲೀಕರಿಗೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ಯೋಜನೆಗೆ ಸ್ವಾಧೀನ ಪಡಿಸಿಕೊಂಡ ಭೂ ಮಾಲೀಕರಿಂದ ವಂಶವೃಕ್ಷ, ಭೂ ಹಿಡುವಳಿ ಪತ್ರ, ಋಣಭಾರ ರಾಹಿತ್ಯ ದೃಢೀಕರಣ ಪತ್ರ, ಪಹಣಿ, ಆಧಾರ್, ಮ್ಯುಟೇಷನ್, ಬ್ಯಾಂಕ್ ಖಾತೆ ವಿವರ, ಮತ್ತಿತರ ದಾಖಲೆಗಳನ್ನು ಸಂಗ್ರಹಿಸಿ ಪರಿಶೀಲಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, ವಿಶೇಷ ಭೂ ಸ್ವಾಧೀನಾಧಿಕಾರಿ ಸೋಮಪ್ಪ ಕಡಕೋಳ ಸೇರಿದಂತೆ ಮತ್ತಿತರ ಅಧಿಕಾರಿಗಳು ಹಾಜರಿದ್ದರು.
Comments are closed.