ವೈಜ್ಞಾನಿಕತೆ ಅರಿತು ಮೌಢ್ಯ ದೂರ ಮಾಡಿ

25

Get real time updates directly on you device, subscribe now.


ಹುಳಿಯಾರು: ಮನುಷ್ಯ ಇಂದು ಚಂದ್ರಲೋಕಕ್ಕೆ ಹೋಗಿ ಬಂದರೂ ಮೂಢನಂಬಿಕೆ, ಕಂದಾಚಾರ ಬಿಡಲೊಲ್ಲ, ಬೆರಳ ತುದಿಯಲ್ಲಿ ಪ್ರಪಂಚದ ಆಗು ಹೋಗುಗಳನ್ನು ದೃಶ್ಯ ಸಹಿತ ತಿಳಿಯುತ್ತಿದ್ದರೂ ಮಾಟ, ಮಂತ್ರಗಳ ನಂಬದಿರಲಾರ ಎಂದು ಜಿಲ್ಲಾ ವೈಜ್ಞಾನಿಕ ಸಮ್ಮೇಳನದ ಸರ್ವ ಸಮ್ಮೇಳನಾಧ್ಯಕ್ಷ ಡಾ.ಜಿ.ಎಸ್.ಶ್ರೀಧರ್ ಬೇಸರ ವ್ಯಕ್ತಪಡಿಸಿದರು.

ಹುಳಿಯಾರು ಸಮೀಪದ ದೊಡ್ಡಎಣ್ಣೇಗೆರೆಯಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಕರ್ನಾಟಕ ಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ವಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ತುಮಕೂರು ಜಿಲ್ಲೆಯ ಪ್ರಪ್ರಥಮ ವೈಜ್ಞಾನಿಕ ಸಮ್ಮೇಳನದಲ್ಲಿ ಮಾತನಾಡಿದರು.
ದೇವರ ಹೆಸರಿನಲ್ಲಿ ಬಲಿ, ಮಾಟ, ಮಂತ್ರ, ಗ್ರಹಗಳ ಕಾಟ ಹೀಗೆ ಮುಗ್ಧ ಜನರನ್ನು ವಂಚಿಸಿ ಹಣ, ಒಡವೆ, ಆಸ್ತಿ ಕಬಳಿಸುವ ಪ್ರಕರಣಗಳು ನಡೆಯುತ್ತವೇ ಇವೆ, ಅದರಲ್ಲೂ ವಿದ್ಯಾವಂತರು, ಶ್ರೀಮಂತರು, ಅಧಿಕಾರಿಗಳು, ರಾಜಕಾರಣಿಗಳೂ ಸಹ ಇಂತಹ ದುಷ್ಟರ ಬಲೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ, ಇಂತಹ ಅನಾರೋಗ್ಯಕರ ಪರಿಸರದಿಂದ ಆಚೆ ಬರಲು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದೊಂದೆ ದಾರಿಯಾಗಿದೆ, ಎಲ್ಲರೂ ಪ್ರಶ್ನಿಸಿ ಒಪ್ಪಿಕೊಳ್ಳುವ ಮನೋಭಾವ ಬೆಳೆಯಬೇಕು, ಈ ನಿಟ್ಟಿನಲ್ಲಿ ಡಾ.ಹುಲಿಕಲ್ ನಟರಾಜ್ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ಮೂಲಕ ಹಳ್ಳಿಹಳ್ಳಿಗಳಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸುತ್ತಿರುವುದು ಅಭಿನಂದನಾರ್ಹ ಎಂದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ.ಹುಲಿಕಲ್ ನಟರಾಜ್ ಮಾತನಾಡಿ, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ದೇವರು ಬರೋದು, ಮಾಟಮಂತ್ರ ಮಾಡೋರು ಅದರಲ್ಲೂ ನಿಧಿ ತೆಗೆಯುವವರು ಹೆಚ್ಚಾಗಿದ್ದಾರೆ, ಅವರನ್ನು ಹಿಡಿದು ಬಯಲು ಮಾಡಬೇಕಿದೆ, ಮಕ್ಕಳಲ್ಲಿ ವೈಜ್ಞಾನಿಕ ಪ್ರಜ್ಞೆ ಮೂಡಿಸಲು ಪಿಯುಸಿ ಮತ್ತು ಪದವಿ ಸೈನ್ಸ್ ವಿದ್ಯಾರ್ಥಿಗಳಿಗೆ ಸ್ಪರ್ಧೆ ಆಯೋಜಿಸಿ ಪ್ರಥಮ 50 ಸಾವಿರ, ದ್ವಿತೀಯಾ 30 ಸಾವಿರ, ತೃತೀಯ 20 ಸಾವಿರ ರೂ ನಗದು ಸಹಿತ ಡಾ.ಜಿಎಸ್ಎಸ್ ವೈಜ್ಞಾನಿಕ ಪ್ರಶಸ್ತಿಯನ್ನು ಡಾ.ಶ್ರೀಧರ್ ಅವರ ಪ್ರಾಯೋಜಕತ್ವದಲ್ಲಿ ನೀಡಲಾಗುವುದು ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಚಿ.ನಿ.ಪುರುಷೋತ್ತಮ್, ಸಾಹಿತಿ ಬಿಳಿಗೆರೆ ಕೃಷ್ಣಮೂರ್ತಿ, ಲೇಖಕ ಡಾ.ನಾಗಭೂಷಣ್ ಬಗ್ಗನಡು, ಪತ್ರಕರ್ತ ತಿಪಟೂರು ಕೃಷ್ಣ, ತಾಲೂಕು ಕಸಾಪ ಅಧ್ಯಕ್ಷ ರವಿಕುಮಾರ್ ಇತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!