ಕಸಾಪ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆ ಯಶಸ್ವಿ

193

Get real time updates directly on you device, subscribe now.

ತುಮಕೂರು: ಇದೇ ಪ್ರಥಮ ಬಾರಿಗೆ ತುಮಕೂರು ಕನ್ನಡ ಸಾಹಿತ್ಯ ಪರಿಷತ್ತಿನ ಫಿಲ್ಮಂ ಸೊಸೈಟಿ ಆಯೋಜಿಸಿದ್ದ ರಾಜ್ಯಮಟ್ಟದ ಕಿರುಚಿತ್ರಗಳ ಸ್ಪರ್ಧೆಯಲ್ಲಿ 30ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದು, ಮೊದಲನೇ ಬಹುಮಾನವನ್ನು ಸಂಪರ್ಕಿಸಿ ಕಿರುಚಿತ್ರ, ಎರಡನೇ ಬಹುಮಾನವನ್ನು ಬೆಳ್ಳಿಪರದೆ ಹಾಗೂ ಮೂರನೇ ಬಹುಮಾನವನ್ನು ಎಂಟು ನೂರು ಚಿತ್ರಗಳು ಪಡೆದಿವೆ.
ಸಾಹಿತ್ಯ ಮತ್ತು ಚಲನಚಿತ್ರವನ್ನು ಒಗ್ಗೂಡಿಸುವ ಮೊದಲ ಪ್ರಯತ್ನ ಇದಾಗಿದ್ದು, ತುಮಕೂರು ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಹಾಗೂ ಕಸಾಪ ಪಿಲ್ಮಂ ಸೊಸೈಟಿ ಸಂಚಾಲಕರಾದ ರಾಣಿ ಚಂದ್ರಶೇಖರ್ ಮತ್ತು ಸದಾಶಿವ ಮಂಗಳೂರು ಅವರ ನೇತೃತ್ವದಲ್ಲಿ ನಡೆದ ಈ ಸ್ಪರ್ಧೆ ಯುವ ನಿರ್ದೇಶಕರಿಗೆ ವೇದಿಕೆಯೊಂದನ್ನು ಹುಟ್ಟು ಹಾಕಿದೆ.
ಕನ್ನಡ ಭವನದಲ್ಲಿ ನಡೆದ ರಾಜ್ಯಮಟ್ಟದ ಕಿರುಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಮೇಯರ್ ಬಿ.ಜಿ.ಕೃಷ್ಣಪ್ಪ, ತುಮಕೂರು ಜಿಲ್ಲೆ ಕನ್ನಡ ಚಿತ್ರರಂಗ ಹಾಗೂ ನಾಟಕರಂಗಕ್ಕೆ ಹಲವಾರು ಕಲಾವಿದರನ್ನು ಕೊಡುಗೆ ನೀಡಿದೆ, ಗುಬ್ಬಿ ಕಂಪನಿಯಿಂದ ಚಿತ್ರರಂಗಕ್ಕೆ ಬಂದ ಡಾ.ರಾಜ್, ಹಾಸ್ಯ ಚಕ್ರವರ್ತಿ ನರಸಿಂಹರಾಜು, ಮಂಜುಳ, ಜಯಶ್ರೀ ಸೇರಿದಂತೆ ಹಲವಾರು ಪ್ರತಿಭೆಗಳು ಚಿತ್ರರಂಗದಲ್ಲಿ ಉತ್ತಮ ಹೆಸರು ಮಾಡಿವೆ. ತುಮಕೂರಿನಲ್ಲಿ ಹೆಚ್ಎಂಟಿ ಆರಂಭವಾದಾಗ, ಕುಪ್ಪೂರು ಕೃಷ್ಣಮೂರ್ತಿ ಅವರ ನೇತೃತ್ವದಲ್ಲಿ ಹೆಚ್ಎಂಟಿ ಲಲಿತಾ ಕಲಾ ಸಂಘ ಕಟ್ಟಿ ಅನೇಕ ಕಲಾವಿದರನ್ನು ಹುಟ್ಟು ಹಾಕಿದರು. ಅನೇಕರು ಸಿನಿಮಾ ನಟರಾಗಿ ಪದೋನ್ನತ್ತಿ ಪಡೆದರು, ಸಂಗೀತ ನಿರ್ದೇಶಕರು, ತಂತ್ರಜ್ಞರನ್ನು ಪರಿಚಯಿಸಿದರು. ನಾವು ಹೆಚ್ಎಂಟಿ ಕಲಾವಿದನಾಗಿ ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದು, ನನ್ನಲ್ಲಿನ ಕಲಾವಿದ ಪುಟಿದೇಳಲು ಹೆಚ್ಎಂಟಿ ಕಾರಣ ಎಂದರು.
ಪಾಲಿಕೆ ಸದಸ್ಯ ಮಲ್ಲಿಕಾರ್ಜುನಯ್ಯ ಮಾತನಾಡಿ, ಇಂದು ನಡೆದ ಕಿರುಚಿತ್ರ ಸ್ಪರ್ಧೆ ಅನೇಕ ಉದಯೋನ್ಮುಖ ಕಲಾವಿದರು, ನಿರ್ದೆಶಕರಿಗೆ ವೇದಿಕೆಯಾಗಿದೆ, ನಿರಂತರ ಪ್ರಯತ್ನವಿದ್ದರೆ ಯಶಸ್ಸು ಸಾಧ್ಯ ಈ ನಿಟ್ಟಿನಲ್ಲಿ ಎಲ್ಲರೂ ದುಡಿಯಲು ಎಂದು ಶುಭಾಹಾರೈಸಿದರು.
ಕಿರುಚಿತ್ರ ನಿರ್ದೇಶಕ ಸುರಭಿ ರೇಣುಕಾ ಮಾತನಾಡಿ, ಚಿತ್ರನಿರ್ದೇಶಕರು, ಕಲಾವಿದರಿಗೆ ಪ್ರತಿ ಹಂತದಲ್ಲಿಯೂ ಕಲಿಯುವಂತದ್ದು ಇದ್ದೇ ಇರುತ್ತದೆ, ಚಿತ್ರದ ತಾಂತ್ರಿಕತೆ, ಕಥಾ ವಸ್ತು ಎಷ್ಟು ಮುಖ್ಯವೋ ಅದೇ ರೀತಿ ಸಮಯವೂ ಮುಖ್ಯ, 20 ನಿಮಿಷದ ಸಿನಿಮಾ ಅಂದಾಗ ಅಷ್ಟರಲ್ಲಿಯೇ ಪ್ರೇಕ್ಷಕರಿಗೆ ಏನು ಹೇಳಬೇಕೋ ಅದನ್ನು ಹೇಳಿದರೆ ಒಳ್ಳೆಯದು, ಈ ನಿಟ್ಟಿನಲ್ಲಿ ಹಲವು ನಿರ್ದೇಶಕರು ಪ್ರಯತ್ನಿಸಿದ್ದಾರೆ, ನಾವು ಕೂಡ ಅಷ್ಟೇ ಪ್ರಾಮಾಣಿಕವಾಗಿ ಚಿತ್ರಗಳಿಗೆ ಅಂಕ ನೀಡಿದ್ದೇವೆ, ಗೆಲುವು ಸೋಲಿಗಿಂತ ಇಂತಹ ಸ್ಪರ್ಧೆಗಳು ನಮ್ಮಲ್ಲಿನ ತಪ್ಪುಗಳನ್ನು ತಿದ್ದಿ ಮತ್ತಷ್ಟು ಪರಿಪಕ್ವಗೊಳ್ಳಲು ಸಹಾಯವಾಗುತ್ತವೆ ಎಂದರು.
ಚಲನಚಿತ್ರ ನಿರ್ದೇಶಕ ನರೇಶ್ಕುಮಾರ್ ಹೆಚ್.ಎನ್. ಮಾತನಾಡಿ, ನಾನು 12 ವರ್ಷದಿಂದ ಚಿತ್ರರಂಗದಲ್ಲಿ ಕೆಲಸ ಮಾಡು ತ್ತಿದ್ದು, ಹಲವಾರು ಸಿನಿಮಾ ನಿರ್ದೇಶಿಸಿದ್ದೇನೆ, ಪ್ರಶಸ್ತಿಯೇ ಮುಖ್ಯವಲ್ಲ, ಪ್ರಯತ್ನ ಮುಖ್ಯ, ಸ್ಪರ್ಧೆಯಲ್ಲಿ ಭಾಗವಹಿಸಿರುವ 30 ಚಿತ್ರಗಳ ನಿರ್ದೇಶಕರಿಗೂ ಚಿತ್ರರಂಗದಲ್ಲಿ ಬೆಳೆಯಲು ಉತ್ತಮ ಅವಕಾಶವಿದೆ, ಡೆಡಿಕೇಷನ್ ಇದ್ದರೆ ಉತ್ತಮ ನಿರ್ದೇಶಕರಾಗಿ ಗುರುತಿಸಿಕೊಳ್ಳಬಹುದು ಎಂದು ಶುಭಾಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಸಾಹಿತ್ಯ ಪರಿಷತ್ ಎಂದರೆ ಕೇವಲ ಒಂದಕ್ಕೆ ಸಿಮೀತವಲ್ಲ, ಸಾಂಸ್ಕೃತಿಕವಾಗಿ ಕಲೆ, ಸಂಗೀತವನ್ನು ಸಾಹಿತ್ಯದೊಂದಿಗೆ ಬೆಳೆಯಬೇಕೆಂಬ ಉದ್ದೇಶದಿಂದ ಫಿಲ್ಮಂ ಸೊಸೈಟಿ ತೆರೆಯುವ ಆಲೋಚನೆ ಇದೆ, ಇದರ ಭಾಗವಾಗಿಯೇ ಕಿರುಚಿತ್ರ ಸ್ಪರ್ಧೆ, ಕಳೆದ ವರ್ಷವೇ ಈ ಸ್ಪರ್ಧೆ ನಡೆಯಬೇಕಿತ್ತು, ಕೊರೊನಾದಿಂದ ಇಂದು ನಡೆಯುತ್ತಿದೆ, ಭಾಗವಹಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.
ರಾಜ್ಯಮಟ್ಟದ ಕಿರು ಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ 30 ಕಿರುಚಿತ್ರಗಳಲ್ಲಿ ಪ್ರಥಮ ಸ್ಥಾನವನ್ನು ಸಂಪರ್ಕಿಸಿ, ಎರಡನೇ ಬಹುಮಾನ ಬೆಳ್ಳಿಪರದೆ, ಮೂರನೇ ಬಹುಮಾನ ಎಂಟು ನೂರು ಚಿತ್ರಗಳು ಪಡೆದರೆ, ಉತ್ತಮ ನಟ ಸಿದ್ದಾರ್ಥ, ಚಿತ್ರ ಕಾಲ್ಗೆಜ್ಜೆ, ಛಾಯಾಗ್ರಾಹಕ ಸೂರ್ಯದೇವ್, ಡ್ರಸ್ನೊಳಗಿನ ಅಡ್ರಸ್ ಉತ್ತಮ ಕಥೆ, ಸುಶ್ಮಿತಾ ಉತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು.
ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಫಿಲ್ಮಂ ಸೊಸೈಟಿ ಸಂಚಾಲಕಿ ರಾಣಿ ಚಂದ್ರಶೇಖರ್, ಸದಾಶಿವ ಮಂಗಳೂರು, ಸಾಹಿತ್ಯ ಪರಿಷತ್ತನ ಗೌರವ ಕಾರ್ಯದರ್ಶಿ ಗೋವಿಂದಯ್ಯ, ರಾಕ್ಲೈನ್ ರವಿಕುಮಾರ್, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು, ಡಾ.ಅರುಂಧತಿ, ಲಲಿತ ಮಲ್ಲಪ್ಪ, ಡಿಸಿಸಿ ಬ್ಯಾಂಕ್ ಪ್ರಕಾಶ್, ತಂತ್ರಜ್ಞರಾದ ಆದರ್ಶ ಮತ್ತಿತರರು ಇದ್ದರು.

Get real time updates directly on you device, subscribe now.

Comments are closed.

error: Content is protected !!