ಎಕ್ಸ್ಪ್ರೆಸ್ ಕೆನಾಲ್ಗೆ ನಮ್ಮ ವಿರೋಧವಿದೆ: ಮಾಧು

46

Get real time updates directly on you device, subscribe now.


ತುಮಕೂರು: ಕೇವಲ ಒಂದು ಕ್ಷೇತ್ರ ಗಮನದಲ್ಲಿಟ್ಟುಕೊಂಡು ಇಡೀ ಜಿಲ್ಲೆಗೆ ಅನ್ಯಾಯ ಮಾಡಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವುದಕ್ಕೆ ನಮ್ಮ ವಿರೋಧವಿದೆ ಎಂದು ಬಿಜೆಪಿ ಮುಖಂಡ, ಸಣ್ಣ ನೀರಾವರಿ ಇಲಾಖೆಯ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಬ್ಬಿಯಿಂದ ಬೈಪಾಸ್ ಮಾಡಿ ಎಕ್ಸ್ಪ್ರೆಸ್ ಕೆನಾಲ್ ಮೂಲಕ ನೀರು ತೆಗೆದುಕೊಂಡು ಹೋಗುವುದರಿಂದ ಜಿಲ್ಲೆಯ ಇತರೆ ತಾಲೂಕುಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗಲಿದೆ, ಹಾಲಿ ಇರುವ ನಾಲೆಯ ಮೂಲಕ ನಿಗದಿಪಡಿಸಿರುವ ನೀರು ತೆಗೆದುಕೊಂಡು ಹೋಗಲು ನಮ್ಮ ತರಕಾರು ಇಲ್ಲ ಎಂದರು.

ಈ ಹಿಂದೆ ನಾನು ಜಿಲ್ಲಾ ಉಸ್ತುವಾರಿಯ ಜೊತೆಗೆ, ಸಣ್ಣ ನೀರಾವರಿ ಸಚಿವನಾಗಿದ್ದ ಸಂದರ್ಭದಲ್ಲಿ ಮೇಲ್ಮನೆಯಲ್ಲಿ ಅನುಮೋದನೆಯಾಗಿದ್ದ ಎಕ್ಸ್ಪ್ರೆಸ್ ಕೆನಾಲ್ ಯೋಜನೆಗೆ ಪ್ರತಿ ಪಕ್ಷ ಮತ್ತು ಆಡಳಿತ ಪಕ್ಷದ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ಅಲ್ಲದೆ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯ ಒಕ್ಕೋರಲ ನಿರ್ಣಯದಂತೆ ಕುಣಿಗಲ್ ಮತ್ತು ಮಾಗಡಿ ತಾಲೂಕಿಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್ಪ್ರೆಸ್ ಕೆನಾಲ್ ಯೋಜನೆ ರದ್ದು ಪಡಿಸಲಾಗಿತ್ತು, ಆದರೆ ಹೊಸ ಸರಕಾರ ಬಂದ ನಂತರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಂಸದ ಡಿ.ಕೆ.ಸುರೇಶ್ ಹಾಗೂ ಕುಣಿಗಲ್ ಕ್ಷೇತ್ರದ ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರು ಸರ್ವಾಧಿಕಾರಿ ಧೋರಣೆಯಿಂದ ಜಿಲ್ಲೆಯ ಇತರೆ ತಾಲೂಕುಗಳಿಗೆ ಅನ್ಯಾಯವಾಗುವುದನ್ನು ಲಕ್ಕಿಸದೆ ಯೋಜನೆ ಕೈಗೆತ್ತಿಕೊಳ್ಳಲು ಮುಂದಾಗಿದ್ದಾರೆ, ಒಂದು ವೇಳೆ ನಮ್ಮ ವಿರೋಧದ ನಡುವೆಯೂ ಯೋಜನೆ ಕೈಗೆತ್ತಿಕೊಂಡರೆ ಅನಿವಾರ್ಯವಾಗಿ ನ್ಯಾಯಾಂಗ ಹೋರಾಟಕ್ಕೆ ಮುಂದಾಗುವುದಾಗಿ ಜೆ.ಸಿ.ಮಾಧುಸ್ವಾಮಿ ನುಡಿದರು.

ಹೇಮಾವತಿ ಯೋಜನೆಯಿಂದ ಜಿಲ್ಲೆಗೆ ಹಂಚಿಕೆಯಾಗಿರುವ 24.8 ಟಿಎಂಸಿ ನೀರಿನ ಸಂಪೂರ್ಣ ಬಳಕೆಗೆ ಯೋಜನೆ ರೂಪಿಸಿದ್ದು, ಹೆಚ್ಚುವರಿ ನೀರಿಲ್ಲ, ಹಾಗಿದ್ದ ಮೇಲೆ ಯಾವ ಆಧಾರದಲ್ಲಿ ಈ ಯೋಜನೆ ರೂಪಿಸಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿದೆ, ಹಲವಾರು ಎಂವಿಸಿ (ಬಹುಗ್ರಾಮ ಕುಡಿಯುವ ನೀರಿನ ಯೋಜನೆ) ಗಳು ನೀರಿನ ಲಭ್ಯತೆ ಇಲ್ಲದೆ ಸೊರಗುತ್ತಿವೆ, ಬೆಳ್ಳಾವಿ ಏತ ನೀರಾವರಿ ಇನ್ನೂ ಆರಂಭವೇ ಆಗಿಲ್ಲ, ಇಂತಹ ಸಂದರ್ಭದಲ್ಲಿ ಮಧ್ಯದಿಂದ ನಾವು ನೀರು ತೆಗೆದುಕೊಂಡು ಹೋಗುತ್ತವೆ ಎಂದರೆ ಇದನ್ನು ಜಿಲ್ಲೆಯ ಪ್ರತಿಯೊಬ್ಬರು ಪಕ್ಷ ಭೇದ ಮರೆತು ವಿರೋಧಿಸಬೇಕಿದೆ, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಾ.ಜಿ.ಪರಮೇಶ್ವರ್ ಅವರಿಗೂ ಈ ಯೋಜನೆಯ ಬಗ್ಗೆ ಸಹಮತವಿಲ್ಲ, ಆದರೆ ಅವರ ಧ್ವನಿಗೆ ಶಕ್ತಿ ಸಾಲದಾಗಿದೆ, ಹೇಮಾವತಿ ನೀರು ನಂಬಿಯೇ ಜಿಲ್ಲೆಯಲ್ಲಿ ನೂರಾರು ಕೋಟಿ ರೂ. ಖರ್ಚು ಮಾಡಿ ಜಲಜೀವನ್ ಮೀಷನ್ ಅಡಿಯಲ್ಲಿ ಕುಡಿಯುವ ನೀರಿನ ಯೋಜನೆ ರೂಪಿಸಲಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕುಣಿಗಲ್ ತಾಲೂಕಿಗೆ ಹೇಮಾವತಿ ಯೋಜನೆಯಲ್ಲಿ 2 ಟಿಎಂಸಿ ನೀರು ಹಂಚಿಕೆಯಾಗಿದೆ, ಇದರಲ್ಲಿ ಕುಣಿಗಲ್ ದೊಡ್ಡ ಕೆರೆ, ಮಾರ್ಕೋನಹಳ್ಳಿ ಜಲಾಶಯ ಹಾಗೂ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲಾಗುತ್ತಿದೆ, ನಮಗೆ ರಾಜಕೀಯ ಶಕ್ತಿ ಇದೆ ಎಂದು ತಮ್ಮ ಸ್ವಾರ್ಥಕ್ಕೆ ಇಡೀ ಜಿಲ್ಲೆಗೆ ಮೋಸ ಮಾಡುವುದು ಸರಿಯಲ್ಲ, ಸಾಯುವವರೆಗೂ ರಾಜಕಾರಣ ಮಾಡಲು ಸಾಧ್ಯವಿಲ್ಲ, ಇದನ್ನು ಅಧಿಕಾರದಲ್ಲಿರುವ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ನಾನು ಕೂಡ ಬಿಜೆಪಿ ಟಿಕೇಟ್ ಆಕಾಂಕ್ಷಿ, ಆದರೆ ಟಿಕೆಟ್ಗಾಗಿ ಸುಬ್ರಮಣ್ಯ ಸ್ವಾಮಿಯ ಹಾಗೆ ದೇಶ ಸುತ್ತಲ್ಲ, ಗಣಪತಿಯ ಹಾಗೆಯೇ ಕೆಲಸ ಮಾಡುತ್ತೇನೆ, ಜಿಲ್ಲೆಯ ಇತಿಹಾಸದಲ್ಲಿಯೇ ಹೊರಗಿನವರು ಬಂದು ಗೆಲುವು ಸಾಧಿಸಿದ ಉದಾಹರಣೆ ಇಲ್ಲ, ಕೊದಂಡರಾಮಯ್ಯ, ಎ.ಕೃಷ್ಣಪ್ಪ, ದೇವೇಗೌಡರೇ ನಮಗೆ ಸಾಕ್ಷಿ, ಗೆಲ್ಲಬೇಕೆಂಬ ಕಾರಣಕ್ಕೆ ಹೊರಗಿನವರಿಗೆ ಟಿಕೆಟ್ ನೀಡಿದರೆ ಸ್ಥಳೀಯ ನಾಯಕತ್ವ ಬೆಳೆಯುವುದು ಹೇಗೆ?, ರಾಜಕೀಯ ದೃವಿಕರಣ ಎಂಬುದು 1969ರಲ್ಲೆ ಇಂದಿರಾ ಕಾಂಗ್ರೆಸ್, ರಾಷ್ಟ್ರೀಯ ಕಾಂಗ್ರೆಸ್ ಆರಂಭವಾದ ದಿನದಿಂದಲೇ ಆರಂಭಗೊಂಡಿದೆ, ಚುನಾವಣೆ ಸಂದರ್ಭದಲ್ಲಿ ಅಲ್ಲಿಯವರು ಇಲ್ಲಿಗೆ, ಇಲ್ಲಿಯವರು ಅಲ್ಲಿಗೆ ಹೋಗುವುದು ಸಹಜ, ಕೆಲವೊಮ್ಮೆ ನಾವು ನಂಬಿದ್ದ ಸಿದ್ಧಾಂತಗಳಿಗೆ ರಾಜೀ ಅನಿವಾರ್ಯ, ಹಾಗೆಂದ ಮಾತ್ರಕ್ಕೆ ಸ್ವಾಭಿಮಾನ ಬಿಟ್ಟು ರಾಜಕಾರಣ ಮಾಡಲ್ಲ, ಅನಿವಾರ್ಯವಾದರೆ ಬಿಟ್ಟು ಮನೆಯಲ್ಲಿಯೇ ಇರುತ್ತದೆ ಎಂದು ಜೆ.ಸಿ.ಮಾಧುಸ್ವಾಮಿ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಜಾತಿಗಣತಿ ಅವೈಜ್ಞಾನಿಕ: ಸರಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸ್ವೀಕರಿಸಿರುವ ಆರ್ಥಿಕ, ಸಾಮಾಜಿಕ ಸಮೀಕ್ಷೆ (ಜಾತಿಗಣತಿ) ಅವೈಜ್ಞಾನಿಕವಾಗಿದೆ, ನಾವೆಲ್ಲರೂ ಮತಾಂತರಗೊಂಡ ಲಿಂಗಾಯಿತರು, ಮೂಲದಲ್ಲಿ ಯಾವುದೋ ಕಸುಬು ಮಾಡುತ್ತಾ ಜೀವನ ಮಾಡುತ್ತಿದ್ದವರು, ನೂರಾರು ವರ್ಷಗಳ ನಂತರ ನೀವು ಮೀಸಲಾತಿಗಾಗಿ ನಿಮ್ಮ ಮೂಲಕ ಜಾತಿಗೆ ಹೋಗಿ ಎನ್ನುವುದಾದರೆ ಹೇಗೆ ಸಾಧ್ಯ, ಅಲ್ಲದೆ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ದೂರುಗಳು ಸಾಕಷ್ಟಿವೆ, ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರ ಸಂಖ್ಯೆ ಹೆಚ್ಚಿದೆ, ಅದಕ್ಕಾಗಿಯೇ ನಮ್ಮ ಸರಕಾರವಿದ್ದಾಗ ಶೇ.18 ರಷ್ಟಿದ್ದ ಅವರ ಮೀಸಲಾತಿ ಪ್ರಮಾಣವನ್ನು ಶೇ.24ಕ್ಕೆ ಹೆಚ್ಚಳ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿತ್ತು ಎಂದರು.
ಈ ವೇಳೆ ಪಕ್ಷದ ಮುಖಂಡರಾದ ಎಂ.ಬಿ.ನಂದೀಶ್, ದಿಲೀಪ್, ಟಿ.ಆರ್.ಸದಾಶಿವಯ್ಯ, ರಂಗಾನಾಯಕ್ ಹಾಜರಿದ್ದರು.

Get real time updates directly on you device, subscribe now.

Comments are closed.

error: Content is protected !!