ಕುಣಿಗಲ್: ಕೊಬ್ಬರಿ ಖರೀದಿ ಕೇಂದ್ರದ ಅವ್ಯವಸ್ಥೆ ಬಗ್ಗೆ ರೈತರು ತೀವ್ರ ಅಸಮಧಾನ ವ್ಯಕ್ತಪಡಿಸಿ ಬೇರೆ ತಾಲೂಕಿನಿಂದ ನೋಂದಣಿಗೆ ಆಗಮಿಸಿದ್ದ ರೈತರೊಂದಿಗೆ ವಾಗ್ವಾದ ನಡೆಸಿದ ಕಾರಣ ಕೇಂದ್ರದ ಬಳಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಸೋಮವಾರದಿಂದ ರಾಜ್ಯ ಕೃಷಿ ಮಾರಾಟ ಮಂಡಳಿ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಉಂಡೆ ಕೊಬ್ಬರಿ ಖರೀದಿಗೆ ಕ್ರಮ ವಹಿಸಿದ್ದು ಪಟ್ಟಣ ಎಪಿಎಂಸಿ ಯಾರ್ಡ್ನಲ್ಲಿ ನೋಂದಣಿ ಕೇಂದ್ರ ಆರಂಭಿಸಿದೆ, ಕಳೆದ ಕೆಲ ತಿಂಗಳ ಹಿಂದೆಯೂ ಉಂಡೆ ಕೊಬ್ಬರಿ ಖರೀದಿಗೆ ಪ್ರಕ್ರಿಯೆ ನಡೆಸಿ 450ಕ್ಕೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದು ದಲ್ಲಾಳಿಗಳೆ ಹೆಚ್ಚು ನೋಂದಣಿ ಮಾಡಿಸಿ ಕೊಂಡಿದ್ದಾರೆಂದು ರಾಜ್ಯ ಸರ್ಕಾರ ಆ ಪ್ರಕ್ರಿಯೆ ರದ್ದುಗೊಳಿಸಿ ಸೋಮವಾರದಿಂದ ಹೊಸ ನೋಂದಣಿ ಪ್ರಕ್ರಿಯೆ ಆರಂಭಿಸಿತು. ಬೆಳಗ್ಗೆ ಎಂಟು ಗಂಟೆಗೆ ನೋಂದಣಿ ಆರಂಭವಾಗಿದ್ದು ತಾಲೂಕಿಗೆ ಒಂದೆ ಕೇಂದ್ರ ನೀಡಿದ್ದರಿಂದ ಭಾನುವಾರ ರಾತ್ರಿಯೇ ರೈತರು ನೋಂದಣಿ ಕೇಂದ್ರದ ಬಳಿ ಬಂದು ರಾತ್ರಿ ಇಡೀ ಅಲ್ಲೆ ಕಳೆದು ಸೋಮವಾರ ನೋಂದಣಿಗೆ ಕಾದು ನಿಂತರು, ಈ ವೇಳೆಯಲ್ಲಿ ತುರುವೇಕೆರೆ ತಾಲೂಕಿನ ಕೆಲ ರೈತರು ನೋಂದಣಿಗೆ ಆಗಮಿಸಿದಾಗ, ಸ್ಥಳೀಯರು ಇದಕ್ಕೆ ಆಕ್ಷೇಪಿಸಿ ನಿಮ್ಮ ತಾಲೂಕಿನಲ್ಲೆ ನೋಂದಾಯಿಸಿ ಎಂದು ಪಟ್ಟು ಹಿಡಿದರು, ಇದರಿಂದ ಎರಡೂ ಕಡೆ ವಾದ ವಿವಾದ ಏರ್ಪಟ್ಟು ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ತಿಳಿಗೊಳಿಸಿ ಬೇರೆ ತಾಲೂಕಿನ ರೈತರನ್ನು ಕಳಿಸಿದರು.
ಬೆ.8 ಗಂಟೆಗೆ ಕೇಂದ್ರ ಆರಂಭವಾದರೂ ಸರ್ವರ್ ಸಮಸ್ಯೆಯಿಂದಾಗಿ ಒಂಭತ್ತುವರೆ ಗಂಟೆಗೆ ನೋಂದಣಿ ಆರಂಭವಾಯಿತು, ಇದಕ್ಕೆ ಆಕ್ಷೇಪಿಸಿ ಇಲಾಖೆಯ ಹಿರಿಯಾಧಿಕಾರಿಗಳನ್ನು ದೂರವಾಣಿ ಮೂಲಕ ರೈತರು ತರಾಟೆಗೆ ತೆಗೆದುಕೊಂಡರು, ಒಬ್ಬರ ನೋಂದಣಿಗೆ ಇಪ್ಪತ್ತು ನಿಮಿಷ ಬೇಕಾದ ಕಾರಣ ಇತರೆ ರೈತರು ಟೋಕನ್ ನೀಡುವಂತೆ ಆಗ್ರಹಿಸಿ ನೋಂದಣಿ ಕೇಂದ್ರದ ಅಧಿಕಾರಿ ರಾಜೀವ್ ನಾಯ್ಕ್ ಹಾಗೂ ಎಪಿಎಂಸಿ ಕಾರ್ಯದರ್ಶಿ ಉಷಾ ಅವರೊಂದಿಗೆ ವಾಗ್ವಾದ ನಡೆಸಿದರು, ಕೆಲಕಾಲ ವಾದ ವಿವಾದ ನಂತರ ಅಧಿಕಾರಿಗಳು ರೈತರ ಫ್ರೂಟ್ ಐಡಿಗೆ ಟೋಕನ್ ನೀಡುವುದಾಗಿ ಹೇಳಿದ ಮೇರೆಗೆ ಪರಿಸ್ಥಿತಿ ತಿಳಿಗೊಂಡಿತು. ಅಮೃತೂರಿನ ರೈತ ರಾಮಣ್ಣ ಮಾತನಾಡಿ, ತಾಲೂಕಿನಲ್ಲಿ ಸಾಕಷ್ಟು ಕೊಬ್ಬರಿ ಬೆಳೆಯುತ್ತಾರೆ, ಆದರೆ ಸರ್ಕಾರ ಒಂದೆ ಕಡೆ ನೋಂದಣಿ ಕೇಂದ್ರ ಆರಂಭಿಸಿದೆ, ತುರುವೇಕೆರೆ ತಾಲೂಕಿನಲ್ಲಿ ಏಳು ನೋಂದಣಿ ಕೇಂದ್ರ ಇದ್ದು ತಾಲೂಕಿನಲ್ಲಿ ಒಂದೆ ಕೇಂದ್ರ ಆರಂಭಿಸಿದ್ದಾರೆ, ಇದು ನಮ್ಮ ತಾಲೂಕಿನ ಜನಪ್ರತಿನಿಧಿಯ ಇಚ್ಚಾಶಕ್ತಿ ತೋರಿಸುತ್ತದೆ, ತಾಲೂಕಿನ ರೈತರ ಭಾವನೆಗಳನ್ನು ಗೌರವಿಸಿ ತುರ್ತಾಗಿ ಇನ್ನು ಎರಡು ನೋಂದಣಿ ಕೇಂದ್ರ ಆರಂಭಿಸಬೇಕು ಹಾಗೂ ಯಾವುದೇ ಮಿತಿ ಇಡದೆ ರೈತರಿಂದ ಕೊಬ್ಬರಿ ಖರೀದಿ ಮಾಡಬೇಕು ಎಂದು ಆಗ್ರಹಿಸಿದರು.
Comments are closed.