ಹುಳಿಯಾರು: ನಾಫೆಡ್ ಮೂಲಕ ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿ ಎರಡು ದಿನ ಕಳೆದಿದ್ದರೂ ಕೊಬ್ಬರಿ ಬೆಳೆಗಾರರು ನೋಂದಣಿ ಮಾಡಿಸಲು ಹಗಲು ರಾತ್ರಿ ಎನ್ನದೆ ಎಪಿಎಂಸಿ ಬಳಿ ಠಿಕಾಣಿ ಹೂಡುತ್ತಿರುವ ಘಟನೆ ಬುಧವಾರ ಸಹ ಮುಂದುವರಿದಿದ್ದು ನೋಂದಣಿ ಮಾಡಿಸಲು ಹರಸಾಹಸ ಪಡುತ್ತಿದ್ದಾರೆ.
ಸೋಮವಾರ ನೋಂದಣಿ ಆರಂಭವಾಗಿದ್ದರೂ ಭಾನುವಾರ ರಾತ್ರಿಯೇ ತಮ್ಮ ಬ್ಯಾಗು, ಚಪ್ಪಲಿ, ಗೋಣಿಚೀಲ ಸರತಿಯಲ್ಲಿ ಇಟ್ಟು ಅಲ್ಲಿಯೇ ನಿದ್ದೆ ಮಾಡಿ ನೋಂದಣಿಗಾಗಿ ಕಾದರು, ಇದು ಸೋಮವಾರ ರಾತ್ರಿ ಹಾಗೂ ಮಂಗಳವಾರ ರಾತ್ರಿ ಮುಂದುವರೆದಿದ್ದು ಸರತಿ ಸಾಲು ಕರುಗುವ ಲಕ್ಷಣ ಕಾಣುತ್ತಿಲ್ಲ.
ಮಹಿಳೆಯರು ಮುಂಜಾನೆಯೇ ಬಂದು ಸರತಿಯಲ್ಲಿ ನಿಲ್ಲುತ್ತಿದ್ದಾರೆ, ಆದರೆ ಎಪಿಎಂಸಿಯಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲದೆ ಶೌಚಕ್ಕೆ ಪರದಾಡುತ್ತಿದ್ದಾರೆ, ಮನೆಯಲ್ಲಿರುವ ಮಕ್ಕಳನ್ನು ಕರೆಸಿ ಸಾಲಿನಲ್ಲಿ ನಿಲ್ಲಿಸಿ ಮನೆಗೆ ಹೋಗಿ ಬರುತ್ತಿದ್ದಾರೆ, ನೀರು ಕುಡಿಯಲು ಹೋದರೆ ಸೀನಿಯಾರಿಟಿ ಹೋಗುತ್ತದೆಂದು ಅವರಿವರನ್ನು ಕಾಡಿಬೇಡಿ ನೀರು ತರಿಸಿಕೊಂಡು ಕುಡಿಯುತ್ತಿದ್ದಾರೆ.
ಇನ್ನು ವೃದ್ಧರು ಸಹ ಸರತಿ ಸಾಲಿನಲ್ಲಿ ನಿಂತು ತಮ್ಮ ನೋಂದಣಿ ಬಂದಾಗ ಬಯೋಮೆಟ್ರಿಕ್ ಬಾರದೆ ಬೇಸರದಿಂದ ಹಿಂದಿರುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ, ಎಫ್ಐಡಿಯಲ್ಲಿ ಕೊಬ್ಬರಿ ದಾಖಲಾಗಿರುವ ಪ್ರಮಾಣ ತಿಳಿಯದೆ ಎರಡ್ಮೂರು ದಿನ ಸರತಿ ಸಾಲಿನಲ್ಲಿ ನಿಂತು ನೋಂದಣಿಯಾದಾಗ ಕೇವಲ ಮೂರು ನಾಲ್ಕು ಚೀಲ ಮಾತ್ರ ಮಾರಲು ಅರ್ಹತೆ ಬಂದು ಇಷ್ಟಕ್ಕೆ ಇಷ್ಟೊಂದು ವನವಾಸ ಪಡಬೇಕಿತ್ತೆ ಎಂದು ಹಿಡಿಶಾಪ ಹಾಕಿ ಹೋಗುತ್ತಿದ್ದ ದೃಶ್ಯ ಸಹ ಕಾಣಸಿಗುತ್ತಿವೆ.
ಸರ್ಕಾರ ಖರೀದಿ ಮಿತಿ ನಿರ್ಧರಿಸಿದ್ದು ತುಮಕೂರು, ತಿಪಟೂರು, ತುರುವೇಕೆರೆಯಲ್ಲಿ ಹೆಚ್ಚು ನೋಂದಣಿ ಆಗುತ್ತಿರುವುದರಿಂದ ಯಾವ ಕ್ಷಣದಲ್ಲಿ ಕೊನೆಯಾಗುತ್ತದೆಯೋ ಎಂಬ ಆತಂಕ ಈ ಭಾಗದ ರೈತರದಾಗಿದ್ದು ಕೊಬ್ಬರಿ ನೋಂದಣಿ ಮಾಡಿಸಿ ನಿಟ್ಟುಸಿರು ಬಿಡುತ್ತಿದ್ದಾರೆ, ನೋಂದಣಿ ಕೇಂದ್ರದಲ್ಲಿ ಸರ್ವರ್ ಸಮಸ್ಯೆ, ಪಕ್ಷಪಾತ, ನಿಧಾನಗತಿ ಎನ್ನುವ ಯಾವುದೇ ಆರೋಪವಿಲ್ಲದೆ ನಡೆಯುತ್ತಿದೆ
Comments are closed.