ಕೊರಟಗೆರೆ: ರಸ್ತೆ ಬದಿಯ ಅಂಗಡಿಗಳ ಮುಂದೆ ಕುಳಿತ್ತಿದ್ದ 15 ಜನರ ಮೇಲೆ ಹುಚ್ಚುನಾಯಿ ದಿಢೀರ್ ದಾಳಿ ಮಾಡಿದ್ದು, ನಾಯಿಯ ಆರ್ಭಟಕ್ಕೆ ಕೊರಟಗೆರೆ ಪಟ್ಟಣದ ಜನತೆ ಬೆಚ್ಚಿಬಿದ್ದಿದ್ದಾರೆ.
ಗುರುವಾರ ಕೊರಟಗೆರೆ ಪಟ್ಟಣದ 1, 2, 3 ಮತ್ತು 9ನೇ ವಾರ್ಡ್ ನಲ್ಲಿ ಹುಚ್ಚುನಾಯಿ ಕಂಡ ಕಂಡವರ ಮೇಲೆ ಅಟ್ಟಾಡಿಸಿಕೊಂಡು ದಾಳಿ ನಡೆಸಿ ಹಲವರಿಗೆ ಸಿಕ್ಕಸಿಕ್ಕ ಕಡೆಯೆಲ್ಲ ಗಾಯ ಮಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿದೆ.
ನಾಯಿ ದಾಳಿಯಿಂದ ನರಸಪ್ಪ, ರಾಜಶೇಖರ್, ವೆಂಕಟೇಶ್, ನರಸಯ್ಯ, ಪ್ರಕಾಶ್, ನಾಗರಾಜು, ಮಾನಸ, ವೀರಭದ್ರಯ್ಯನಿಗೆ ಗಾಯಗಳಾಗಿ ಕೊರಟಗೆರೆ ಮತ್ತು ತುಮಕೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 15 ಜನರ ಮೇಲೆ ದಾಳಿ ಮಾಡಿದ ಹುಚ್ಚು ನಾಯಿಯನ್ನು ಪಪಂ ಆರೋಗ್ಯ ಇಲಾಖೆ ತಮ್ಮ ವಶಕ್ಕೆ ಪಡೆದಿದ್ದಾರೆ.
ಕೊರಟಗೆರೆ ಪಟ್ಟಣದ 15 ವಾರ್ಡ್ ನ ಬೀದಿ ಬೀದಿಯಲ್ಲಿ ನಾಯಿಗಳ ಹಾವಳಿ ಹೆಚ್ಚಾಗಿದೆ, ಸಾರ್ವಜನಿಕರು ಹತ್ತಾರು ಸಲ ದೂರು ನೀಡಿದರೂ ಪಶು, ಆರೋಗ್ಯಅಥವಾ ಪಪಂ ಕ್ರಮ ಕೈಗೊಳ್ಳುವಲ್ಲಿ ಸಂಪೂರ್ಣ ವಿಫಲವಾಗಿದೆ, ನಾಯಿಗಳ ಹಾವಳಿ ತಪ್ಪಿಸುವಂತೆ ಪಟ್ಟಣದ ಜನತೆ ತುಮಕೂರು ಜಿಲ್ಲಾಧಿಕಾರಿಗೆ ಆಗ್ರಹ ಮಾಡಿದ್ದಾರೆ.
400ಕ್ಕೂ ಅಧಿಕ ಬೀದಿನಾಯಿ..
ಕೊರಟಗೆರೆ ಪಟ್ಟಣದ 15 ವಾರ್ಡ್ನಲ್ಲಿ 450ಕ್ಕೂ ಅಧಿಕ ಬೀದಿ ನಾಯಿಗಳಿವೆ, ಮಟನ್ ಮಾರ್ಕೆಟ್, ರೇಣುಕಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ, ಅಂಚೆ ಕಚೇರಿ, ಕದಂಬ ಬಾರ್, ಕಾಳಿದಾಸ ಶಾಲೆ, ಊರ್ಡಿಗೆರೆ ಕ್ರಾಸ್, ಕಾಲೇಜು ಮೈದಾನದಲ್ಲಿ ಹಿಂಡು ಹಿಂಡಾಗಿ ನಾಯಿಗಳ ಆರ್ಭಟ ಹೆಚ್ಚಾಗಿವೆ, ನಾಯಿಗಳ ನಿಯಂತ್ರಣ ಮಾಡುವಲ್ಲಿ ಕೊರಟಗೆರೆ ಪಪಂ ಸಂಪೂರ್ಣ ವಿಫಲವಾಗಿದೆ.
ಜನರ ಕರೆಗೆ ಸೀಗದ ತುರ್ತುವಾಹನ
ಹುಚ್ಚು ನಾಯಿ ದಾಳಿಯಿಂದ ತೀವ್ರ ಗಾಯಗೊಂಡ ವೃದ್ಧರನ್ನು ಕೊರಟಗೆರೆ ಆಸ್ಪತ್ರೆಯಿಂದ ತುಮಕೂರಿಗೆ ರವಾನಿಸಲು ತುರ್ತು ವಾಹನ ಸೀಗದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು, ತುರ್ತು ವಾಹನಕ್ಕೆ ಕರೆ ಮಾಡಿ 15 ನಿಮಿಷ ಕಾದರು ಗ್ರಾಹಕ ಕೇಂದ್ರದ ಸಿಬ್ಬಂದಿ ವರ್ಗ ತಡೆ ಹಿಡಿದು ತುರ್ತು ವಾಹನ ಕಳಿಸದೆ ಗಾಯಾಳುಗಳಿಗೆ ಉಡಾಫೆ ಉತ್ತರ ನೀಡಿರುವ ಘಟನೆ ನಡೆದಿದೆ.
ಬೀದಿನಾಯಿ ಜನರ ಮೇಲೆ ಏಕಾಏಕಿ ದಾಳಿ ಮಾಡಿದೆ, ಕೊರಟಗೆರೆ ಪಟ್ಟಣದಲ್ಲಿ ಬೀದಿ ನಾಯಿಗಳ ಸಂತಾನೋತ್ಪತ್ತಿ ತಡೆಯಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ, ಹೊಸದಾಗಿ ಬೀದಿ ನಾಯಿಗಳ ಅಂಕಿ ಅಂಶದ ಸರ್ವೆ ನಡೆಸಬೇಕಿದೆ, ಪಪಂ ಮತ್ತು ಪಶು ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನಾಯಿ ದಾಳಿ ತಡೆಯುತ್ತೇವೆ.
-ಮೊಹಮ್ಮದ್ ಹುಸೇನ್, ಆರೋಗ್ಯಾಧಿಕಾರಿ, ಪಪಂ, ಕೊರಟಗೆರೆ.
Comments are closed.